ಮಾಜಿ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂ
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಿಸಿ ದಾಖಲಿಸಲಾಗಿದ್ದ ಸು-ಮೋಟು ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದೆ. ಅಲ್ಲದೆ, ಈ ಆರೋಪವು ನ್ಯಾಯಾಂಗದ ವಿರುದ್ಧ ಪಿತೂರಿಯ ಭಾಗವಾಗಿರಬಹುದು ಎಂದು ಅಭಿಪ್ರಾಯ ಪಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಮರುಪಡೆಯಲು ಸಾಧ್ಯವಾಗದೇ ಇರುವುದನ್ನು ಉಲ್ಲೇಖಿಸಿರುವ ಸುಪ್ರೀಂ, ಪ್ರಕರಣವನ್ನು ವಜಾಗೊಳಿಸಿದೆ.
ಎರಡು ವರ್ಷಗಳು ಕಳೆದಿವೆ ಮತ್ತು ಎಲೆಕ್ಟ್ರಾನಿಕ್ ದಾಖಲೆಗಳನ್ನು ಹಿಂಪಡೆಯುವ ಸಾಧ್ಯತೆ ಬಹಳ ಕಡಿಮೆ ಇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಗುಪ್ತಚರ ಬ್ಯೂರೋದ ನಿರ್ದೇಶಕರ ಪತ್ರವೊಂದನ್ನು ಉಲ್ಲೇಖಿಸಿರುವ ನ್ಯಾಯಾಲಯ, ಅಸ್ಸಾಂನಲ್ಲಿ ಎನ್‌ಆರ್‌ಸಿ ಸಿದ್ಧಪಡಿಸುವ ಕುರಿತಂತೆ ನ್ಯಾಯಾಂಗದ ಕಡೆಯಿಂದ ಗೊಗೊಯ್ ಅವರ ನಿರ್ಧಾರಗಳನ್ನು ವಿರೋಧಿಸಿ ಇಂತಹ ಕೆಲವು ಪಿತೂರಿಗಳು ನಡೆದಿರಬಹುದು ಎಂದು ಹೇಳಿದೆ. ಅಲ್ಲದೆ, ಸಿಜೆಐ ವಿರುದ್ಧ ಕೆಲವು ರೀತಿಯ ಪಿತೂರಿ ನಡೆದಿರಬಹುದು ಎಂದು ನಂಬಲು ಬಲವಾದ ಕಾರಣಗಳಿವೆ ಎಂದೂ ಅದು ಹೇಳಿದೆ.
ಗೊಗೊಯ್ ವಿರುದ್ಧ ಸಂಭವನೀಯ ಪಿತೂರಿ ಕುರಿತು 3 ನ್ಯಾಯಾಧೀಶರ ಪೀಠವು ತನಿಖೆ ನಡೆಸಬೇಕು ಎಂದು ಕೇಳಿರುವ ನಿವೃತ್ತ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಅವರ ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ. ಅಲ್ಲದೆ, ಪ್ರಸ್ತುತ ಸಿಜೆಐ ಎಸ್‌ಎ ಬೊಬ್ಡೆ ನೇತೃತ್ವದ ಸಮಿತಿಯ ಮತ್ತೊಂದು ವರದಿಯನ್ನು ಸಹ ಸಲ್ಲಿಸಲಾಗಿದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹೇಳಿದ್ದಾರೆ.
“ಎರಡು ವರ್ಷಗಳು ಕಳೆದಿವೆ, ಹೆಚ್ಚಿನ ಎಲೆಕ್ಟ್ರಾನಿಕ್ ಪುರಾವೆಗಳನ್ನು ಮರುಪಡೆಯುವ ಸಾಧ್ಯತೆಯಿಲ್ಲ. ಹೀಗಾಗಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗುತ್ತದೆ” ಎಂದು ನ್ಯಾಯಮೂರ್ತಿ ಕೌಲ್ ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳದಲ್ಲಿ BJPಗೆ ಮತ್ತಷ್ಟು ಬಲ; ನಟ ಸ್ಟಾರ್‌ಗುಪ್ತಾ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆ!

