ರೈತ ಹೋರಾಟ: ಸಿಂಘು ಗಡಿಯಲ್ಲಿ ಕೈ-ಕಾಲು ಕತ್ತರಿಸಿದ ಸ್ಥಿತಿಯಲ್ಲಿ ಅನಾಮದೇಯ ಯುವಕನ ಮೃತದೇಹ ಪತ್ತೆ

ರೈತ ವಿರೋಧಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ದೆಹಲಿಯ ಸಿಂಘು ಗಡಿಯಲ್ಲಿ ಶುಕ್ರವಾರ ಯುವಕನ ಮೃತದೇಹ ಪತ್ತೆಯಾಗಿದೆ. ವೇದಿಕೆ ಮುಂಭಾಗದ ಬ್ಯಾರಿಕೇಡ್‌ಗೆ ಮೃತದೇಹವನ್ನು ಕಟ್ಟಲಾಗಿದೆ ಎಂದು ವರದಿಯಾಗಿದೆ.

ಹರಿಯಾಣದ ಸೋನಿಪತ್ ಜಿಲ್ಲೆಯ ಕುಂಡ್ಲಿಯ ಸಿಂಘು ಗಡಿಯಲ್ಲಿರುವ ವೇದಿಕೆಯ ಸಮೀಪದ ತಾತ್ಕಾಲಿಕ ಗುರುದ್ವಾರದಲ್ಲಿ ಇರಿಸಲಾಗಿರುವ ಗುರು ಗ್ರಂಥ ಸಾಹಿಬ್‌ಗೆ ಮೃತ ವ್ಯಕ್ತಿ ಅಗೌರವ ತೋರಿದ್ದಾನೆ. ಹೀಗಾಗಿ ಈ ಕೃತ್ಯದಲ್ಲಿ ನಿಹಾಂಗ್‌ಗಳ ಕೈವಾಡವಿದೆ ಎಂದು ಶಂಕಿಸಲಾಗಿದೆ. ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ.

ಬೆಳಿಗ್ಗೆ 5: 30 ರ ಸುಮಾರಿಗೆ ಹತ್ಯೆಯ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬ್ಯಾರಿಕೇಡ್‌ನಲ್ಲಿ ಕಟ್ಟಲಾಗಿದ್ದ ಮೃತದೇಹದ ಎಡಗೈನ ಮುಂಗೈ ಕತ್ತರಿಸಲಾಗಿದೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ರೈತ ಪರ ಟ್ವೀಟ್: ವರುಣ್ ಗಾಂಧಿ, ಮೇನಕಾ ಗಾಂಧಿಯನ್ನು ಕಾರ್ಯಕಾರಿಣಿ ಪಟ್ಟಿಯಿಂದ ತೆಗೆದ ಬಿಜೆಪಿ!

“ಇಂದು ಮುಂಜಾನೆ 5 ಗಂಟೆಗೆ, ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ಕೈಗಳು, ಕಾಲುಗಳನ್ನು ಕತ್ತರಿಸಿದ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಯಾರು ಕಾರಣ ಎಂಬ ಬಗ್ಗೆ ಮಾಹಿತಿಯಿಲ್ಲ. ಅನಾಮಧೇಯ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವೈರಲ್ ಆಗಿರುವ ವಿಡಿಯೊ ತನಿಖೆಯ ಭಾಗವಾಗಿದೆ. ವದಂತಿಗಳು ಕಾಲಹರಣ ಮಾಡಿಸುತ್ತವೆ ಅಷ್ಟೇ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹಂಸರಾಜ್ ಹೇಳಿಕೆಯನ್ನು ಸುದ್ದಿ ಸಂಸ್ಥೆ ಎಎನ್ಐ ಉಲ್ಲೇಖಿಸಿದೆ.

ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಿದ ಆರೋಪದಲ್ಲಿ ನಿಹಾಂಗ್ಸ್ ಯುವಕನನ್ನು ಹೊಡೆದಿದ್ದಾರೆ ಎಂದು ವರದಿಗಳು ಹೇಳಿವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೊಗಳು ವೈರಲ್ ಆಗಿವೆ.

ಶಾಂತಿಯುತವಾಗಿ ಸಾಗುತ್ತಿರುವ ರೈತರ ಪ್ರತಿಭಟನೆಗೆ ಅಪಖ್ಯಾತಿ ತರುವ ಪ್ರಯತ್ನ ಇದು ಎಂದು ಹಲವು ರೈತರು ಆರೋಪಿಸಿದ್ದಾರೆ.

ಇದನ್ನೂ ಓದಿ: ಲಖಿಂಪುರ ರೈತರ ಹತ್ಯೆ ಪೂರ್ವನಿಯೋಜಿತ?; ವಿಡಿಯೋದಲ್ಲಿ ಬಯಲಾಯ್ತು ಬರ್ಬರ ಕೃತ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights