ಮರಾಠ ಸಮುದಾಯಕ್ಕೆ ಮೀಸಲಾತಿ; ವಿಸ್ತೃತ ಪೀಠಕ್ಕೆ ಪ್ರಕರಣ; ಸಧ್ಯಕ್ಕಿಲ್ಲ ಮರಾಠಿಗರಿಗೆ ಮೀಸಲಾತಿ!

ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸುವ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಾಯಿದೆ (ಎಸ್‌ಇಬಿಸಿ)ಯನ್ನು ಪ್ರಶ್ನಿಸಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು  ನಡೆಸಿದ ಸುಪ್ರೀಂ ಕೋರ್ಟ್ ವಿಸ್ತೃತ ಪೀಠಕ್ಕೆ ಒಪ್ಪಿಸಲು ಶಿಫಾರಸ್ಸು ಮಾಡಿದೆ.

ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್, ಹೇಮಂತ್ ಗುಪ್ತಾ ಮತ್ತು ಎಸ್ ರವೀಂದ್ರ ಭಟ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಆದೇಶ ನೀಡಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೂ ಉದ್ಯೋಗ ಮತ್ತು ಶಿಕ್ಷಣ ಪ್ರವೇಶಾತಿಯಲ್ಲಿ ಮೀಸಲಾತಿ ನೀಡುವಂತಿಲ್ಲ ಎಂದು ಹೇಳಿದೆ. ಅಲ್ಲದೆ, ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ಮುಂದಿರಿಸಲಿದ್ದು, ಅವರು ವಿಸ್ತೃತ ಪೀಠ ರಚಿಸಲಿದ್ದಾರೆ ಎಂದು ಹೇಳಿದೆ.

ಎಸ್‌ಇಬಿಸಿ ಕಾಯಿದೆಯು ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುತ್ತದೆ. ಅಲ್ಲದೆ, ಈ ಕಾಯಿದೆಯು ಮೀಸಲಾತಿಗೆ ನಿಗದಿಗೊಳಿಸಿರುವ ಶೇ.50 ಗರಿಷ್ಠ ಮಿತಿಯನ್ನು ಉಲ್ಲಂಘಿಸಿದಂತಾಗುತ್ತದೆ ಎಂಬ ಪ್ರಾಥಮಿಕ ವಿಚಾರದ ಆಧಾರದಲ್ಲಿ ಕಾಯಿದೆಯನ್ನು ಪ್ರಶ್ನಿಸಲಾಗಿದೆ.

ಜನಸಂಖ್ಯಾ ಪ್ರಮಾಣದಲ್ಲಿ ಬದಲಾವಣೆಯಾಗಿರುವುದರಿಂದ ಮೀಸಲಾತಿಗೆ ವಿಧಿಸಲಾಗಿರುವ ಗರಿಷ್ಠ ಮಿತಿಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಎಸ್‌ಇಬಿಸಿ ಕಾಯಿದೆಗೆ ಬೆಂಬಲ ವ್ಯಕ್ತಪಡಿಸಿರುವ ಹಿರಿಯ ನ್ಯಾಯವಾದಿಗಳು ವಾದಿಸಿದ್ದಾರೆ. ಇಂದಿರಾ ಸಹಾನಿ ಪ್ರಕರಣದಲ್ಲಿ 9 ನ್ಯಾಯಮೂರ್ತಿಗಳ ಪೀಠ ತೀರ್ಪು ಪ್ರಕಟಿಸಿರುವುದರಿಂದ ಸದರಿ ಪ್ರಕರಣದ ವಿಚಾರಣೆಯನ್ನು 11 ನ್ಯಾಯಮೂರ್ತಿಗಳ ಪೀಠ ನಡೆಸಬೇಕು ಎಂದು ಮಹಾರಾಷ್ಟ್ರ ಸರ್ಕಾರ ಪರ ವಕೀಲ ಮುಖುಕ್‌ ರೊಹಟ್ಲಿ ಸಲಹೆ ನೀಡಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲುಎಸ್) ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದ ಬಳಿಕ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಮೀಸಲಾತಿಯ ಶೇ.50 ಗರಿಷ್ಠ ಮಿತಿಯನ್ನು ಉಲ್ಲಂಘಿಸಲಾಗಿದೆ ಎಂದು ರೊಹಟ್ಲಿ ಹೇಳಿದ್ದಾರೆ.

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮರಾಠಾ ಸಮುದಾಯ ಹಿಂದುಳಿದಿಲ್ಲವಾದುದರಿಂದ ಮೊದಲಿಗೆ ಅದು ಮೀಸಲಾತಿ ಪಡೆಯಲು ಅರ್ಹವಲ್ಲ. ಇದರಿಂದ ಶೇ. 50 ಮೀಸಲಾತಿ ಉಲ್ಲಂಘಿಸಲಾಗುತ್ತದೆ ಎಂಬ ಪ್ರಶ್ನೆಯೇ ಅನೂರ್ಜಿತವಾಗುತ್ತದೆ. ಆದ್ದರಿಂದ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಹಿರಿಯ ವಕೀಲರಾದ ಅರವಿಂದ ದಾತಾರ್ ಮತ್ತು ಗೋಪಾಲ್ ಶಂಕರನಾರಾಯಣನ್ ಅವರು ವಾದಿಸಿದರು.

ವಾದ ಮತ್ತು ಪ್ರತಿವಾದಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್‌ ತ್ರಿಸದನ ಪೀಠ, ಪ್ರಕರಣದ ವಿಚಾರಣೆಯನ್ನು ವಿಸ್ತೃತ ನ್ಯಾಯಪೀಠಕ್ಕೆ ಶಿಫಾರಸ್ಸು ಮಾಡಿದೆ.


ಇದನ್ನೂ ಓದಿ: ನ್ಯಾಷನಲ್‌ ಲಾ ಸ್ಕೂಲ್‌ನಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25 ಮೀಸಲಾತಿ: ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ ತಡೆ

Spread the love

Leave a Reply

Your email address will not be published. Required fields are marked *