ಗೋಹತ್ಯೆ ನಿಷೇಧ: ಉಲ್ಲಂಘಿಸಿದ್ರೆ 3-6 ವರ್ಷ ಜೈಲು; 5-10 ಲಕ್ಷ ದಂಡ: ಸಚಿವ ಪ್ರಭು ಚೌಹಾಣ್
ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ- 2020 ಜನವರಿಗೆ 18ರಿಂದ ರಾಜ್ಯದಲ್ಲಿ ಜಾರಿಯಾಗಿದೆ. ಕಾಯ್ದೆಯನ್ನು ಉಲ್ಲಂಘಿಸಿ ಹಸುಗಳ ಹತ್ಯೆ ಮಾಡಿದವರಿಗೆ 3 ವರ್ಷದಿಂದ 6 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಮೊದಲನೆ ಸಾರಿ 50 ಸಾವಿರದಿಂದ 5 ಲಕ್ಷದವರೆಗೆ, ಎರಡನೇ ಸಾರಿ ಮಾಡಿದರೆ 10 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ.
ಕಾಯ್ದೆಯ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಗ್ರಾಮಸಭೆ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಸಭೆ ಕೈಗೊಳ್ಳಬೇಕು ಯಾವುದೇ ಕಾರಣಕ್ಕೂ ಕೂಡಾ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯ ಪ್ರಮಾಣದ ಅನುಸಾರ ಶಿಕ್ಷೆ ನೀಡಬೇಕು ಎಂದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಕಾರವಾರದಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.
ಪಶು ವೈದ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಒ ಗಳು ರೈತರಲ್ಲಿ ಗೋ ಹತ್ಯೆಯ ಶಿಕ್ಷೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಯಾವುದೇ ಗೋವುಗಳು ಖಸಾಯಿ ಖಾನೆಗೆ ಹೊಗಬಾರದು. ಜಾನುವಾರುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಣಿಕೆ ಮಾಡಬೇಕಾಗಿ ಬಂದಲ್ಲಿ ಪಶು ವೈದ್ಯರ ಪ್ರಮಾಣ ಪತ್ರ ಮತ್ತು ಮಾಲಿಕತ್ವದ ಹಾಗೂ ಎನಿಮಲ್ ಟ್ಯಾಗ್ ಹೊಂದಿರುವಂತೆ ನೊಡಿಕೊಳ್ಳಬೇಕು. ಅಲ್ಲದೇ ವಾಹನದಲ್ಲಿ 5 ರಿಂದ 6 ಜಾನುವಾರುಗಳಿಗೆ ಮಾತ್ರ ಸಾಗಾಣಿಕೆಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ: ಬೀಫ್ ಮಾರಾಟ ಅಂಗಡಿಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!