ಚಲಿಸುತ್ತಿದ್ದ ರೈಲಿನಲ್ಲಿ ಯುವತಿ ಮೇಲೆ ಅತ್ಯಾಚಾರ? ಸಂತ್ರಸ್ಥೆಯನ್ನು ರೈಲಿನಿಂದ ಹೊರಕ್ಕೆಸೆದಿರುವ ಶಂಕೆ!
ಮಹಾರಾಷ್ಟ್ರದ ನವೀ ಮುಂಬೈ ಬಳಿಯ ವಾಶಿ ರೈಲ್ವೆ ಸೇತುವೆಯ ಮೇಲೆ ತಲೆಗೆ ತೀವ್ರವಾಗಿ ಪೆಟ್ಟಾದ 25 ಯುವತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿ, ರೈಲಿನಿಂದ ಹೊರಕ್ಕೆ ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಯುವತಿಗೆ ಗಾಯಗಳಾಗಿದ್ದರಿಂದ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸಂತ್ರಸ್ತೆ ಥಾಣೆ ಜಿಲ್ಲೆಯ ಟಿಟ್ವಾಲಾದ ನಿವಾಸಿಯಾಗಿದ್ದು, ಮುಂಬೈನ ಪೊವಾಯ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಕೆ ವಾರಕ್ಕೆ ಒಂದು ಬಾರಿ ಮಾತ್ರ ತನ್ನ ನಿವಾಸಕ್ಕೆ ಹೋಗುತ್ತಿದ್ದರು” ಎಂದು ತನಿಖೆಯ ಸಮಯದಲ್ಲಿ ತಿಳಿದು ಬಂದಿರುವುದಾಗಿ ಅವರು ಹೇಳಿದರು.
“ಆಕೆ ಕಳೆದ ಭಾನುವಾರ ಮನೆಗೆ ಬಂದಿದ್ದರು, ಮರುದಿನ ಕೆಲಸಕ್ಕೆ ಮರಳಿದ್ದರು. ಮಂಗಳವಾರ, ಅವರು ಹಳಿಗಳ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕಿದ್ದಾರೆ” ಎಂದು ಅಧಿಕಾರಿ ಹೇಳಿದರು.
ಆಕೆಗೆ ವಾಶಿಯ ನವೀ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಎಂಎಂಸಿ) ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ, ಆಕೆಯನ್ನು ಮುಂಬೈನ ಜೆ ಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಯುವತಿಗೆ ದೇಹದ ಮೇಲೆ ಆಗಿರುವ ಗಾಯಗಳು ಆಕೆಯನ್ನು ಯಾರೋ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಸೂಚಿಸುತ್ತದೆ. ಹಾಗಾಗಿ, ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರೈಮಾ ಫೇಸಿ ಪ್ರಕಾರ ಆಕೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಗಿದ್ದು, ಅದರಂತೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ)ನ್ನು ಸಹ ಪ್ರಕರಣದಲ್ಲಿ ಸೇರಿಸಲಾಗಿದೆ.
ಲೈಂಗಿಕ ದೌರ್ಜನ್ಯದ ನಂತರ ಯುವತಿಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
“ಮಹಿಳೆ ಮಾತನಾಡುವ ಸ್ಥಿತಿಯಲ್ಲಿಲ್ಲದ ಕಾರಣ, ಇನ್ನೂ ಅವರ ಹೇಳಿಕೆಯನ್ನು ದಾಖಲಿಸಲಾಗಿಲ್ಲ. ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ಅಧಿಕಾರಿ ಹೇಳಿದರು.
ಅವರ ವಿಧಿವಿಜ್ಞಾನ ಮತ್ತು ವೈದ್ಯಕೀಯ ವರದಿಗಳು ಕಾಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಚಾಕಲೇಟ್ ಕೊಟ್ಟು ಅತ್ಯಾಚಾರ : ಮರವೇರಿ ಕುಳಿತವನನ್ನು ಹೊಡೆದು ಕೊಂದ ಜನ…