BJP ಬೆಂಬಲಿಗ ದೀಪ್ ಸಿಧು ಕೆಂಪುಕೋಟೆಗೆ ಧ್ವನಿವರ್ಧಕದೊಂದಿಗೆ ತಲುಪಿದ್ದು ಹೇಗೆ? ತನಿಖೆಗೆ ಯೋಗೇಂದ್ರ ಯಾದವ್ ಆಗ್ರಹ

ಮಂಗಳವಾರ ರೈತರು ನಡೆಸಿದ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ರೈತರ ಒಂದು ಗುಂಪು ಕೆಂಪುಕೋಟೆಗೆ ನುಗ್ಗಿದ ಘಟನೆ ಹಾಗೂ ಅಲ್ಲಿಗೆ ನಟ ದೀಪ್ ಸಿಧು ಹಾಗೂ ಮಾಜಿ ಗ್ಯಾಂಗ್‍ಸ್ಟರ್ ಲಖಾ ಸಿಧಾನ ಧ್ವನಿವರ್ಧಕದೊಂದಿಗೆ ತಲುಪಿದ್ದು ಹೇಗೆ ಎಂಬುದು ತನಿಖೆಯಾಗಲಿ ಎಂದು ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಆಗ್ರಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ 200 ಜನರನ್ನು ಬಂಧಿಸಿರುವ ಪೊಲೀಸರು 09 ರೈತ ನಾಯಕರ ವಿರುದ್ಧ  22 ಎಫ್‌ಐಆರ್‌ಗಳನ್ನು ಹಾಕಿದ್ದಾರೆ. ಆದರೆ, ಬಿಜೆಪಿ ಬೆಂಬಲಿಗ, ನಟ ದೀಪ್‌ ಸಿಧು ವಿರುದ್ಧ ಈ ಹಿಂದೆ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಅಲ್ಲದೆ, ಈಗಲೂ ಆತನ ವಿರುದ್ಧ ಎಫ್‌ಐಆರ್‌ ದಾಖಲಿಸಿಲ್ಲ ಎಂದು ಯಾದವ್‌ ಕಿಡಿ ಕಾರಿದ್ದಾರೆ.

ಮೂಲಗಳ ಪ್ರಕಾರ ಸಿಧು ಹಾಗೂ ಸಿಧಾನ ಇಬ್ಬರೂ ದಿಲ್ಲಿಗೆ ಎರಡು ದಿನಗಳ ಹಿಂದೆ ಆಗಮಿಸಿದ್ದರಲ್ಲದೆ ಸಿಂಘು ಗಡಿಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಪ್ರಚೋದನಾತ್ಮಕ ಭಾಷಣ ನೀಡಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಧು ಬಿಜೆಪಿಯ ಸನ್ನಿ ಡಿಯೋಲ್ ಪರ ಪ್ರಚಾರ ಕೈಗೊಂಡಿದ್ದರೆ ಸುಮಾರು 26 ಪ್ರಕರಣಗಳನ್ನು ಎದುರಿಸುತ್ತಿರುವ ಸಿಧಾನ ಸಿಂಘು ಗಡಿಯಲ್ಲಿ ನವೆಂಬರ್ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗಿದ್ದರೆನ್ನಲಾಗಿದೆ ಎಂದು indiatoday.in ವರದಿ ಮಾಡಿದೆ.

ಭಾರತೀಯ ಕಿಸಾನ್ ಯೂನಿಯನ್‍ನ ಹರ್ಯಾಣ ಘಟಕದ ಅಧ್ಯಕ್ಷ ಗುರ್ನಾಮ್ ಸಿಂಗ್ ಚಡುನಿ ಸಹಿತ ಹಲವು ರೈತ ನಾಯಕರು ಮಂಗಳವಾರದ ಹಿಂಸಾತ್ಮಕ ಘಟನೆಗಳಿಗೂ ತಮಗೂ ಸಂಬಂಧವಿಲ್ಲವೆಂದು ಹೇಳಿದ್ದು ದೀಪ್ ಸಿಧು ಪ್ರತಿಭಟನಾಕಾರರನ್ನು ಪ್ರಚೋದಿಸಿ ಅವರನ್ನು ಕೆಂಪು ಕೋಟೆಯತ್ತ ಕರೆದೊಯ್ದಿದ್ದಾಗಿ ಆರೋಪಿಸಿದ್ದಾರೆ.

ಟ್ರ್ಯಾಕ್ಟರ್ ರ್ಯಾಲಿಯ ಹಿಂದಿನ ರಾತ್ರಿ ಇಬ್ಬರೂ ಪ್ರತಿಭಟನಾಕಾರರನ್ನು ಪ್ರಚೋದಿಸುವ ಕೆಲಸ ನಡೆಸಿದ್ದರು ಎಂದು ಯೋಗೇಂದ್ರ ಯಾದವ್ ಹೇಳಿದ್ದಾರಲ್ಲದೆ ಈ ಕುರಿತು ದೂರಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: 22 FIR; 200 ರೈತರ ಬಂಧನ: ಸಿಖ್‌ ಧ್ವಜ ಹಾರಿಸಿದ ದೀಪ್ ಸಿಧು ಹೆಸರು ಕೈಬಿಟ್ಟ ಪೊಲೀಸರು!

“ಆತ (ಸಿಧು) ಬಿಜೆಪಿ ಜತೆ ನಂಟು ಹೊಂದಿದ್ದಾನೆ ಹಾಗೂ ಸಂಸದ ಸನ್ನಿ ಡಿಯೋಲ್ ಪ್ರಚಾರ ಸಂದರ್ಭ ಅವರ ಏಜಂಟ್ ಆಗಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿ ಜತೆಗೆ ಆತನಿರುವ ಚಿತ್ರವೂ ಇದೆ. ಮಂಗಳವಾರದ ಘಟನೆ ಸಂದರ್ಭದ ವೀಡಿಯೋಗಳಲ್ಲಿ ಆತ ಕಾಣಿಸಿಕೊಂಡಿದ್ದರೂ ಇನ್ನೂ ಆತನನ್ನು ಬಂಧಿಸಲಾಗಿಲ್ಲ,” ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.

ಕೆಂಪು ಕೋಟೆಯಲ್ಲಿ ಧ್ವಜ ಹಾರಿಸಿದ್ದು ದೀಪ್ ಸಿಧು ಎಂದು ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಆರೋಪಿಸಿದ್ದಾರೆ. “ಆತ (ಸಿಧು) ನಿಷೇಧಿತ ತೀವ್ರಗಾಮಿ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ ಸದಸ್ಯನಾಗಿದ್ದಾನೆ,” ಎಂದೂ ಅವರು ಹೇಳಿಕೊಂಡರು.

ಕೆಂಪು ಕೋಟೆ ಘಟನೆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ವೀಡಿಯೋದಲ್ಲಿ ಹಿಂದಿಯಲ್ಲಿ ಮಾತನಾಡುತ್ತಿದ್ದ ಸಿಧು, “ಆವೇಶದ ಭರದಲ್ಲಿ ಅಲ್ಲಿ ನಿಶಾನ್ ಸಾಹಿಬ್ ಹಾಗೂ ಕಿಸಾನ್ ಯೂನಿಯನ್ ಧ್ವಜಗಳನ್ನು ಹಾರಿಸಲಾಯಿತು,” ಎಂದಿದ್ದಾರೆ. “ಇಷ್ಟು ದೊಡ್ಡ ಗುಂಪನ್ನು ದೀಪ್ ಸಿಧು ಹೇಗೆ ಮುನ್ನಡೆಸಬಹುದು? ಕೆಂಪು ಕೋಟೆಗೆ ಪ್ರತಿಭಟನಾಕಾರರನ್ನು ಮುನ್ನಡೆಸುತ್ತಿರುವ ಒಂದೇ ಒಂದು ವೀಡಿಯೋ ಇಲ್ಲ,” ಎಂದು ಹೇಳಿಕೊಂಡಿದ್ದಾನೆ.

ಸಿಧುಗೆ ರಾಜಕೀಯ ಮಹತ್ವಾಕಾಂಕ್ಷೆಯಿದ್ದು ತನ್ನದೇ ಪಕ್ಷ ರಚಿಸಬೇಕೆಂಬ ಉದ್ದೇಶವನ್ನೂ ಆತ ಹೊಂದಿದ್ದ. ರೈತ ಪ್ರತಿಭಟನೆಯಲ್ಲಿ ಅವರಿಬ್ಬರೂ ಸಕ್ರಿಯರಾಗಿದ್ದರೂ ನಂತರ ಅವರನ್ನು ಅಲ್ಲಿಂದ ಹೊರಕ್ಕೆ ಕಳುಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ ಎಂದು indiatoday.in ವರದಿ ಮಾಡಿದೆ.

ಇದನ್ನೂ ಓದಿ: ಆಘಾತಕಾರಿ ಸುದ್ದಿ: ಕೆಂಪುಕೋಟೆಯಲ್ಲಿ ಸಿಖ್‌ ‍ಧ್ವಜ ಹಾರಿಸಿದ್ದು BJP ಕಾ‍ರ್ಯಕರ್ತ ದೀಪ್‌ ಸಿಧು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights