ಅಂಬಾನಿ ಪರನಿಂತ ಪ್ರಧಾನಿ ಮೋದಿ? ರೈತರ ಬಾಯ್ಕಾಟ್‌ ಜಿಯೋಗೆ ಪರೋಕ್ಷವಾಗಿ ವಿರೋಧ!

ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳು ಅಂಬಾನಿ-ಅದಾನಿಗಳ ಪರ ಇವೆ ಎಂದು ಆರೋಪಿಸಿ ಬಾಯ್ಕಾಟ್‌ ಜಿಯೋ-ರಿಲಿಯನ್ಸ್‌ಗೆ ರೈತರು ಕರೆಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಂಜಾಬಿನಲ್ಲಿರುವ ಸಾವಿರಾರು ಜಿಯೋ ಟವರ್‌ಗಳಿಗೆ ರೈತರು ಹಾನಿಯುಂಟುಮಾಡಿದ್ದರು. ಇದನ್ನು ಪರೋಕ್ಷವಾಗಿ ಖಂಡಿಸಿರುವ ಪ್ರಧಾನಿ ಮೋದಿ, “ಮೂಲ ಸೌಕರ್ಯಗಳ ಮೇಲೆ ದಾಳಿ ಮಾಡುವುದು ಜನಸಾಮಾನ್ಯರ ಮೇಲೆ ದಾಳಿ ಮಾಡಿದಂತೆ” ಎಂದು ಹೇಳಿದ್ದಾರೆ.

“ಪ್ರತಿಭಟನೆಯ ಸಮಯದಲ್ಲಿ ಮೂಲಭೂತ ಸೌಕರ್ಯಗಳ ಮೇಲೆ ದಾಳಿ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟುಮಾಡುವುದು ಒಳ್ಳೆಯದಲ್ಲ. ಈ ಮೂಲಭೂತ ಸೌಕರ್ಯಗಳು ಯಾವುದೇ ನಾಯಕ ಅಥವಾ ಪಕ್ಷ ಅಥವಾ ಸರ್ಕಾರದ್ದಲ್ಲ ಎನ್ನುವುದನ್ನು ಅವರು ನೆನಪಿನಲ್ಲಿಡಬೇಕು. ಇವು ರಾಷ್ಟ್ರೀಯ ಸ್ವತ್ತು. ಇವುಗಳನ್ನು ಪ್ರತಿಯೊಬ್ಬ ಬಡವರ, ತೆರಿಗೆದಾರರ, ಮಧ್ಯಮ ವರ್ಗದವರ ಮತ್ತು ಸಮಾಜದ ಪ್ರತಿಯೊಂದು ವರ್ಗದವರ ಬೆವರಿನಿಂದ ಸೃಷ್ಟಿಸಲಾಗಿದೆ. ಹಾಗಾಗಿ ಇವುಗಳಿಗೆ ಹಾನಿ ಮಾಡಿದರೆ ಅದು ಜನಸಾಮಾನ್ಯನ ಮೇಲೆ ನೇರವಾಗಿ ಮಾಡಿದ ದಾಳಿಯಾಗುತ್ತದೆ” ಎಂದು ಹೇಳಿದರು.

“ಪ್ರಜಾಪ್ರಭುತ್ವದ ಹಕ್ಕುಗಳನ್ನು ಚಲಾಯಿಸುವಾಗ ಜನರು ತಮ್ಮ ರಾಷ್ಟ್ರೀಯ ಕರ್ತವ್ಯಗಳನ್ನು ಮರೆಯಬಾರದು” ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಭಾರೀ ಕುಸಿತ ಕಂಡ ಅಂಬಾನಿ ಆಸ್ತಿ ಮೌಲ್ಯ; ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಅಂಬಾನಿ ಔಟ್‌!

‘ರೈಲ್‌ ರೊಕೊ’ ಹೋರಾಟದಲ್ಲಿ ಪ್ರತಿಭಟನಾಕಾರರು ರೈಲ್ವೆ ಹಳಿಗಳನ್ನು ಸ್ವಾಧೀನಪಡಿಸಿಕೊಂಡಿದ್ದರು. ಇದನ್ನು ಉಲ್ಲೇಖಿಸಿದ ಪ್ರಧಾನಿ, “ಪ್ರತಿಭಟನಾಕಾರರು ರೈಲುಗಳನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡಿದ್ದಾರೆ” ಎಂದು ಹೇಳಿದರು.

ಕಳೆದ ಒಂದು ತಿಂಗಳಿನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜೊತೆ ಆರು ಸುತ್ತಿನ ಮಾತುಕತೆಗಳು ನಡೆದಿದ್ದು, ಅವುಗಳೆಲ್ಲವೂ ವಿಫಲವಾಗಿವೆ.

ಈ ನಡುವೆಯೇ ರೈತರ ಪ್ರತಿಭಟನೆಯನ್ನು ದಿಕ್ಕುತಪ್ಪಿಸಲು ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಬಲಪಂಥೀಯ ಮಾಧ್ಯಮಗಳು ಹಾಗೂ ಬಿಜೆಪಿ ಐಟಿ ಸೆಲ್‌ಗಳು ಪ್ರಯತ್ನಿಸುತ್ತಿವೆ. ಇದರ ಭಾಗವಾಗಿ ರೈತರನ್ನು ನಕ್ಸಲರು, ಖಲೀಸ್ತಾನಿಗಳು, ಭಯೋತ್ಪಾದಕರು, ನಕಲಿ ರೈತರು ಎಂದು ಮುಂತಾದ ಅಸಾಂವಿಧಾನಿಕ ಪದಗಳನ್ನು ಪ್ರಯೋಗಿಸಿ ಜನರಲ್ಲಿ ನಕಾರಾತ್ಮಕ ಭಾವನೆಯನ್ನು ಹರಡುತ್ತಿದೆ. ಆದರೆ ಇದಾವುದಕ್ಕೂ ಅಂಜದ ರೈತರು ತಮ್ಮ ದಿಟ್ಟ ಹೋರಾಟವನ್ನು ಮುಂದುವರೆಸಿದ್ದಾರೆ.


ಇದನ್ನೂ ಓದಿ: ವಾಜಪೇಯಿ ಭಾರತದಲ್ಲಿ ಮೊದಲ ಮೆಟ್ರೋ ಪ್ರಾರಂಭಿಸಿದರು ಎಂದು ಮೋದಿ ಹೇಳಿದ್ರಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights