ಬಾಲಕಿಯ ಮೇಲೆ ಅತ್ಯಾಚಾರವೆಸಗಿ ದೇಹ ಸುಟ್ಟ ಅರ್ಚಕ : ನ್ಯಾಯಕ್ಕಾಗಿ ಪ್ರತಿಭಟನೆ!
9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಿರಾತಕರು ಕೊಲೆ ಮಾಡಿ ದೇಹವನ್ನು ಬಲವಂತವಾಗಿ ಸುಟ್ಟುಹಾಕಿದ ದಾರುಣ ಘಟನೆ ದೆಹಲಿಯಲ್ಲಿ ನಡೆದಿದೆ. ನ್ಯಾಯಕ್ಕಾಗಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಒಂಬತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಮಾತ್ರವಲ್ಲದೆ ಆಕೆಯ ದೇಹವನ್ನು ಬಲವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಓರ್ವ ಪುರೋಹಿತನೊಂದಿಗೆ ಇತರ ಮೂವರನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ. ನ್ಯಾಯಕ್ಕಾಗಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದ ಬಾಲಕಿ ತನ್ನ ಹೆತ್ತವರೊಂದಿಗೆ ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಪುರಾಣ ನಂಗಲ್ ನ ಶ್ಮಶಾನಕ್ಕೆ ಸಮೀಪದಲ್ಲಿ ವಾಸಿಸುತ್ತಿದ್ದಳು. ಕೂಲರ್ ನಿಂದ ಕುಡಿಯುವ ನೀರನ್ನು ತರಲು ಆಕೆ ಕಳೆದ ಸಂಜೆ ಶ್ಮಶಾನಕ್ಕೆ ಹೋಗಿದ್ದಳು. ಕೆಲ ಸಮಯದ ಬಳಿಕ ಆಕೆ ಹಿಂತಿರುಗಲಿಲ್ಲ.
ಸಂಜೆ 6 ಗಂಟೆ ಸುಮಾರಿಗೆ ಶವದಹನ ಅರ್ಚಕ ರಾಧೇಶ್ಯಾಮ್ ಮೇಲೆ ಆರೋಪಿಸಿ ಸ್ಥಳೀಯರು ಬಾಲಕಿ ತಾಯಿಯನ್ನು ಶ್ಮಶಾನಕ್ಕೆ ಕರೆದು ಶವವನ್ನು ತೋರಿಸಿದ್ದಾರೆ. ಈ ವೇಳೆ ಬಾಲಕಿ ಮೊಣಕೈಯಲ್ಲಿ ಸುಟ್ಟ ಗುರುತುಗಳಿವೆ. ಆಕೆಯ ತುಟಿಗಳು ಸಹ ನೀಲಿ ಬಣ್ಣದ್ದಾಗಿರುವುದನ್ನ ಸ್ಥಳೀಯರು ಗಮನಿಸಿದ್ದಾರೆ.
ಕೂಲರ್ ನಿಂದ ನೀರು ಕುಡಿಯುವಾಗ ಆಕೆ ವಿದ್ಯುತ್ ಸ್ಪರ್ಶಕ್ಕೆ ಒಳಗಾದಳು ಎಂದು ಅರ್ಚಕ ಸುಳ್ಳು ಕಥೆ ಕಟ್ಟಿದ್ದಾನೆ. ನಂತರ ಪೂಜಾರಿ ಮತ್ತು ಆತನ ಸಹಚರರು ಬಾಲಕಿಯ ತಾಯಿಗೆ ಪೊಲೀಸರಿಗೆ ಮಾಹಿತಿ ನೀಡದಂತೆ ಹೇಳಿದ್ದಾರೆ. ಪ್ರಕರಣವನ್ನು ದಾಖಲಿಸುವುದು ಎಂದರೆ ಮರಣೋತ್ತರ ಪರೀಕ್ಷೆ, ಅಲ್ಲಿ ಮಗುವಿನ ಅಂಗಾಂಗಗಳನ್ನು ಕಳವು ಮಾಡಲಾಗುತ್ತದೆಂದು ಬಾಲಕಿ ತಾಯಿಗೆ ಹೇಳಿದ್ದಾರೆ. ತಕ್ಷಣವೇ ಅಂತ್ಯಕ್ರಿಯೆ ನಡೆಸುವಂತೆ ಹೇಳಿದ್ದಾರೆ.
ಹುಡುಗಿಯ ಪೋಷಕರಿಗೆ ಪ್ರೋತ್ಸಾಹಕವಾಗಿ ಸ್ವಲ್ಪ ಹಣವನ್ನೂ ಪಾವತಿಸಿದ್ದಾರೆ. ಈ ವೇಳೆ ಅನುಮಾನ ಬಂದ ಬಾಲಕಿ ತಾಯಿ ಎಚ್ಚೆತ್ತುಕೊಂಡಿದ್ದಾರೆ. ಬಳಿಕ ಹಳೆಯ ನಂಗಲ್ ಗ್ರಾಮದ ಸುಮಾರು 200 ಗ್ರಾಮಸ್ಥರು ಶ್ಮಶಾನದಲ್ಲಿ ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರಾತ್ರಿ 10.30 ರ ಸುಮಾರಿಗೆ ಈ ಪ್ರಕರಣದ ಕುರಿತು ಕರೆ ಬಂದಿರುವುದಾಗಿ ನೈಋತ್ಯ ಜಿಲ್ಲಾ ಪೊಲೀಸ್ ಹಿರಿಯ ಅಧಿಕಾರಿ ಪ್ರತಾಪ ಸಿಂಹ ತಿಳಿಸಿದ್ದಾರೆ. ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ವಿರುದ್ಧದ ಅಪರಾಧಗಳ ವಿರುದ್ಧ ಕಠಿಣ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.