ಜಾತ್ರೆ-ಎಲೆಕ್ಷನ್‌ ಓಕೆ: ನ್ಯೂ ಇಯರ್‌ ಬೇಡ: ಅನ್ಯಧರ್ಮೀಯ ಸಂಭ್ರಮಕ್ಕೆ ಬ್ರೇಕ್‌ ಹಾಕುತ್ತಿದೆ BJP ಸರ್ಕಾರ!

ಕೊರೊನಾ ಸೋಂಕಿನ ಹಾವಳಿಯ ನಡುವೆ ಹೊಸ ವರ್ಷ ಆರಂಭವಾಗಲಿದೆ. ಹೊಸ ವರ್ಷವನ್ನು ಸಂಭ್ರಮ-ಸಡಗರದಿಂದ ಸ್ವಾಗತಿಲು ಸಜ್ಜಾಗಿದ್ದ ಜನರ ಆಸೆಗೆ ಸರ್ಕಾರ ತಣ್ಣೀರು ಎರಚಿದ್ದು, ಜನರಿಗೆ ನಿರಾಸೆ ತರಿಸಿದೆ.

ಹೊಸ ವರ್ಷಾಚರಣೆಯ ಮೋಜು-ಮಸ್ತಿಗೆ ಕಡಿವಾಣ ಹಾಕಲು ಡಿಸೆಂಬರ್ 31ರ ಸಂಜೆಯಿಂದ ಮಾರನೆಯ ದಿನ ಬೆಳಗ್ಗೆವರೆಗೆ ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಹೇರಲಾಗಿದೆ.

ಸಾರ್ವಜನಿಕವಾಗಿ ವರ್ಷಾಚರಣೆ ನಡೆಸುವಂತಿಲ್ಲ. ಬೆಂಗಳೂರಿನ ಹೊರ ಭಾಗದಲ್ಲಿಯೂ ಹೊಸವರ್ಷಕ್ಕೆ ನಿರ್ಬಂಧವಿದೆ. ಮನೆಗಳಲ್ಲಿ ಆಚರಿಸಿಕೊಳ್ಳಬಹುದು. ಬಾರ್, ಪಬ್, ಕ್ಲಬ್‌ಗಳನ್ನು ಬಂದ್ ಮಾಡಬೇಕು. ಡ್ಯಾನ್ಸ್, ಮ್ಯೂಸಿಕ್ ಗೆ ಅವಕಾಶ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ.

ಬೆಂಗಳೂರಿನಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಹಾಗಾಗಿ ಜನ ಎಚ್ಚರಿಕೆಯಿಂದ ಇರಬೇಕು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಇದೇ ರೀತಿಯಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿಯೂ ನಾನಾ ನಿರ್ಬಂಧಗಳನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ. ಜನ ಹೆಚ್ಚಾಗಿ ಗುಂಪುಗೂಡಬಹುದಾದ ಸ್ಥಳಗಳನ್ನು ಗುರುತಿಸಿ ಅಲ್ಲಿ ನಿರ್ಬಂಧ ಹೇರುವ ಅಧಿಖಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ.

ಅದರಂತೆಯೇ ನಾನಾ ಪ್ರವಾಸಿ ತಾಣಗಳು ಪ್ರವಾಸಿಗರ ಪಾಲಿಗೆ ಬಾಗಿಲು ಬಂದ್ ಮಾಡಲಿವೆ.

ಸರ್ಕಾರದ ಈ ನಿಲುವಿಗೆ ಸಾಮಾಜಿಕ ಜಾಲತಾಣದಲ್ಲಿಯೂ ಸೇರಿದಂತೆ ಹಲವಾರು ಜನರು ವಿರೋಧ ವ್ಯಕ್ತ ಪಡಿಸಿದ್ದಾರೆ. ಗುಂಪು ಕಟ್ಟಿಕೊಂಡು ಚುನಾವಣಾ ಕ್ಯಾಂಪೇನ್‌ ಮಾಡುವಾಗ, ರಾಜಕೀಯ ಸಮಾವೇಶಗಳನ್ನು ನಡೆಸುವಾಗ ಕೊರೊನಾ ಸೋಂಕು ಸರ್ಕಾರಕ್ಕೆ ನೆನಪಾಗುವುದಿಲ್ಲ. ಜಾತ್ರೆಗಳು, ರಥೋತ್ಸವಗಳು ನಡೆಯುವಾಗ ಸೋಂಕಿನ ಸಂಕಷ್ಟ ಇರುವುದಿಲ್ಲ. ಅದರೆ, ಅನ್ಯ ಧರ್ಮೀಯರು ಸಂಭ್ರಮಿಸುವ ಸಂದರ್ಭಗಳಲ್ಲಿ ಮಾತ್ರ ಕೊರೊನಾ ಸಂಕಷ್ಟ ಎದುರಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್‌ 24ರ ರಾತ್ರಿಯಿಂದ ರಾತ್ರಿ ಕರ್ಫ್ಯೂ ವಿಧಿಸಲು ಮುಂದಾಗಿದ್ದ ರಾಜ್ಯ ಬಿಜೆಪಿ ಸರ್ಕಾರ, ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ನೈಟ್‌ ಕರ್ಫ್ಯೂವನ್ನು ಹಿಂಪಡೆದಿತ್ತು. ಇದೀಗ ಹೊಸ ವರ್ಷಾಚರಣೆಗೆ ಬ್ರೇಕ್‌ ಹಾಕಲು ಮುಂದಾಗಿದೆ.


ಇದನ್ನೂ ಓದಿ: ಬೆಂಗಳೂರಿಗೆ ಎಂಟ್ರಿ ಕೊಟ್ಟ ರೂಪಾಂತರಿ ಕೊರೊನಾ : ಮೂವರಲ್ಲಿ ಸೋಂಕು ಪತ್ತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights