ಖಾತೆ ಕ್ಯಾತೆ ತೆಗೆದವರಿಗೆ ಟಾಂಗ್ ಕೊಟ್ಟ ಸಚಿವ ಮುನಿರತ್ನ..!
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದ್ದು ಕೆಲ ವಲಸೆ ಬಿಜೆಪಿಗರು ಖಾತೆ ಬಗ್ಗೆ ಕ್ಯಾತೆ ತೆಗೆದಿದ್ದಾರೆ. ಉನ್ನತಪಟ್ಟದ ಖಾತೆ ಪಡೆಯಲು ಪ್ರಯತ್ನಿಸಿ ಬಯಸಿದ ಖಾತೆ ಸಿಗದೆ ಅಸಮಧಾನಗೊಂಡಿದ್ದಾರೆ. ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ. ಹೀಗೆ ಕ್ಯಾತೆ ತೆಗೆದವರಿಗೆ ತೋಟಗಾರಿಕೆ ಸಚಿವ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ.
ಖಾತೆ ವಿಚಾರವಾಗಿ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಅಸಮಧಾನ ಹೊರಹಾಕಿದ್ದಾರೆ. ಈ ಬಗ್ಗೆ ಮಾತನಾಡಿದ ಮುನಿರತ್ನ, “ಪಕ್ಷಕ್ಕೆ ಸ್ವಲ್ಪ ದಿನ ಕೆಲಸ ಮಾಡಬೇಕು. ಕೆಲಸ ಮಾಡಿದ ಮೇಲೆ ಬೇಡಿಕೆ ಇಡಿ. ನಾವು ತ್ಯಾಗ ಮಾಡಿದ್ದೇವೆ ಎಂದು ಎಷ್ಟು ದಿನ ಹೇಳೋದು. ಪಕ್ಷದಲ್ಲಿ ಕೆಲಸ ಮಾಡಿದರೆ ಪಕ್ಷ ನಮ್ಮ ನ್ನು ಗುರುತಿಸಿ ಉನ್ನತ ಖಾತೆ ಕೊಡುತ್ತದೆ. ದೊಡ್ಡ ದೊಡ್ಡ ಖಾತೆ ಈಗಲೇ ಕೇಳೋದು ನನಗೆ ಸರಿ ಎನಿಸುತ್ತಿಲ್ಲ” ಎಂದಿದ್ದಾರೆ.
“ಎಷ್ಟು ದಿನ ನಮ್ಮಿಂದಲೇ ಬಿಜೆಪಿ ಬಂತು ಅಂತ ಹೇಳೋದು. ಬೇರೆ ಪಕ್ಷದಿಂದ ಬಿಜೆಪಿಗೆ ಬಂದಿದ್ದೇವೆ. ಬಿಜೆಪಿಗೆ ನಮ್ಮ ಕೊಡುಗೆ ಏನೋ ಇಲ್ಲ. ಏಕಾಏಕಿ ಬಂದ ಕೂಡಲೆ ಉನ್ನತ ಖಾತೆಗಾಗಿ ಬೇಡಿಕೆ ಇಡುವುದು ಸರಿ ಅಲ್ಲ. ಪಕ್ಷಕ್ಕೆ ಕೆಲಸ ಮಾಡಿ ಪಕ್ಷದಲ್ಲಿ ಗುರುತಿಸಿಕೊಳ್ಳಬೇಕು. ಅದೇ ಬೇಕು ಅಂತ ಕೇಳೋದು ಸರಿ ಅಲ್ಲ” ಎಂದು ಕಿವಿ ಮಾತು ಹೇಳಿದ್ದಾರೆ.
“30 ವರ್ಷದಿಂದ ಪಕ್ಷಕ್ಕೆ ದುಡಿದವರು ಇದ್ದಾರೆ. ಅವರ ಗತಿ ಏನು? ದೊಡ್ಡ ಖಾತೆ ಇರೋರತ್ರ ಕುಳಿತು ಮಾತನಾಡಿ ಬಿಟ್ಟುಕೊಡಿ ಅಂತ ಕೇಳಿ. ಈಗಾಗಲೇ ಯಾರ ಬಳಿ ದೊಡ್ಡ ಖಾತೆ ಇದೆ ಅವರೊಂದಿಗೆ ಮಾತನಾಡಿ ಕೇಳಿಕೊಂಡು ತೆಗೆದುಕೊಳ್ಳಲಿ. ಅದನ್ನು ಬಿಟ್ಟು ಸಿಎಂ ಗೆ ಒತ್ತಡ ಹಾಕೋದು ಸರಿ ಅಲ್ಲ. ಹೊರಗಿನಿಂದ ಬಂದು ಪಕ್ಷ ನಮಗೆ ಕೊಟ್ಟಿರುವ ಗೌರವ ಹೆಚ್ಚು. ಹೀಗಿರುವಾಗ ನಾವು ಪಕ್ಷಕ್ಕೆ ಏನನ್ನೂ ಮಾಡದೇ ದೊಡ್ಡ ಖಾತೆಗಾಗಿ ಬೇಡಿಕೆ ಇಟ್ಟರೆ ಇಷ್ಟು ದಿನ ಪಕ್ಷಕ್ಕೆ ದುಡಿದವರು ಏನ್ ಮಾಡಬೇಕು..?” ಎಂದು ಪ್ರಶ್ನಿಸಿದ್ದಾರೆ.
“ನಾವೇನು ಪಕ್ಷಕ್ಕೆ ಮಾಡಿಲ್ಲ. ಮಾಡಿಲ್ದೆಲೇ ನಮಗೆ ಬಿಜೆಪಿ ಇಷ್ಟೆಲ್ಲಾ ಮಾಡುತ್ತಿದೆ. ಮಾಡುತ್ತಲೇ ಇದೆ. ಹೀಗಿರುವಾಗ ನಾವು ಇನ್ನೂ ಡಿಮ್ಯಾಂಡ್ ಮಾಡೋದು ಸರಿಯಲ್ಲ. ಇರೋ ದೊಡ್ಡ ದೊಡ್ಡ ಖಾತೆ ತೆಗೆದುಕೊಂಡ್ರೆ ಮೂಲ ಬಿಜೆಪಿಗರು ಏನ್ ಮಾಡಬೇಕು? ಅವರ ತ್ಯಾಗದಿಂದ ನಾವು ಸಚಿವರಾಗಿದ್ದೇವೆ. ನಮ್ಮಿಂದ ಅವರಿಲ್ಲ” ಎಂದು ಸಚಿವ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ.

