ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆಯೇ ಸಿಪಿ ಯೋಗೇಶ್ವರ್? ಕೇಸರಿ ನಾಯಕರ ಸ್ಪಷ್ಟನೆ!

ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಬಿಜೆಪಿ ಪಕ್ಷ ತೊರೆದು, ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತಿದೆ. ಈ ಬೆನ್ನಲ್ಲೇ, ಕಾಂಗ್ರೆಸ್ ಸೇರುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ ಎಂಬ ವದಂತಿಗಳೂ ಇದ್ದು, ಇದನ್ನು ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅಲ್ಲಗಳೆದಿದ್ದಾರೆ.

ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ನಾಯಕರಿಗೆ ಇಷ್ಟೊಂದು ಮಾನ್ಯತೆ ನೀಡಿದ್ದಾರೆ. ಆದರೆ ಸಿ.ಪಿ. ಯೋಗೇಶ್ವರ್ ಬಿಜೆಪಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಯೋಗೇಶ್ವರ್ ನಮ್ಮ ಪಕ್ಷದಲ್ಲೇ ಇರುತ್ತಾರೆ, ನಮ್ಮ ನಾಯಕರಾಗಿ ಬಿಜೆಪಿ ಪಕ್ಷದಲ್ಲೇ ಸದೃಢವಾಗಿ ಬೆಳೆಯುತ್ತಾರೆ. ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಅವರು ಸ್ಪರ್ಧಿಸುತ್ತಾರೆ ಎಂದು ಅಶ್ವತ್ಥ ನಾರಾಯಣ ಹೇಳಿದ್ದಾರೆ.

ನಮ್ಮ ಪಕ್ಷದ ನಾಯಕರಿಗೆ ಪ್ರತಿಪಕ್ಷದ ನಾಯಕರು ಮನ್ನಣೆ ನೀಡುವಾಗ, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯುತ್ತಾರೆ. ನಮ್ಮ ಪಕ್ಷದ ನಾಯಕರ ಶಕ್ತಿ ಮತ್ತು ಅವರ ಪ್ರತಿಭೆಗೆ ಮನ್ನಣೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಕರೆಯುತ್ತಿದ್ದಾರೆ. ಅವರು ಯಾವುದೇ ಕಾರಣಕ್ಕೂ ಅವರ ಜೊತೆ ಹೋಗುವುದಿಲ್ಲ ಎಂದರು.

ಇನ್ನು ಸಿ.ಪಿ. ಯೋಗೇಶ್ವರ್ ಹಲವು ಬಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಅವರಿಗೇನು ಹೊಸದಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರಿಗೆ ಯಾವೆಲ್ಲಾ ಗೌರವ, ಸ್ಥಾನಮಾನ ನೀಡಬೇಕು ಎಲ್ಲವೂ ಸಿಗುತ್ತದೆ ಎಂದು ಸಚಿವ ಅಶ್ವಥ್ ನಾರಾಯಣ್ ಭವಿಷ್ಯ ನುಡಿದರು.

ಪೆಟ್ರೋಲ್- ಡೀಸೆಲ್ ಬೆಲೆ ಇಳಿಕೆ ಸಮರ್ಥನೆ ಮಾಡಿಕೊಂಡ ಸಚಿವ ಅಶ್ವಥ್ ನಾರಾಯಣ್

ರಾಜ್ಯ ಎರಡು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ನಂತರ ಪೆಟ್ರೋಲ್- ಡೀಸೆಲ್ ಬೆಲೆ ಇಳಿಕೆ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿ, ಆಗ ದರ ಏರಿಕೆಯಾಗಿದ್ದು, ಅಂತಾರಾಷ್ಟ್ರೀಯ ಬೆಲೆಗಳು ಏರಿಕೆಯಾಗುತ್ತಿತ್ತು. ದರ ಏರಿಕೆಯಾಗಿರುವುದನ್ನು ಕಡಿವಾಣ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದರು.

ಕೇಂದ್ರ ಸರ್ಕಾರದ ನಂತರ ರಾಜ್ಯ ಸರ್ಕಾರ ಕೂಡ ಇಂಧನ ಬೆಲೆ ಇಳಿಸುವ ನಿಲುವು ತೆಗೆದುಕೊಂಡು ದೊಡ್ಡದಾಗಿ ದರ ಕಡಿಮೆ ಮಾಡಲಾಗಿದೆ‌. ರಾಜ್ಯ ಸರ್ಕಾರ ಜನರಿಗೆ ನೆರವು ಕೊಟ್ಟಿರುವುದು ಅನುಕೂಲವಾಗಲಿದೆ. ಉಪ ಚುನಾವಣೆಗಳು ಬರುತ್ತಲೇ ಇರುತ್ತವೆ ಎಂದು ತಿಳಿಸಿದರು.

ಹಲವು ತಿಂಗಳುಗಳ ಹಿಂದೆಯೇ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಲು ತೀರ್ಮಾನ ಮಾಡಲಾಗಿತ್ತು. ರಾತ್ರೋರಾತ್ರಿ ನಿರ್ಧರಿಸಲು ಸಾಧ್ಯವಿಲ್ಲ. ಹಲವು ಬಾರಿ ಸಮಾಲೋಚನೆ ಮಾಡಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನಿರ್ಧಾರಗಳನ್ನು ತಗೆದುಕೊಂಡಿವೆ. ಉಪ‌ ಚುನಾವಣೆಯಿಂದ ದರ ಕಡಿಮೆಯಾಗಿದೆ ಎಂಬ ಮಾತು ಸತ್ಯಕ್ಕೆ ದೂರವಾದ ಮಾತು. ಜನರ ಅನುಕೂಲಕ್ಕಾಗಿ ಈ ನಿರ್ಧಾರ ಮಾಡಲಾಗಿದೆ‌ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಅಭಿಪ್ರಾಯಪಟ್ಟರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights