Fact check: “ದ ಕಾಶ್ಮೀರ್ ಫೈಲ್ಸ್” ಸಿನಿಮಾ ನೋಡಿ ಯೋಗಿ ಆದಿತ್ಯನಾಥ್ ಕಣ್ಣಿರು ಹಾಕಿಲ್ಲ: ಕೆಲವು ದೃಶ್ಯಗಳಿಗೆ ನಿರ್ದೇಶಕು ಕತ್ತರಿ ಹಾಕಿದರೆ?
‘ದ ಕಾಶ್ಮೀರ್ ಫೈಲ್ಸ್’ ನ ಸಿನಿಮಾ ಕುರಿತು ಸದ್ಯ ಭಾರತದಲ್ಲಿ ಅತೀ ಹೆಚ್ಚು ಚರ್ಚೆ ನಡೆಯುತ್ತಿದೆ. 1990ರಲ್ಲಿ ಕಾಶ್ಮೀರದಲ್ಲಿ ನಡೆದಿದೆ ಎನ್ನಲಾದ ಹಿಂದೂ ಪಂಡಿತರ ಹತ್ಯಾಕಾಂಡದ ವಿಷಯವನ್ನಿಟುಕೊಂಡು ಸಿನಿಮಾ ನಿರ್ಮಾಣ ಮಾಡಲಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ಕೆಲವು ರಾಜ್ಯಗಳು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ತೆರಿಗೆ ವಿನಾಯ್ತಿಯನ್ನು ನೀಡಿವೆ. ಕರ್ನಾಟಕದಲ್ಲೂ ತೆರಿಗೆ ವಿನಾಯ್ತಿಯನ್ನು ನೀಡಲಾಗಿದೆ.
ಇದೆಲ್ಲದರ ನಡುವೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ್ದಾರೆ ಮತ್ತು ಸಿನಿಮಾ ವೀಕ್ಷಿಸುವ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡುತ್ತಿದೆ. ಹಾಗಿದ್ದರೆ ಈ ಸಿನಿಮಾವನ್ನ ವೀಕ್ಷಿಸಿ ಯೋಗಿ ಆದಿತ್ಯನಾಥ್ ನಿಜವಾಗಿಯೂ ಕಣ್ಣೀರು ಹಾಕಿದ್ದಾರಾ? ಎಂದು ವೈರಲ್ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್:
ವಿಡಿಯೊದ ಸ್ಕ್ರೀನ್‌ಶಾಟ್ ಸಹಾಯದಿಂಗ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು ವೈರಲ್ ವಿಡಿಯೊ ರೀತಿಯ ವಿಡಿಯೊವೊಂದು ಲಭ್ಯವಾಗಿದ್ದು, 17 ಅಕ್ಟೋಬರ್ 2017 ರಂದು ‘ಎಬಿಪಿ ನ್ಯೂಸ್’ ವಿಡಿಯೋ ಅಪ್‌ಲೋಡ್ ಮಾಡಿದೆ. ಈ ವೀಡಿಯೋದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹುತಾತ್ಮರ ಗೌರವಾರ್ಥವಾಗಿ ಆಯೋಜಿಸಲಾಗಿದ್ದ ‘ಏಕ್ ದಿಯಾ ಶಹೀದ್ ಕೆ ನಾಮ್’ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕುವ ದೃಶ್ಯಗಳು ಎಂದು ಎಬಿಪಿ ಸುದ್ದಿ ವಾಹಿನಿ ವರದಿ ಮಾಡಿದೆ.
ಈ ಸುದ್ದಿಯನ್ನು ಬಳಸಿಕೊಂಡು ಹೆಚ್ಚಿನ ವಿವರಗಳನ್ನು ಹುಡುಕಿದಾಗ, ಯೋಗಿ ಆದಿತ್ಯನಾಥ್ ಕಣ್ಣೀರು ಹಾಕುತ್ತಿರುವ ಇದೇ ರೀತಿಯ ಫೋಟೋ ಮತ್ತು ವಿಡೀಯೊಗಳನ್ನು ಅಕ್ಟೋಬರ್ 2017 ರಲ್ಲಿ ಹಲವಾರು ಸುದ್ದಿ ವೆಬ್‌ಸೈಟ್‌ಗಳು ಪ್ರಕಟಿಸಿದವು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈ ಲೇಖನಗಳ ಪ್ರಕಾರ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರದಲ್ಲಿ ನಡೆದ ‘ಏಕ್ ದಿಯಾ ಶಹೀದ್ ಕೆ ನಾಮ್’ ಕಾರ್ಯಕ್ರಮದ ವೇಳೆ ‘ಸಂದೇಸೆ ಆತೇ ಹೈನೆ’ ಹಾಡನ್ನು ಕೇಳುತ್ತಾ ಭಾವುಕರಾಗಿ ಕಣ್ಣೀರಿಟ್ಟಿದ್ದರು. ಗೋರಖ್‌ಪುರದ ಗೋರಖನಾಥ ದೇವಸ್ಥಾನದಲ್ಲಿ ಹುತಾತ್ಮ ಯೋಧರ ಗೌರವಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಉತ್ತರ ಪ್ರದೇಶ ಸರ್ಕಾರವು ಸೇರಿದಂತೆ ಗುಜರಾತ್, ಅಸ್ಸಾಂ, ಮಧ್ಯಪ್ರದೇಶ ಮತ್ತು ಇತರ ಬಿಜೆಪಿ ಆಡಳಿತದ ರಾಜ್ಯಗಳು ‘ದಿ ಕಾಶ್ಮೀರ್ ಫೈಲ್’ ಸಿನಿಮಾಗೆ ತೆರಿಗೆ ವಿನಾಯ್ತಿಯನ್ನು ನೀಡಿದೆ. ಆದರೆ ಯೋಗಿ ಆದಿತ್ಯನಾಥ್ ಈ ಸಿನಿಮಾ ನೋಡಿ ಭಾವುಕರಾದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ.
ಹಾಗೆಯೇ ಮತ್ತೊಂದು ಸುದ್ದಿ ವೈರಲ್ ಆಗುತ್ತಿದ್ದು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಡಿಲೀಟ್ ಆದ ದೃಶ್ಯ ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನ ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಯೂಟ್ಯೂಬ್‌ನಲ್ಲಿ ಇದೇ ರೀತಿಯ ದೀರ್ಘ ವೀಡಿಯೊ ಕಂಡುಬಂದಿದೆ. ಒಂದು ನಿಮಿಷಕ್ಕಿಂತ ಹೆಚ್ಚು ಅವಧಿಯ YouTube ವೀಡಿಯೊವನ್ನು 03 ಸೆಪ್ಟೆಂಬರ್ 2019 ರಂದು ಅಪ್‌ಲೋಡ್ ಮಾಡಲಾಗಿದೆ. ಆದ್ದರಿಂದ ಇದು ಹಳೆಯ ವೀಡಿಯೊ ಎಂದು ಖಚಿತವಾಗುತ್ತದೆ.. ಅದೇ ವೈರಲ್ ವೀಡಿಯೊವನ್ನು ಕನಿಷ್ಠ 2019 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ವೀಡಿಯೊದಲ್ಲಿ ಹ್ಯಾಂಡ್ ಮೈಕ್ ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಕಾಶ್ಮೀರದಲ್ಲಿ ಭಾರತೀಯ ಸೇನೆಯ ವಿರುದ್ಧ ಆರೋಪಗಳನ್ನು ಮಾಡುತಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರು 14 ಆಗಸ್ಟ್ 2019 ರಂದು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು , ನಂತರ ಮಾರ್ಚ್ 2020 ರ 3 ನೇ ವಾರದಲ್ಲಿ ಪ್ರಾರಂಭವಾಗಬೇಕಿದ್ದ ಚಿತ್ರೀಕರಣವನ್ನು COVID-19 ಸಾಂಕ್ರಾಮಿಕ ಕಾರಣಕ್ಕೆ ರದ್ದುಗೊಳಿಸಲಾಯಿತು. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರೀಕರಣ ಪ್ರಾರಂಭಕ್ಕೂ ಮೊದಲೇ ಪೋಸ್ಟ್‌ನಲ್ಲಿ ಹಂಚಿಕೊಂಡ ವೀಡಿಯೊ ಯೂಟ್ಯೂಬ್‌ನಲ್ಲಿ ಲಭ್ಯವಿತ್ತು. ಹಾಗಾಗಿ ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ “ದಿ ಕಾಶ್ಮೀರ್ ಫೈಲ್ಸ್” ಚಿತ್ರದಲ್ಲಿ ಬರುವ ದೃಶ್ಯಗಳನ್ನು ರದ್ದು ಮಾಡಿದ್ದಾರೆ ಎಂಬುದೆಲ್ಲ ಸುಳ್ಳು.
ಒಟ್ಟಾರೆಯಾಗಿ ಹೇಳುವುದಾದರೆ, ಯೋಗಿ ಆದಿತ್ಯನಾಥ್ ಅವರು ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ನೋಡುವಾಗ ಕಣ್ಣೀರು ಹಾಕುತ್ತಿದ್ದಾರೆ ಎಂಬುದಾಗಲಿ, ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಹೇಳುವಂತೆ ದಿ ಕಾಶ್ಮೀರ್ ಫೈಲ್ಸ್” ಚಿತ್ರದಿಂದ ಕೆಲವು ದೃಶ್ಯಗಳನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಡಿಲೀಟ್ ಮಾಡಿದ್ದಾರೆ ಎಂಬುದು ಸುಳ್ಳು ಎಂದು ಫ್ಯಾಕ್ಟ್‌ಚೆಕ್ ಮೂಲಕ ತಿಳಿದು ಬಂದಿದೆ.
ಕೃಪೆ: ಫ್ಯಾಕ್ಟ್‌ಲಿ
ಇದನ್ನು ಓದಿರಿ: Fact check: ಯೋಗಿ ಆದಿತ್ಯನಾಥ್ ಗದರಿದ್ದಕ್ಕೆ ಓವೈಸಿ ಗಪ್‌ಚುಪ್ ಎಂಬ ವಿಡಿಯೋದ ವಾಸ್ತವವೇನು?