ಬಿಹಾರ ಸಂಪುಟ ವಿಸ್ತರಣೆ; BJPಗೆ ಎಚ್ಚರಿಕೆ ಸಂದೇಶ ರವಾನಿಸಿದ ಸಿಎಂ ನಿತೀಶ್‌ ಕುಮಾರ್!

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಎನ್‌ಡಿಯ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ಬಿಜೆಪಿಗರಿಗೆ ಹೆಚ್ಚಿನ ಮಂತ್ರಿಗಿರಿ ದೊರೆತಿದೆ. ಆದರೆ, ಗೃಹ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಕಾರ್ಯಗಳು, ಜಲಸಂಪನ್ಮೂಲ ಇಲಾಖೆಗಳಂತಹ ಮುಖ್ಯ ಖಾತೆಗಳನ್ನು ನಿತೀಶ್‌ ತಮ್ಮ ಪಕ್ಷ ಜೆಡಿಯು ಶಾಸಕರಿಗೇ ನೀಡಿದ್ದಾರೆ. ಈ ಮೂಲಕ ಬಿಜೆಪಿಗೆ ನಿರ್ಧಾರ-ಆಡಳಿತ ಎಲ್ಲವೂ ತಮ್ಮದೇ ಆಗಿರಲಿದೆ ಎಂದು ನಿತೀಶ್‌ ಕುಮಾರ್‌ ಬಿಜೆಪಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ, ಮುಖ್ಯಮಂತ್ರಿ ಸ್ಥಾನವನ್ನು ಜೆಡಿಯುಗೆ ಬಿಟ್ಟುಕೊಟ್ಟಿತ್ತು. ಆದರೆ, ಹಲವು ವಿಚಾರಗಳಲ್ಲಿ ತಮ್ಮ ಪ್ರಭಾವವನ್ನು ಹೇರಲು ಮುಂದಾಗಿತ್ತು. ಆದರೆ, ಇದಕ್ಕೆ ಬಗ್ಗುವುದಿಲ್ಲ ಎಂದು ನಿತೀಶ್‌ ಹಿಂದೊಮ್ಮೆ ಹೇಳಿದ್ದರು. ಇದೀಗ ಸಂಪುಟ ವಿಸ್ತರಣೆಯಲ್ಲೂ ಅದನ್ನು ತೋರಿಸಿದ್ದಾರೆ. ಹೆಚ್ಚು ಮಂತ್ರಿಸ್ಥಾನಗಳನ್ನು ಪಡೆದುಕೊಂಡಿರುವ ಬಿಜೆಪಿ, ಅವಗಳನ್ನು ಉಳಿಸಿಕೊಳ್ಳಲು ನಿತೀಶ್‌ ಅವರ ನಿರ್ಧಾರವನ್ನು ಒಪ್ಪಿಕೊಂಡಿದೆ.

ಪ್ರಸ್ತುತ ಬಿಜೆಪಿಯಲ್ಲಿ 16 ಮಂತ್ರಿಗಳಿದ್ದು, ಅವರ ಬಳಿ 22 ಖಾತೆಗಳಿವೆ. ಜೆಡಿಯುಗೆ 13 ಮಂತ್ರಿಗಳಿದ್ದರೂ 21 ಪ್ರಮುಖ ಇಲಾಖೆಯನ್ನು ಹಿಡಿತದಲ್ಲಿಟ್ಟುಕೊಂಡಿದೆ. ಜಿತಾನ್ ರಾಮ್ ಮಾಂಜಿ ಅವರ ಎಚ್‌ಎಎಂ ಪಕ್ಷಕ್ಕೆ ಮತ್ತು ವಿಐಪಿ ಪಕ್ಷಕ್ಕೆ ತಲಾ ಒಂದು ಸಚಿವ ಸ್ಥಾನವನ್ನು ನೀಡಲಾಗಿದೆ.

ಇದನ್ನೂ ಓದಿ: BJPಗೆ ಕೌಂಟರ್‌ ಕೊಡಲು 05 ಲಕ್ಷ ಸೋಷಿಯಲ್‌ ಮೀಡಿಯಾ ಕಾರ್ಯಕರ್ತರ ನೇಮಕಕ್ಕೆ ಮುಂದಾದ ಕಾಂಗ್ರೆಸ್‌!

ಹೊಸ ಮಂತ್ರಿ ಮಂಡಲದ ಹಿರಿಯ ನಾಯಕ, ಮಾಜಿ ಕೇಂದ್ರ ಮಂತ್ರಿ ಶಹನಾವಾಜ್ ಹುಸೇನ್‌ಗೆ‌‌ ಯಾವುದೇ ಉದ್ಯಮವನ್ನು ಹೊಂದಿರದ ರಾಜ್ಯದಲ್ಲಿ ಉದ್ಯಮ ಸಚಿವಾಲಯವನ್ನು ನೀಡಲಾಗಿದೆ. ಉಪಮುಖ್ಯಮಂತ್ರಿ ರೇಣು ದೇವಿಗೆ ವಿಪತ್ತು ನಿರ್ವಹಣಾ ಖಾತೆಯನ್ನು ನೀಡಲಾಗಿದೆ.

36 ಸದಸ್ಯರನ್ನು ಹೊಂದಿರುವ ಬಿಹಾರ ಸಚಿವ ಸಂಪುಟದಲ್ಲಿ, ಇದುವರೆಗೂ ಮುಖ್ಯಮಂತ್ರಿಯ ಹೊರತಾಗಿ ಕೇವಲ 13 ಮಂದಿ ಮಾತ್ರ ಸಚಿವರಿದ್ದರು.

ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷವು ಏಕಾಂಗಿಯಾಗಿ ಸ್ಪರ್ಧೆ ಮಾಡಿದ್ದರಿಂದ ಬಿಜೆಪಿಯು ಬಿಹಾರದಲ್ಲಿ ಅದ್ಬುತ ಫಲಿತಾಂಶ ಪಡೆಯುವಂತಾಯಿತು. ಪಾಸ್ವಾನ್ ಅವರ ಪಕ್ಷವು ಬಿಜೆಪಿ ಸ್ಫರ್ಧಿಸಿರುವ ಕ್ಷೇತ್ರಗಳನ್ನು ಬಿಟ್ಟು ಜೆಡಿಯು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ, ಜೆಡಿಯು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲದಂತೆ ನೋಡಿಕೊಂಡಿದ್ದರು.

ಇದರಿಂದಾಗಿ ಈ ಹಿಂದೆ 71 ಸ್ಥಾನಗಳನ್ನು ಹೊಂದಿದ್ದ ನಿತೀಶ್ ಕುಮಾರ್ ಪಕ್ಷವಾದ ಜೆಡಿಯು 43 ಕ್ಕೆ ಇಳಿಯಿತು. ಬಿಜೆಪಿಯು 74 ಸ್ಥಾನಗಳನ್ನು ಗೆದ್ದು ಮೈತ್ರಿಕೂಟದ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಚುನಾವಣೆಯ ನಂತರ ಈ ಬಗ್ಗೆ ನಿತೀಶ್ ಕುಮಾರ್ ತಮ್ಮ ಸೋಲಿಗೆ‌ ಎಲ್‌ಜೆಪಿಯನ್ನು ದೂಷಿಸಿದ್ದರು.

ಇದನ್ನೂ ಓದಿ: ರೈತ ಹೋರಾಟದ ನಡುವೆ ಪಂಜಾಬ್‌ ಚುನಾವಣೆ: BJPಗೆ ಸೋಲೆಂದು ಕೇಸರಿ ಮುಖಂಡರ ಸ್ವತಂತ್ರ ಸ್ಪರ್ಧೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights