ಶಹಜಹಾನ್‌ಪುರ್‌ ಗಡಿಯಲ್ಲೂ ರೈತ ಹೋರಾಟ; ಲಾಠಿ, ವಾಟರ್‌ ಕ್ಯಾನನ್‌ಗೆ ಜಗ್ಗದ ರೈತ ಮಕ್ಕಳು!

ಟ್ರಿಕಿ, ಸಿಂಗು, ಗಾಜಿಯಾಪುರ‌ದಂತೆಯೇ ರಾಜಸ್ಥಾನ-ಹರಿಯಾಣ ರಾಜ್ಯಗಳನ್ನು ಬೆಸೆಯುವ ಹೆದ್ದಾರಿಯಲ್ಲಿರುವ ಶಹಜಹಾನ್‌ಪುರ್‌ ಗಡಿಯಲ್ಲಿ ರೈತ ಹೋರಾಟ ನಡೆಯುತ್ತಿದೆ.

ಟಿಕ್ರಿ ಮತ್ತು ಸಿಂಘು ಗಡಿಯಲ್ಲಿ ಪಂಜಾಬ್‌, ಹರಿಯಾಣದಿಂದ ದೊಡ್ಡ ಸಂಖ್ಯೆಯಲ್ಲಿ ಬಂದ ರೈತರು ಹೋರಾಟಕ್ಕೆ ಕುಳಿತಿದ್ದರೆ, ಶಹಜಹಾನ್‌ಪುರ್‌ ಗಡಿಯಲ್ಲಿ ಡಿಸೆಂಬರ್‌ 12ರಿಂದ ರಾಜಸ್ಥಾನದಿಂದ ಬಂದ ರೈತರು ಹೋರಾಟಕ್ಕೆ ಕುಳಿತಿದ್ದಾರೆ. ಈ ಹೋರಾಟದ ಮುಂದಾಳತ್ವವನ್ನು ಆಲ್‌ ಇಂಡಿಯಾ ಕಿಸಾನ್‌ ಸಭಾವಹಿಸಿಕೊಂಡಿದೆ.

ಕಳೆದ ಒಂದು ವಾರದಿಂದ ಮಹಾರಾಷ್ಟ್ರ, ಕೇರಳದಿಂದಲೂ ಸಾವಿರಾರು ಸಂಖ್ಯೆಯ ರೈತರು ಈ ಗಡಿ ಭಾಗಕ್ಕೆ ಬಂದು ಹೋರಾಟದಲ್ಲಿ ಜೊತೆಯಾಗಿದ್ದಾರೆ.

ದೆಹಲಿ ಚಲೋ ಜಾಥಾದ ಭಾಗವಾಗಿ ರಾಜಸ್ಥಾನದಿಂದ ಹೊರಟ ರೈತರನ್ನು ರಾಜಸ್ಥಾನ ಹಾಗೂ ಹರಿಯಾಣ ಪೊಲೀಸರು ಈ ಗಡಿಯಲ್ಲಿ ತಡೆದು ನಿಲ್ಲಿಸಿದ್ದು ಕಳೆದ ಆರು ವಾರಗಳಿಂದ ಹೋರಾಟ ಮುಂದುವರೆದಿದೆ.

ಕಿಸಾನ್‌ ಮಹಾ ಪಂಚಾಯತ್‌ ಸೇರಿದಂತೆ ವಿವಿಧ ರೈತ ಸಂಘಟನೆಗಳು 25 ಟ್ರ್ಯಾಕ್ಟರ್‌ಗಳೊಂದಿಗೆ ಗಡಿಯನ್ನು ತಲುಪಿದ್ದು, ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಕ್ಕೆ ಪಂಜಾಬ್‌ ರೈತರಂತೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ನಮ್ಮೆಲ್ಲರ ಶತ್ರು ಒಬ್ಬನೇ: ಹೋರಾಟನಿರತ ರೈತ ಹೇಳಿದ್ದು ಏನು ಗೊತ್ತಾ?

ಜಾಟ್‌ ಮಹಾಸಭಾ 100ಕ್ಕೂ ಹೆಚ್ಚು ವಾಹನಗಳೊಂದಿಗೆ ಈ ಹೋರಾಟದಲ್ಲಿ ಜೊತೆಯಾಗಿ ಇತ್ತೀಚೆಗೆ ಜೈಪುರ -ದೆಹಲಿ ಹೈವೇ ತಡೆಯುವ ಯತ್ನ ನಡೆಸಿ, ಸರ್ಕಾರಗಳಿಗೆ ಹೋರಾಟದ ಬಿಸಿ ಮುಟ್ಟಿಸಿತು.

ಕಿಸಾನ್‌ ಸಂಯುಕ್ತ ಮೋರ್ಚಾದ ಸಂಯೋಜಕರಾಗಿರುವ ರಾಜಕೀಯ ಚಿಂತಕ ಯೋಗೇಂದ್ರ ಯಾದವ್‌, ಪ್ರಾದೇಶಿಕ ರೈತ ಸಂಘಟನೆಗಳನ್ನು ಇಲ್ಲಿಗೆ ಕರೆತರುವ, ಹೋರಾಟದ ಬಲವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿದ್ದಾರೆ.

ಇದಕ್ಕಾಗಿ ಸಕ್ತಪುರಾ, ಗುಗಲ್‌ಕೋಟ, ಮಿರ್ಜಾಪುರ್‌, ಪಲವಾ, ಬಿರೋದಾ, ಫೌಲಾದ್‌ಪುರ್‌ಗಳ ರೈತರಿಂದ ಬೆಂಬಲವನ್ನು ಕೇಳಲಾಗಿದೆ.

ಕಿಸಾನ್ ಸಂಘರ್ಷ ಸಮಿತಿ, ಭೀಮಸೇನೆ, ಎಎಎಸ್‌ಪಿ, ಸಮಾಜವಾದಿ ಪಕ್ಷ, ಅಂಬೇಡ್ಕರ್‌ವಾದಿ ಪಕ್ಷ, ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷ, ಸ್ವರಾಜ್‌ ಯುವ ಸಂಘಟನೆ ಈ ಹೋರಾಟಕ್ಕೆ ಬೆಂಬಲ ಸೂಚಿಸಿ ರೈತರೊಂದಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

ಮಾಜಿ ಶಾಸಕ, ಹಾಲಿ ಆಲ್‌ ಇಂಡಿಯಾ ಕಿಸಾನ್‌ ಸಭಾದ ಅಮ್ರಾ ರಾಮ್‌, ಲೋಕ ತಾಂತ್ರಿಕ ಪಕ್ಷದ ಸಂಸದ ಹನುಮಾನ್‌ ಬೆನಿವಾಲಾ ಹೋರಾಟ ನಾಯಕತ್ವ ವಹಿಸಿಕೊಂಡಿದ್ದಾರೆ. ಭೀಮ್‌ ಸೇನೆಯ ಚಂದ್ರಶೇಖರ್‌ ಆಜಾದ್‌, ಕಿಸಾನ್‌ ಮಹಾಪಂಚಾಯತ್‌ ರಾಷ್ಟ್ರೀಯ ಅಧ್ಯಕ್ಷ ರಾಮ್‌ಪಾಲ್‌ ಜಾಟ್‌, ಸಮಾಜಸೇವಕ ರಾಧೇಶ್ಯಾಮ್‌ ಶುಕ್ಲಾವಾಸ್‌, ಕಿಸಾನ್‌ ಯೂನಿಯನ್‌ನ ಬಲಬೀರ್‌ ಛಿಲ್ಲರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಲಲಿತ್‌ ಯಾದವ್‌ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಈ ಹೋರಾಟದಲ್ಲಿ ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ರಾಜಸ್ಥಾನ, ಹರಿಯಾಣ ಸೇರಿದಂತೆ ವಿವಿಧ ಭಾಗಗಳ ನಾಯಕರು ಇಲ್ಲಿ ನೆರೆದ ರೈತರೊಂದಿಗೆ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

ಹೊಸ ವರ್ಷದ ಮುನ್ನಾ ದಿನ ರೈತರು ಮತ್ತು ಪೊಲೀಸರೊಂದಿಗೆ ನಡೆದ ಸಂಘರ್ಷದಲ್ಲಿ ಯುವ ಹೋರಾಟಗಾರರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‌ಗಳನ್ನು ಕೆಡವಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರನ್ನು ಹಿಮ್ಮೆಟ್ಟಿಸುವುದಕ್ಕಾಗಿ ಟಿಯರ್‌ ಗ್ಯಾಸ್‌, ವಾಟರ್‌ ಕ್ಯಾನನ್‌ಗಳನ್ನು ಬಳಸಿದವು. ಗಡಿಯ ಎರಡು ಬದಿಯಲ್ಲಿ ಡ್ರೋನ್‌ಗಳ ಮೂಲಕ ಹೋರಾಟಗಾರರ ಮೇಲೆ ನಿಗಾ ಇಡಲಾಗಿದೆ ಕೂಡ.

ಜ. 11ರಂದು ಕೇರಳದಿಂದ 1000 ರೈತರು ಶಹಜಹಾನ್‌ಪುರ್‌ ಗಡಿಯತ್ತ ಹೊರಡಲಿದ್ದಾರೆ. ಜ.21ರಂದು ಮತ್ತೊಂದು ಗುಂಪು ದೆಹಲಿಯತ್ತ ಹೊರಡಲಿದೆ ಎಂದು ಕೇರಳ ಕೃಷಿಕ್‌ ಸಂಘಂ ತಿಳಿಸಿದೆ.

ಹೀಗೇ ವಿವಿಧ ರಾಜ್ಯಗಳಿಂದ ರೈತ ಹೋರಾಟಗಾರರು ಈ ಗಡಿಯನ್ನು ತಲುಪುತ್ತಿದ್ದು, ಪ್ರತಿಭಟನೆಗೆ ದಿನದಿನಕ್ಕೂ ಹೊಸ ಹುರುಪು, ಹೊಸ ಶಕ್ತಿಯನ್ನು ಪಡೆದುಕೊಳ್ಳುತ್ತಿದೆ. ಶುಕ್ರವಾರ 8ನೇ ಸುತ್ತಿನ ಮಾತುಕತೆಯೂ ವಿಫಲವಾದ ನಂತರ ರೈತರು ಟಿಕ್ರಿ-ಸಿಂಘು ರೈತರಂತೆ ಈ ಗಡಿಯ ರೈತ ಹೋರಾಟಗಾರರು ಜ. 26ರ ಟ್ರ್ಯಾಕ್ಟರ್‌ ರ್ಯಾಲಿಗೆ ಸಿದ್ಧರಾಗುತ್ತಿದ್ದಾರೆ.


ಇದನ್ನೂ ಓದಿ: ಕಾಯ್ದೆ ವಾಪಸ್‌ ಆದ್ರೆ ಮಾತ್ರ ನಾವು ಘರ್ ವಾಪ್ಸಿ ಮಾಡುತ್ತೇವೆ: ಸರ್ಕಾರಕ್ಕೆ ರೈತರ ಖಡಕ್‌‌ ಎಚ್ಚರಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights