ದೆಹಲಿ ಹಿಂಸಾಚಾರದ ಬೆನ್ನಲ್ಲೇ ರೈತ ಸಂಘಟನೆಗಳ ಮಧ್ಯೆ ಬಿರುಕು : ಪ್ರತಿಭಟನೆ ಕೈಬಿಟ್ಟ 2 ಸಂಘಟನೆಗಳು!

ದೆಹಲಿ ಹಿಂಸಾಚಾರದ ಬೆನ್ನಲ್ಲೇ ರೈತ ಸಂಘಟನೆಗಳ ಮಧ್ಯೆ ಬಿರುಕು ಉಂಟಾಗಿದೆ. ಎರಡು ತಿಂಗಳಿಂದ ಶಾಂತಿಯುತವಾಗಿ ಪ್ರತಿಭಟನೆ ಮುಂದುವರೆಸಿದ್ದ ಎರಡು ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿದಿವೆ.

ಮೂರು ಕೃಷಿ ವಿರೋಧಿ ಕಾನೂನುಗಳ ವಿರುದ್ಧ ದೆಹಲಿ ಗಡಿ ಭಾಗದಲ್ಲಿ ಎರಡು ತಿಂಗಳಿನಿಂದ ಶಾಂತಿಯುತವಾಗಿ ಪ್ರತಿಭಟನೆ ಮಾಡಿಕೊಂಡು ಬಂದಿದ್ದ ರೈತರು ಜನವರಿ 26ರಂದು ಟ್ರ್ಯಾಕ್ಟರ್ ರ್ಯಾಲಿಗೆ ಕರೆ ಕೊಟ್ಟಿದ್ದರು. ಈ ವೇಳೆ ಪೊಲೀಸರ ನಿಯಮಗಳನ್ನು ಮೀರಿ ಮಾರ್ಗ ಬದಲಾಯಿಸಿ, ಕೆಂಪುಕೋಟೆಯಲ್ಲಿ ಉದ್ರಿಕ್ತರ ಗುಂಪೊಂದು ತಮ್ಮ ಧ್ವಜ ಹಾರಿಸಿದೆ. ಮಾತ್ರವಲ್ಲದೇ ಪೊಲೀಸ್ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದು ಅಶ್ರುವಾಯು, ಲಾಠಿಚಾರ್ಜ್ ಮಾಡಲಾಯಿತು. ಉದ್ವೇಗಕ್ಕೊಳಗಾದ ಪ್ರತಿಭಟನಾಕಾರರು ಪೊಲೀಸರ ಮೇಲೆ ಹಾಗೂ ಅವರ ವಾಹನಗಳ ಮೇಲೆ ಹಲ್ಲೆ ಮಾಡಿದ್ಧಾರೆ. ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದು 22 ಕೇಸ್ ದಾಖಲಿಸಲಾಗಿದೆ.

ಸದ್ಯ ಪ್ರತಿಭಟನಾನಿರತ 41 ರೈತ ಸಂಘಟನೆಗಳ ಒಕ್ಕೂಟದಲ್ಲಿ ಒಂದು ಸಂಘಟನೆ ಹಿಂದಕ್ಕೆ ಸರಿದಿದೆ. ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಪ್ರತಿಭಟನೆಯನ್ನು ಕೈಬಿಟ್ಟಿದೆ. ದೆಹಲಿಯಲ್ಲಿ ಸಂಘಟನೆಯ ಮುಖಂಡ ವಿಎಂ ಸಿಂಗ್ ಈ ವಿಚಾರವನ್ನು ಘೋಷಣೆ ಮಾಡಿದ್ದಾರೆ.

ಇದರ ಜೊತೆಗೆ ಬೇರೆಯವರ ಮಾರ್ಗದರ್ಶನದಲ್ಲಿ ನಾವು ಪ್ರತಿಭಟನೆ ಮಾಡುವುದಿಲ್ಲ ಎಂಬ ಕಾರಣ ನೀಡಿ ಬಾನು ಪ್ರತಾಪ್ ಸಿಂಗ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ ಬಾನು ಸಂಘಟನೆ ಪ್ರತಿಭಟನೆಗೆ ಬೆಂಬಲವನ್ನು ಹಿಂಪಡೆದಿದೆ.

ಹಿಂಸಾಚಾರದ ಕೆಲ ವೀಡಿಯೋಗಳು ಬಿಡುಗಡೆಯಾಗುತ್ತಿದ್ದಂತೆ ರೈತರ ಪ್ರತಿಭಟನೆಗಳಲ್ಲಿ ಒಡಕು ಉಂಟಾಗಿದೆ. ಉದ್ರಿಕ್ತರ ಗಲಾಟೆಯ ವೀಡಿಯೋವನ್ನು ಪೊಲೀಸರು ರಿಲೀಸ್ ಮಾಡಿದ್ದಾರೆ. ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ವಾಹನಗಳನ್ನು ಉರುಳಿಸಲು ಮುಂದಾಗಿದ್ದ ದೃಶ್ಯ ವೀಡಿಯೋದಲ್ಲಿ ಗಮನಿಸಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights