Fact check: ಯೋಗಿ ಆದಿತ್ಯನಾಥ್ ಗದರಿದ್ದಕ್ಕೆ ಓವೈಸಿ ಗಪ್‌ಚುಪ್ ಎಂಬ ವಿಡಿಯೋದ ವಾಸ್ತವವೇನು?

ಉತ್ತರ ಪ್ರದೇಶದ ಚುನಾವಣೆ ದೇಶದ ಗಮನ ಸೆಳೆದಿತ್ತು, ಈಗ ಚುನಾವಣೆ ಮುಗಿದು ಫಲಿತಾಂಶ ಕೂಡ ಹೊರಬಿದ್ದಿದೆ. ಚುನಾವಣೋತ್ತರ ಸಮೀಕ್ಷೆಗಳಂತೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಯುಪಿಯಲ್ಲಿ ಅಧಿಕಾರಕ್ಕೆ ಬಂದಿದೆ. ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.

ಯೋಗಿ ಆದಿತ್ಯನಾಥ್ ಅವರು ಸಂಸತ್ತಿನಲ್ಲಿ ತಮ್ಮ ಭಾಷಣಕ್ಕೆ ಅಡ್ಡಿಪಡಿಸಿದಾಗ ಅಸಾದುದ್ದೀನ್ ಓವೈಸಿ ಅವರನ್ನು ಮೌನವಾಗಿಸಿ ಕುಳಿತುಕೊಳ್ಳುವಂತೆ ಗದರಿದ ದೃಶ್ಯಗಳು ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್ ವಿಡಿಯೊ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು  ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು ಘಟನೆಗೆ ಸಂಬಂಧಿಸಿ ವೀಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೊ 13 ಆಗಸ್ಟ್ 2014 ರಂದು ನಡೆದ ಲೋಕಸಭಾ ಅಧಿವೇಶನದ ದೃಶ್ಯಗಳಾಗಿವೆ ಎಂದು ತಿಳಿದುಬಂದಿದೆ.

2014 ಸಂಸತ್ ಅಧಿವೇಶನದ ಕಲಾಪದ ವಿಡಿಯೊ:

‘ದೇಶದಲ್ಲಿ ಹೆಚ್ಚುತ್ತಿದ್ದ ಕೋಮು ಹಿಂಸಾಚಾರವನ್ನು ಹತ್ತೋಟಿಗೆ ತರಲು ಪರಿಣಾಮಕಾರಿ ಕಾರ್ಯವಿಧಾನದ ಅಗತ್ಯತೆ’ ಕುರಿತು ಲೋಕಸಭೆಯಲ್ಲಿ ಚರ್ಚೆಯನ್ನು ಪ್ರಾರಂಭಿಸಲಾಗಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುವ ವೇಳೆ ಎರಡೂ ಪಕ್ಷಗಳ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿಯು ಅಧಿಕಾರವನ್ನು ಉಳಿಸಿಕೊಳ್ಳಲು ಕೋಮುಗಲಭೆಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತು.


ಇದನ್ನು ಓದಿರಿ: Fact check: ಬಜರಂಗದಳದ ಹರ್ಷ ಹತ್ಯೆಯ ಆರೋಪಿಗಳನ್ನು ನನ್ನ ಬ್ರದರ್ಸ್ ಎಂದು ಡಿ.ಕೆ ಶಿವಕುಮಾರ್ ಹೇಳಿಲ್ಲ


ಲೋಕಸಭೆಯ ಈ ಚರ್ಚೆಯ ವಿಡಿಯೋವನ್ನು ಬಿಜೆಪಿ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿದೆ. ವೀಡಿಯೊದ 10:24 ನಿಮಿಷದಲ್ಲಿ, ವಿರೋಧ ಪಕ್ಷದ ಮಹಿಳಾ ಸಂಸದರೊಬ್ಬರು ಯೋಗಿ ಆದಿತ್ಯನಾಥ್ ಭಾಷಣಕ್ಕೆ ಅಡ್ಡಿಪಡಿಸಿದಾಗ, ಆಗಿನ ಗೋರಖ್‌ಪುರ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಅವರು ತಮ್ಮ ಮೇಲಿನ ಆರೋಪಗಳನ್ನು ಸುಳ್ಳು ಎಂದು ಹೇಳಿ ಕುಳಿತುಕೊಳ್ಳುವಂತೆ ಒತ್ತಾಯಿಸಿರುವುದು ಗೊತ್ತಾಗುತ್ತದೆ.

ಅದೇ ವೀಡಿಯೊದ 13:24 ನಿಮಿಷಗಳಲ್ಲಿ, ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರು ಯೋಗಿ ಆದಿತ್ಯನಾಥ್ ಅವರ ಭಾಷಣಕ್ಕೆ ಅಡ್ಡಿಪಡಿಸುವುದನ್ನು ಮತ್ತು ಕೋಮು ಗಲಭೆಗಳ ಕುರಿತು ಯೋಗಿ ಅವರು ಉಲ್ಲೇಖಿಸಿದ ತಪ್ಪು ಅಂಕಿಅಂಶಗಳ ಬಗ್ಗೆ ಸ್ಪೀಕರ್‌ಗೆ ವಿವರಿಸುವುದನ್ನು ನೋಡಬಹುದು. 14:02 ನಿಮಿಷಗಳ ವಿಡಿಯೋದಲ್ಲಿ ಲೋಕಸಭಾ ಉಪಸಭಾಪತಿ ಡಾ.ಎಂ ತಂಬಿದುರೈ ಅವರು ಓವೈಸಿ ಅವರನ್ನು ಕುಳಿತುಕೊಳ್ಳುವಂತೆ ಕೇಳಿದಾಗ, ಓವೈಸಿ ಕುಳಿತುಕೊಳ್ಳುವುದನ್ನು ವಿಡಿಯದಲ್ಲಿ ನೋಡಬಹುದು. 13 ಆಗಸ್ಟ್ 2014 ರಂದು ನಡೆದ ಲೋಕಸಭಾ ಅಧಿವೇಶನದ ವಿಡಿಯೋವನ್ನು ಎಡಿಟ್ ಮಾಡುವ ಮೂಲಕ ಓವೈಸಿಯನ್ನು ಯೋಗಿ ಆದಿತ್ಯನಾಥ್ ಗದರಿಸಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ ಎಂದು  ಸಾಮಾಜಿಕ ಮಾಧ್ಯಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಎರಡು ವಿಭಿನ್ನ ಕ್ಲಿಪ್‌ಗಳನ್ನು ಒಂದು ಕಡೆ ಸೇರಿಸಿ ವಿಡಿಯೊ ರಚಿಸಲಾಗಿದೆ.

ಕೋಮುಗಲಭೆಗಳ ಕುರಿತು 13 ಆಗಸ್ಟ್ 2014 ರಂದು ನಡೆದ ಲೋಕಸಭೆಯ ಚರ್ಚೆಯನ್ನು ವರದಿ ಮಾಡುವ ಲೇಖನಗಳನ್ನು ಹಲವಾರು ಸುದ್ದಿ ವೆಬ್‌ಸೈಟ್‌ಗಳು ಪ್ರಕಟಿಸಿದವು. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಯೋಗಿ ಆದಿತ್ಯನಾಥ್ ಅವರು ಸಂಸತ್ತಿನಲ್ಲಿ ತಮ್ಮ ಭಾಷಣಕ್ಕೆ ಅಡ್ಡಿಪಡಿಸಿದಾಗ ಓವೈಸಿ ಅವರನ್ನು ಕುಳಿತುಕೊಳ್ಳುವಂತೆ ಮಾಡಿದ ದೃಶ್ಯಗಳನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.


ಇದನ್ನು ಓದಿರಿ: Fact check: ಮನ ಕಲಕುವ ಮಕ್ಕಳ ಕಣ್ಣೀರನ ಈ ವಿಡಿಯೋ ರಷ್ಯಾ – ಉಕ್ರೇನ್ ಯುದ್ದಕ್ಕೆ ಸಂಬಂಧಿಸಿಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights