ಲಖಿಂಪುರ ರೈತರ ಹತ್ಯೆ ಪೂರ್ವನಿಯೋಜಿತ?; ವಿಡಿಯೋದಲ್ಲಿ ಬಯಲಾಯ್ತು ಬರ್ಬರ ಕೃತ್ಯ

ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹತ್ತಿಸಿ ಹತ್ಯೆಗೈದಿದ್ದು, ಪೂರ್ವನಿಯೋಜತೆವೇ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಫೋರ್‌ವೀಲ್ ವಾಹನವೊಂದು (ಮಹೀಂದ್ರಾ ಥಾರ್‌ನಂತೆ ಕಾಣುವ ವಾಹನ) ಗುದ್ದುತ್ತ ಮುನ್ನುಗ್ಗುತ್ತದೆ. ನೋಡ ನೋಡುತ್ತಲೇ 4 ಮಂದಿ ಪ್ರತಿಭಟನಾ ನಿರತರು ಸಾವಿಗೀಡಾಗುತ್ತಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಘಟನೆಗೆ ಸಂಬಂಧಿಸಿದ 27 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಅಮಾನವೀಯ ಘಟನೆಯ ಅನಾವರಣವಾಗಿದೆ. ಫೋರ್‌ವೀಲ್‌ ವಾಹನ ಹಿಂದಿನಿಂದ ಗುದ್ದುತಿದ್ದಂತೆ ರೈತರು ಚೆಲ್ಲಾಪಿಲ್ಲಿಯಾಗಿ ಹಾದಿಯಲ್ಲಿ ಬೀಳುತ್ತಾರೆ. ರೈತರೊಬ್ಬರು ವಾಹನದ ಬಾನೆಟ್‌ ಮೇಲೆ ಬಿದ್ದು, ಅಲ್ಲಿಂದ ರಸ್ತೆಗೆ ಬೀಳುತ್ತಾರೆ. ಅದರ ಹಿಂದೆಯೇ ಮತ್ತೊಂದು ಎಸ್‌ಯುವಿ ಸೈರನ್‌ ಮಾಡುತ್ತ, ಬಿದ್ದ ರೈತರನ್ನು ಗಮನಿಸದೆಯೇ ಸಾಗುತ್ತದೆ.

ಕಾಂಗ್ರೆಸ್‌ ಟ್ವಿಟರ್‌ ಖಾತೆಯಲ್ಲೂ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಇದು ಲಖಿಂಪುರ–ಖೇರಿಯ ಘಟನೆಯೇ ಅಥವಾ ಇಲ್ಲವೇ ಎಂಬುದನ್ನು ಪೊಲೀಸರು ಇನ್ನಷ್ಟೇ ಪರಿಶೀಲಿಸಬೇಕಿದೆ. ವಿಡಿಯೊ ಗುಣಮಟ್ಟ ಕಡಿಮೆ ಇರುವುದರಿಂದ ವಾಹನವನ್ನು ಯಾರು ಚಲಾಯಿಸುತ್ತಿದ್ದರು ಎಂಬುದು ಸ್ಪಷ್ಟವಾಗಿ ಕಾಣುವುದಿಲ್ಲ.

ಕೇಂದ್ರ ಸಚಿವ ಅಜಯ್‌ ಮಿಶ್ರಾ ಮತ್ತು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಅವರನ್ನು ತಡೆಯಲು ನೂರಾರು ರೈತರು ಭಾನುವಾರ ಯತ್ನಿಸಿದ್ದರು. ಈ ಗುಂಪಿನ ಮೇಲೆ ಮಿಶ್ರಾ ಅವರಿಗೆ ಸಂಬಂಧಿಸಿದ ಎಸ್‌ಯುವಿ ಹರಿದು ನಾಲ್ವರು ರೈತರು ಮೃತಪಟ್ಟರು. ನಂತರ ನಡೆದ ಹಿಂಸಾಚಾರಕ್ಕೆ ನಾಲ್ವರು ಬಲಿಯಾದರು. ರೈತರ ಮೇಲೆ ಹರಿದ ಕಾರನ್ನು ಅಜಯ್‌ ಮಿಶ್ರಾ ಮಗ ಆಶಿಶ್‌ ಮಿಶ್ರಾ ಚಾಲನೆ ಮಾಡಿದ್ದರು ಎಂದು ರೈತರು ಆರೋಪಿಸಿದ್ದಾರೆ.

ರೈತರು ಮತ್ತು ಸರ್ಕಾರದ ನಡುವೆ ಸೋಮವಾರ ಒಪ್ಪಂದ ಏರ್ಪಟ್ಟಿದೆ. ಮೃತರ ಕುಟುಂಬಕ್ಕೆ ತಲಾ ₹45 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹10 ಲಕ್ಷ ಪರಿಹಾರ ನೀಡಲು ಸರ್ಕಾರ ಒಪ್ಪಿದೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಮಗ, ರೈತರ ಮೇಲೆ ಎಸ್‌ಯುವಿ ಹರಿಸಿದ ಆರೋಪ ಹೊತ್ತಿರುವ ಆಶಿಶ್‌ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಮೃತ ರೈತರ ಅಂತ್ಯ ಸಂಸ್ಕಾರಕ್ಕೆ ರೈತ ನಾಯಕರು ಒಪ್ಪಿದ್ದಾರೆ, ಜತೆಗೆ ಅವರು ಪ್ರತಿಭಟನೆಯನ್ನೂ ಕೊನೆಗೊಳಿಸಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್‌ ಕುಮಾರ್‌ ಅವರು ಲಖಿಂಪುರ–ಖೇರಿಯಲ್ಲಿ ಸೋಮವಾರ ಪ್ರಕಟಿಸಿದ್ದಾರೆ.

ನಾಲ್ವರು ರೈತರು ಸೇರಿ ಎಂಟು ಮಂದಿಯ ಸಾವಿಗೆ ಕಾರಣವಾದ ಪ್ರಕರಣದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: ಲಖಿಂಪುರ್ ಖೇರಿ ಹಿಂಸಾಚಾರ : ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರನ ವಿರುದ್ಧ ಎಫ್‌ಐಆರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights