FACT CHECK | ಕರ್ನಾಟಕದಲ್ಲಿ ಪೊಲೀಸ್‌ಗೆ ಚಪ್ಪಲಿಯಿಂದ ಹೊಡೆದ ಮುಸ್ಲಿಂ ಮಹಿಳೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಗುಂಪೊಂದು ಪೊಲೀಸರ ಮೇಲೆ ಹಲ್ಲೆ ಮಾಡುತ್ತಿರುವ 25 ಸೆಕೆಂಡುಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಮಹಿಳೆಯೊಬ್ಬರು ಪೊಲೀಸರಿಗೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯಗಳನ್ನು ನೋಡಬಹುದು. ಚಲನ್ ನೀಡಿದ ಕಾರಣಕ್ಕೆ ಕರ್ನಾಟಕದಲ್ಲಿ ಮುಸ್ಲಿಮರು ಪೊಲೀಸರನ್ನು ಥಳಿಸಿದ್ದಾರೆಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಅಕ್ಟೋಬರ್ 1, 2024 ರಂದು ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಕರ್ನಾಟಕದಿಂದ ಬಂದಿರುವ ಸುದ್ದಿ! ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಪೊಲೀಸರು ಮುಸ್ಲಿಮರಿಗೆ ಚಲನ್ ನೀಡಿದಾಗ ಥಳಿಸಿದ್ದಾರೆ. ಇದು ಕಾನೂನಿಗೆ ನೇರ ಸವಾಲು. ಭವಿಷ್ಯದಲ್ಲಿ ಭಾರತದಲ್ಲಿ ಏನಾಗುತ್ತದೆ, ದೇಶವನ್ನು ಯಾರು ನಡೆಸುತ್ತಾರೆ ಮತ್ತು ಪ್ರತಿಯೊಬ್ಬರ ಭವಿಷ್ಯ ಏನಾಗಬಹುದು ಎಂಬುದನ್ನು ಈ ವೀಡಿಯೊ ಹೇಳುತ್ತದೆ. ಕಹಿ ಸತ್ಯವೆಂದರೆ ದೇಶವು ಹೊರಗಿನಿಂದ ಹೆಚ್ಚು ಅಪಾಯವನ್ನು ಎದುರಿಸುತ್ತಿದೆ.’’ ಎಂಬ ಬರಹದೊಂದಿಗೆ ಪೋಸ್ಟ್‌ ಮಾಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ವಿಡಿಯೋ ಪೋಸ್ಟ್‌ ಮಾಡಿರುವ ಟ್ವೀಟ್‌ಅನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಹಾಗಿದ್ದರೆ ಈ ಘಟನೆ ಕರ್ನಾಟಕದಲ್ಲಿ ನಡೆದಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ವೈರಲ್ ವಿಡಿಯೋ ಹಲವು ವರ್ಷಗಳಿಂದಲೂ ಇಂಟರ್‌ನೆಟ್‌ನಲ್ಲಿ ಬೇರೆ ಬೇರೆ ಪ್ರದೇಶಗಳ ಹೆಸರಿನಲ್ಲಿ ಪ್ರಸಾರವಾಗುತ್ತಿರುವ ಮಾಹಿತಿ ಲಭ್ಯವಾಗಿದೆ.

ಜನವರಿ 21, 2021 ರಂದು, ಎಕ್ಸ್ ಬಳಕೆದಾರರೊಬ್ಬರು ಇದು ಬರೇಲಿಯಲ್ಲಿ ನಡೆದ ಘಟನೆ ಎಂದು ಹೇಳಿರುವ ಪೋಸ್ಟ್ ಲಭ್ಯವಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಬರೇಲಿ ಪೊಲೀಸರು ಇದು ಗಾಜಿಯಾಬಾದ್‌ನ ಎರಡು ವರ್ಷಗಳ ಹಳೆಯ ವಿಡಿಯೋ ಎಂದು ಪ್ರತಿಕ್ರಿಯೆ ನೀಡಿರುವುದನ್ನು ಕಾಣಬಹುದು.

ಈ ವಿಡಿಯೋ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯಲು ಸರ್ಚ್ ಮಾಡಿದಾಗ, 27 ಆಗಸ್ಟ್ 2018 ರಂದು ಘಾಜಿಯಾಬಾದ್ ಪೊಲೀಸರ ಎಕ್ಸ್ ಹ್ಯಾಂಡಲ್‌ನಿಂದ ಅಪ್‌ಲೋಡ್ ಮಾಡಿರುವ ಮಾಹಿತಿ ಲಭ್ಯವಾಗಿದ್ದು, ಆಗಿನ ಎಸ್‌ಎಸ್‌ಪಿ ವೈಭವ್ ಕೃಷ್ಣ ಅವರ ವಿಡಿಯೋ ಹೇಳಿಕೆಯನ್ನು ಪೋಸ್ಟ್‌ ವಿಡಿಯೋದಲ್ಲಿ ನೋಡಬಹುದು.

‘‘ಈ ಘಟನೆ ಲೋಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿಸಿದ್ದಾರೆ. ವಿಡಿಯೋದಲ್ಲಿ ಮಹಿಳೆ ಮತ್ತು ಇತರರು ಪೊಲೀಸರಿಗೆ ಥಳಿಸುತ್ತಿರುವುದು ಕಂಡು ಬಂದಿದೆ. ಬ್ಯಾಂಕ್​ನಲ್ಲಿ ಜಗಳ ನಡೆದ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅಲ್ಲಿಗೆ ಬಂದ ಪೊಲೀಸರಿಗೆ ಥಳಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದ’’ ಎಂದು ಕೃಷ್ಟ ಅವರು ಹೇಳಿದ್ದಾರೆ.

ಪೊಲೀಸರ ಮಾಹಿತಿ ಆಧಾರದಲ್ಲಿ ಕೀವರ್ಡ್ ಸಹಾದಿಂದ ಗೂಗಲ್ ಸರ್ಚ್ ಮಾಡಿದಾಗ, ಆಗಸ್ಟ್ 27, 2018 ರಂದು ದೈನಿಕ್ ಜಾಗರಣ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದ ಲಭ್ಯವಾಗಿದೆ.

‘‘ಬಲರಾಮ್ ನಗರ ಕಾಲೋನಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೊರಗೆ ಮಹಿಳೆ ಮತ್ತು ಆಕೆಯ ಸಹಚರರು ಪೊಲೀಸ್ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಬ್ಯಾಂಕ್​​ನಲ್ಲಿ ಆಧಾರ್ ಕಾರ್ಡ್ ಮಾಡಿಸುವ ವಿಚಾರದಲ್ಲಿ ಯುವಕ ಹಾಗೂ ಬ್ಯಾಂಕ್ ಉದ್ಯೋಗಿಗಳ ನಡುವೆ ಜಗಳ ನಡೆದಿದೆ. ಇದಾದ ನಂತರ ಯುವಕ ತನ್ನ ಸಂಬಂಧಿಕರಿಗೆ ಕರೆ ಮಾಡಿ ಪೊಲೀಸರೊಂದಿಗೆ ಜಗಳವಾಡಿದ್ದಾನೆ. ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಅರುಣ್ ಕುಮಾರ್ ಬಕ್ಷಿ ಅವರ ದೂರಿನ ಮೇರೆಗೆ ಪೊಲೀಸರು ವರದಿ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳ ಶೋಧ ನಡೆಯುತ್ತಿದೆ’’ ಎಂದು ಸುದ್ದಿಯಲ್ಲಿದೆ.

ವಾಸ್ತವವಾಗಿ ಈ ವಿಡಿಯೋಗೂ ಕರ್ನಾಟಕಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. 2018 ರ ಗಾಜಿಯಾಬಾದ್‌ನಲ್ಲಿ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವಿವಾದದಲ್ಲಿ ಕೆಲವರು ಪೊಲೀಸರಿಗೆ ಥಳಿಸಿದ ಘಟನೆಯನ್ನು ಕರ್ನಾಟಕದ ಮುಸ್ಲಿಮರು ಪೊಲೀಸರಿಗೆ ಥಳಿಸಿದ್ದಾರೆ ಎಂದು ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡು ತಪ್ಪಾಗಿ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಹಿಮಾಚಲ ಪ್ರದೇಶ ಶಿವಲಿಂಗವನ್ನು ಧ್ವಂಸ ಮಾಡಿದ್ದು ಮುಸ್ಲಿಮರಲ್ಲ? ಮತ್ತ್ಯಾರು ಗೊತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights