ಕೋಮುವಾದಿ ಘೋಷಣೆ: ಹಿಂದೂ ರಕ್ಷಾ ದಳ ನಾಯಕರ ಬಂಧನಕ್ಕೆ ಪೊಲೀಸ್ ದಾಳಿ!

ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಮುವಾದಿ ಘೋಷಣೆಗಳನ್ನು ಕೂಗಿದ ಘಟನೆಗೆ ಸಂಬಂಧಿಸಿದಂತೆ ಹಿಂದೂ ರಕ್ಷಾ ದಳದ ಮುಖಂಡ ಪಿಂಕಿ ಚೌಧರಿ ಮತ್ತು ಉತ್ತಮ್ ಮಲಿಕ್ ಅವರನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಇವರಿಬ್ಬರು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ. ಆಗಸ್ಟ್ 7 ರಿಂದ ಮಲಿಕ್ ತನ್ನ ಮನೆಗೆ ಹೋಗಿಲ್ಲ. ಹೀಗಾಗಿ ರಾಷ್ಟ್ರ ರಾಜಧಾನಿ ಮತ್ತು ನೆರೆಯ ರಾಜ್ಯಗಳಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬ್ಯಾಂಕ್ ಆಫ್ ಬರೋಡಾದ ಬಳಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದಕ್ಕೆ ಸಂಬಂಧಿಸಿದಂತೆ ಕೋನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಬಳಿಕ ಘಟನೆಗೆ ಸಂಬಂಧಿಸಿದಂತೆ ವಕೀಲ ಮತ್ತು ಮಾಜಿ ಬಿಜೆಪಿ ವಕ್ತಾರ ಅಶ್ವಿನಿ ಉಪಾಧ್ಯಾಯ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ಹೇಳಿದ್ದಾರೆ.

ಆರೋಪಿಗಳನ್ನು ಅಶ್ವಿನಿ ಉಪಾಧ್ಯಾಯ, ಪ್ರೀತ್ ಸಿಂಗ್, ದೀಪಕ್ ಸಿಂಗ್, ದೀಪಕ್ ಕುಮಾರ್, ವಿನೋದ್ ಶರ್ಮಾ ಮತ್ತು ವಿನಿತ್ ಬಾಜಪೇಯಿ ಎಂದು ಗುರುತಿಸಲಾಗಿದೆ.

ಅವರನ್ನು ದೆಹಲಿಯ ವಿವಿಧ ಭಾಗಗಳಲ್ಲಿ ಬಂಧಿಸಲಾಗಿದೆ ಮತ್ತು ಶೀಘ್ರದಲ್ಲೇ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು.

ಇದನ್ನೂ ಓದಿ: ಗುಜರಾತ್ ಕೋಮು ಸಂಘರ್ಷ: 2 ಸಾವಿರಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲು!

ಇವರಲ್ಲಿ ಪ್ರೀತ್ ಸಿಂಗ್‌ ‘ಸೇವ್ ಇಂಡಿಯಾ ಫೌಂಡೇಶನ್’ ನ ನಿರ್ದೇಶಕನಾಗಿದ್ದಾನೆ. ದೀಪಕ್ ಸಿಂಗ್, ದೀಪಕ್ ಕುಮಾರ್ ಮತ್ತು ವಿನೋದ್ ಶರ್ಮಾ ವಿವಿಧ ಬಲಪಂಥೀಯ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಭಾರತ್ ಜೊಡೋ ಪ್ರತಿಭಟನೆ ವೇಳೆ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.

ಆದಾಗ್ಯೂ, ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದವರಿಗೂ ತಮ್ಮ ಪ್ರತಿಭಟನೆಗೂ ಯಾವುದೇ ಸಂಪರ್ಕವಿಲ್ಲ ಎಂದು ಭಾರತ್ ಜೊಡೊ ಆಂದೋಲನದ ಮಾಧ್ಯಮ ಉಸ್ತುವಾರಿ ಶಿಪ್ರ ಶ್ರೀವಾಸ್ತವ ಹೇಳಿದ್ದಾರೆ.

“ವಸಾಹತುಶಾಹಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು. 222 ಬ್ರಿಟಿಷ್ ಕಾನೂನುಗಳನ್ನು ರದ್ದುಗೊಳಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು. ನಾವು ವೀಡಿಯೊವನ್ನು ನೋಡಿದ್ದೇವೆ, ಆದರೆ ಅವರು ಯಾರೆಂದು ನಮಗೆ ತಿಳಿದಿಲ್ಲ. ಘೋಷಣೆಗಳನ್ನು ಕೂಗಿದವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಶ್ರೀವಾಸ್ತವ ಹೇಳಿದ್ದಾರೆ.

“ವೈರಲ್ ಆಗಿರುವ ವಿಡಿಯೋವನ್ನು ಪರೀಕ್ಷಿಸಲು ನಾನು ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ. ವಿಡಿಯೋ ಅಧಿಕೃತವಾಗಿದ್ದರೆ, ಅದರಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಹೇಳಿದರು.

“ವಿಡಿಯೋ ನಕಲಿಯಾಗಿದ್ದರೆ, ಭಾರತ್ ಜೊಡೋ ಆಂದೋಲನಕ್ಕೆ ಮಾನಹಾನಿ ಮಾಡಲು ಪಿತೂರಿಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಯ ಕೋಮು-ದ್ವೇಷ ರಾಜಕೀಯಕ್ಕೆ ಬಲಿಯಾಗುತ್ತಿದೆ ಲಕ್ಷದ್ವೀಪ? ಅಲ್ಲಿ ಕೇಂದ್ರ ಸರ್ಕಾರದ ಧೋರಣೆ ಹೇಗಿದೆ ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights