ಕಾಯ್ದೆ ವಾಪಸ್‌ ಆದ್ರೆ ಮಾತ್ರ ನಾವು ಘರ್ ವಾಪ್ಸಿ ಮಾಡುತ್ತೇವೆ: ಸರ್ಕಾರಕ್ಕೆ ರೈತರ ಖಡಕ್‌‌ ಎಚ್ಚರಿಕೆ

ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳ ಕುರಿತು ಶುಕ್ರವಾರ ನಡೆದ ಕೇಂದ್ರ ಸಚಿವರು ಮತ್ತು ರೈತ ಮುಖಂಡರ 8ನೇ ಸುತ್ತಿನ ಮಾತುಕತೆಯಲ್ಲಿ ‘ನೀವು ಕಾಯ್ದೆ ವಾಪ್ಸಿ ಮಾಡಿದರೆ ಮಾತ್ರ ನಾವು ಘರ್ ವಾಪ್ಸಿ ಮಾಡುತ್ತೇವೆ’ ಎಂದು ರೈತ ಮುಖಂಡರೊಬ್ಬರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾಗಿ ಪಿಟಿಐ ವರದಿ ಮಾಡಿದೆ.

ಕೃಷಿ ಕ್ಷೇತ್ರವು ರಾಜ್ಯಗಳಿಗೆ ಸಂಬಂಧಿಸಿದ ವಿಷಯ ಎಂದು ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಉಚ್ಚರಿಸಿದೆ. ಹಾಗಾಗಿ ಕೃಷಿ ವಿಷಯಗಳಲ್ಲಿ ಕೇಂದ್ರ ಸರ್ಕಾರ ತಲೆಹಾಕಬಾರದೆಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಪರಿಸ್ಥಿತಿಯನ್ನು ಗಮನಿಸಿದರೆ ಕೇಂದ್ರ ಸರ್ಕಾರಕ್ಕೆ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಇಚ್ಛಾಶಕ್ತಿ ಇಲ್ಲ ಎನಿಸುತ್ತದೆ. ಹಲವು ದಿನಗಳಿಂದ ಮಾತುಕತೆ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಸಮರ್ಪಕ ತೀರ್ಮಾನ ಕೈಗೊಳ್ಳದೆ, ರೈತರ ಪ್ರಶ್ನೆಗಳಿಗೆ ಉತ್ತರ ನೀಡದೆ ಸಮಯ ವ್ಯರ್ಥ ಮಾಡುತ್ತಿದೆ ಎಂದು ರೈತ ಮುಖಂಡರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನಮ್ಮೆಲ್ಲರ ಶತ್ರು ಒಬ್ಬನೇ: ಹೋರಾಟನಿರತ ರೈತ ಹೇಳಿದ್ದು ಏನು ಗೊತ್ತಾ?

ಇಂದು 8ನೇ ಸುತ್ತಿನ ಮಾತುಕತೆ ನಡೆದಿದ್ದು ಕೇಂದ್ರ ಸರ್ಕಾರದ ಪರವಾಗಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪಿಯೂಶ್ ಗೋಯಲ್ ಮತ್ತು ಸೋಮ್‌ಪ್ರಕಾಶ್‌ ಭಾಗವಹಿಸಿದ್ದರು. 40 ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದು, ಇಂದು ಸಹ ಸಭೆ ಯಾವುದೇ ತಾರ್ಕಿಕ ತೀರ್ಮಾನಗಳಿಗೆ ಬಂದಿಲ್ಲ. ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಿಲ್ಲವೆಂದು ಹಠ ಹಿಡಿದರೆ, ಹೋರಾಟ ನಿಲ್ಲಿಸುವುದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಜನವರಿ 15ಕ್ಕೆ ಮುಂದಿನ ಸಭೆ ನಿಗಧಿಗೊಳಿಸಲಾಗಿದೆ.

ಸಭೆಯಲ್ಲಿ ರೈತ ಮುಖಂಡರೊಬ್ಬರು “ಒಂದೋ ಗೆಲ್ಲುತ್ತೇವೆ ಇಲ್ಲ ಸಾಯುತ್ತೇವೆ” ಎಂಬ ಫ್ಲಕಾರ್ಡು ಹಿಡಿದಿರುವುದು ಗಮನ ಸೆಳೆದಿದೆ. ಅಂದರೆ ರೈತರು ಪಟ್ಟು ಬಿಡುವುದಿಲ್ಲ ಎಂಬ ಎಚ್ಚರಿಕೆ ರವಾನಿಸಿದ್ದಾರೆ.

ಇಂದು ಸಭೆಗೂ ಮುನ್ನ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಗೃಹ ಸಚಿವ ಅಮಿತ್‌ ಶಾರವರನ್ನು ಭೇಟಿಯಾಗಿದ್ದರು. ಇಂದಿನ ಸಭೆಯಲ್ಲಿಯೂ ರೈತರು ಮೂರು ಕೃಷಿ ಕಾನೂನುಗಳನ್ನು ಹಿಂಪಡೆದು ಕನಿಷ್ಠ ಬೆಂಬಲ ಬೆಲೆ ಖಾತ್ರಿಗೊಳಿಸುವ ಕಾನೂನು ತರಬೇಕೆಂದು ಆಗ್ರಹಿಸಿದರು. ಆದರೆ ಕೇಂದ್ರ ಸಚಿವರು ಯಾವುದೇ ಭರವಸೆ ನೀಡಿಲ್ಲ.

ಜನವರಿ 4 ರಂದು ನಡೆದ 7 ಸುತ್ತಿನ ಮಾತುಕತೆ ವಿಫಲವಾದಾಗ ರೈತರು ಜನವರಿ 7 ರಂದು ಟ್ರಾಕ್ಟರ್ ರ್ಯಾಲಿ ನಡೆಸುವುದಾಗಿ ಘೋಷಿಸಿ, ಅಂತೆಯೇ ನಡೆಸಿದರು. ಈಗ 8ನೇ ಸುತ್ತಿನ ಮಾತುಕತೆಯೂ ಸಹ ವಿಫಲವಾಗಿದ್ದು ರೈತರು ಯಾವ ರೀತಿಯ ಹೋರಾಟಕ್ಕೆ ಅಣಿಯಾಗುತ್ತಾರೆ ಎಂದು ಕಾದುನೋಡಬೇಕಾಗಿದೆ.


ಇದನ್ನೂ ಓದಿ: ರೈತ ಹೋರಾಟ: ಟಿಕ್ರಿ ಗಡಿಯಲ್ಲಿ ರೈತ ಮಹಿಳೆಯರ ಕೂಗು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights