ಇಂದು ಸಂಜೆ ನಾಲ್ಕು ಗಂಟೆಗೆ ಜೆಎನ್‌ಯುನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಮಾಜಿ ಜೆಎನ್‌ಯು ವಿದ್ಯಾರ್ಥಿ ನಾಯಕ ಮತ್ತು ಹೋರಾಟಗಾರ ಕನ್ಹಯ್ಯ ಕುಮಾರ್‌ ಭಾಗವಹಿಸಲಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು ಹಾಲಿ ಅಧ್ಯಕ್ಷೆ ಆಯಿಶೆ ಘೋಷ್‌ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ನಿಮಗೆ ಹೆಚ್ಚಿನ ಶಕ್ತಿ ಸಿಗಲಿ ಕಾಮ್ರೇಡ್ ಆಯಿಶೆ. ಈ ಹೇಡಿ ಸರ್ಕಾರವು ಸುಳ್ಳು ಕೇಸುಗಳ ಮೂಲಕ ನಿಮ್ಮನ್ನು ಬಂಧಿಸದಿದ್ದರೆ, ಇಂದು ಸಂಜೆ 4 ಗಂಟೆಗೆ ಸಬರಮತಿ ಟಿ-ಪಾಯಿಂಟ್‌ನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ. ಒಂದು ವೇಳೆ ಬಂಧಿಸಿದರೆ ನಾವು ಮತ್ತೆ ಹೋರಾಡಲು ಸಿದ್ಧರಿದ್ದೇವೆ. ಎಂದು ಕನ್ಹಯ್ಯ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಇದಕ್ಕೂ ಮೊದಲು ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ಪತ್ರಿಕಾಗೋಷ್ಠಿ ನಡೆಸಿದ ಆಯಿಶೆ ಘೋಷ್‌ “ನಿಮ್ಮ ಪ್ರತಿಯೊಂದು ಕಬ್ಬಿಣದ ಸರಳುಗಳ ಏಟಿಗೂ ನಾವು ಚರ್ಚೆ ಮತ್ತು ಸಂವಾದದಿಂದ ಉತ್ತರ ಕೊಡುತ್ತೇವೆ. ಈ ಜೆಎನ್‌ಯು ಸಂಸ್ಕೃತಿಯನ್ನು ನೀವು ಹಿಂಸೆಯ ಮೂಲಕ ಕೊನೆಗೊಳಿಸಲು ಸಾಧ್ಯವಿಲ್ಲ. ನಾವು ಜೆಎನ್‌ಯುವಿನ ಪ್ರಜಾತಾಂತ್ರಿಕ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇವೆ” ಎಂದು ಘೋಷಿಸಿದ್ದರು.

ಕನ್ಹಯ್ಯ ಕುಮಾರ್‌ರವರ ಇನ್ನೊಂದು ಟ್ವೀಟ್‌ನಲ್ಲಿ ಜನರು ಮೌನ ಮುರಿದು ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಆಗ್ರಹಿಸಿದ್ದರು.

ಮೌನವು ಯಾವಾಗಲೂ ದಬ್ಬಾಳಿಕೆಗೆ ಸಹಾಯ ಮಾಡುತ್ತದೆ, ಎಂದಿಗೂ ತುಳಿತಕ್ಕೊಳಗಾದವರಿಗಲ್ಲ. ತಡವಾಗುವ ಮುನ್ನ ಮಾತನಾಡಿ. ಅವರು ನಿಮ್ಮ ಪ್ರತಿರೋಧದ ಹಕ್ಕನ್ನು ಕಸಿದುಕೊಳ್ಳುವ ಮೊದಲು ವಿರೋಧಿಸಿ. ದೇಶಾದ್ಯಂತ ವಿದ್ಯಾರ್ಥಿಗಳು ಭಾರತದ ಪರಿಕಲ್ಪನೆಯನ್ನು ರಕ್ಷಿಸುವ ಈ ಐತಿಹಾಸಿಕ ಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಅವರಿಗೆ ಬೆಂಬಲ ಹಸ್ತ ನೀಡಿ..

ಹಿಂಸೆಗಿಳಿಯಬೇಡಿ, ಹಾಗಂತ ಮೌನವಾಗಿರಬೇಡಿ…