ಗುಜರಾತ್ ಕೋಮು ಸಂಘರ್ಷ: 2 ಸಾವಿರಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲು!

ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 2,000 ಅಪರಿಚಿತ ಜನರ ವಿರುದ್ದ ಗುಜರಾತ್‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಘಟನೆಯಲ್ಲಿ ಆರು ಪೊಲೀಸರು ಮತ್ತು ಸುಮಾರು 10 ಜನರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಜರಾತ್‌ನ ಗಿರ್‌ ಸೋಮನಾಥದ ಜಿಲ್ಲೆಯ ಉನಾ ತಾಲ್ಲೂಕಿನ ನವ ಬಂದರ್‌ ಎಂಬ ಗ್ರಾಮದಲ್ಲಿ ಘಟನೆ ನಡೆಸಿದ್ದು, ಎಫ್‌ಐಆರ್‌ನಲ್ಲಿ 47 ಜನರ ಹೆಸರನ್ನೂ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹಳ್ಳಿಯ ಜೆಟ್ಟಿಯೊಂದರಲ್ಲಿ ಎರಡು ಮೀನುಗಾರಿಕಾ ದೋಣಿಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಈ ಕಾರಣಕ್ಕಾಗಿ ಎರಡು ಸಮುದಾಯಗಳ ನಡುವೆ ವಾಗ್ವಾದದ ನಡೆದಿದ್ದು, ನಂತರ ಅದು ಘರ್ಷಣೆಗೆ ತಿರುಗಿದೆ ಎಂದು ಅವರು ವಿವರಿಸಿದ್ದಾರೆ.

ಎರಡು ಸಮುದಾಯಗಳಿಗೆ ಸೇರಿದ ಸುಮಾರು 1,500 ರಿಂದ 2,000 ಜನರು ಕೋಲುಗಳು, ಕತ್ತಿಗಳು, ಕಬ್ಬಿಣ ಮತ್ತು ಪ್ಲಾಸ್ಟಿಕ್ ಪೈಪುಗಳಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅಲ್ಲದೆ, ಜನರ ಗುಂಪಿನ ಮೇಲೆ ಕಲ್ಲುಗಳು ಮತ್ತು ಖಾಲಿ ಗಾಜಿನ ಬಾಟಲಿಗಳನ್ನು ಸಹ ಎಸೆದಿದ್ದಾರೆ ಎಂದು ನವ ಬಂದರ್ ಸಾಗರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದಾಗ, ಗಲಭೆಕೋರರು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ವೇಳೆ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಜಾಟ್, ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಮೂವರು ಕಾನ್‌ಸ್ಟೆಬಲ್‌ಗಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಘರ್ಷಣೆಗೆ ಸಂಬಂಧಿಸಿದಂತೆ, ಐಪಿಸಿ ಸೆಕ್ಷನ್ಸ್ 307 (ಕೊಲೆ ಯತ್ನ), 332, 333 (ಸ್ವಯಂಪ್ರೇರಣೆಯಿಂದ ಸರ್ಕಾರಿ ನೌಕರನಿಗೆ ತೀವ್ರ ನೋವನ್ನುಂಟುಮಾಡುವುದು), 337, 338 (ನಿರ್ಲಕ್ಷ್ಯದಿಂದ ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವುದು), 143 (ಕಾನೂನುಬಾಹಿರ ಸಭೆ), 147 ಮತ್ತು 148 (ಗಲಭೆ) ಅಡಿಯಲ್ಲಿ ಭಾನುವಾರ ತಡರಾತ್ರಿ ಎರಡೂ ಸಮುದಾಯಗಳ 47 ಜನರ ಹೆಸರು ಸೇರಿದಂತೆ 1,500 ರಿಂದ 2,000 ಅಪರಿಚಿತ ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಘರ್ಷಣೆಯಲ್ಲಿ ಭಾಗಿಯಾಗಿದ್ದ ಹಲವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಘರ್ಷಣೆಯ ಸಂದರ್ಭದಲ್ಲಿ ಹತ್ತಿರದ ಮೂರು ಪೊಲೀಸ್ ಠಾಣೆಗಳಾದ ಉನಾ, ಗಿರ್ ಗಡಾಡಾ ಮತ್ತು ಕೊಡಿನಾರ್ ಮತ್ತು ಸ್ಥಳೀಯ ಅಪರಾಧ ಶಾಖೆ ಮತ್ತು ವಿಶೇಷ ಕಾರ್ಯಾಚರಣೆ ಗುಂಪಿನ ಸಿಬ್ಬಂದಿಗಳನ್ನು ಒಳಗೊಂಡ ದೊಡ್ಡ ಪೊಲೀಸ್ ತಂಡವು ಜನಸಮೂಹವನ್ನು ನಿಯಂತ್ರಿಸಲು ಘರ್ಷಣೆಯ ಸ್ಥಳಕ್ಕೆ ಧಾವಿಸಿತ್ತು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಿದ್ದು ತಪ್ಪಾಯಿತು; ಟಿಎಂಸಿಗೆ ಹಿಂದಿರುಗಲು ಅವಕಾಶ ಕೊಡಿ: ಬಂಗಾಳ ಬಿಜೆಪಿ ಸೇರಿದ್ದವರ ಪರದಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights