ಸಂಘಟನೆ-ಚುನಾವಣೆ ವೈಫಲ್ಯ; ಬಿಜೆಪಿ ಅಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್‌ಗೆ ಕೋಕ್‌?

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲಿ ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿಯೇ ಬಿಜೆಪಿ ಸೋಲು ಕಂಡಿದೆ. ಅಲ್ಲದೆ, ನೀರಿಕ್ಷಿತ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವಲ್ಲಿನ ವೈಫಲ್ಯ ಮತ್ತು ಕಾರ್ಯಕರ್ತರ ವಿಶ್ವಾಸ ಪಡೆಯುವಲ್ಲಿನ ವಿಫಲತೆಯ ಕಾರಣಕ್ಕಾಗಿ ನಳಿನ್‌ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಿಸುವ ಸಾಧ್ಯತೆ ಇದೆ ಎಂಬ ಚರ್ಚೆಯಾಗುತ್ತಿದೆ.

ಕಟೀಲ್‌ ಅವರು ಅಧ್ಯಕ್ಷರಾದ ಬಳಿಕ ಸ್ವತಂತ್ರವಾಗಿ ಯಾವುದೇ ಪ್ರಮುಖ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಪ್ರತಿಯೊಂದನ್ನು ದೆಹಲಿ ನಾಯಕರ ಕಣ್ಣಳತೆಗಷ್ಟೇ ಕೆಲಸ ಮಾಡುತ್ತಾರೆ. ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವಲ್ಲೂ ಅವರು ವಿಫಲರಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ನಡೆದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 12 ಕ್ಷೇತ್ರಗಳನ್ನು ಗೆದ್ದಿತ್ತು. ಇದರಲ್ಲಿ ಯಡಿಯೂರಪ್ಪನವರ ಪ್ರಭಾವ ಹಾಗೂ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಕಾರಣ ಎಂದು ಹೇಳಲಾಗಿತ್ತು.

ನಂತರ ಬಸವ ಕಲ್ಯಾಣ, ಮಸ್ಕಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಬಿಎಸ್‍ವೈ ಪ್ರಭಾವವೇ ಕೆಲಸ ಮಾಡಿತ್ತು. ಇಲ್ಲಿ ಪಕ್ಷದ ಅಧ್ಯಕ್ಷರಾಗಿರುವ ಕಟೀಲ್ ಅವರ ಕೊಡುಗೆ ಶೂನ್ಯ ಎಂದು ಪಕ್ಷದ ಕಾರ್ಯಕರ್ತರೇ ದೂರುತ್ತಾರೆ.

ಇತ್ತೀಚೆಗೆ ನಡೆದ ಹಾನಗಲ್ ಉಪಚುನಾವಣೆಯಲ್ಲೂ ಸೋಲಿಗೆ ವ್ಯವಸ್ಥಿತ ಸಂಘಟನೆಯ ಕೊರತೆಯೇ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಉಪಚುನಾವಣೆ: ದೇಶದ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು; ಎರಡನೇ ಸ್ಥಾನದಲ್ಲಿ ಬಿಜೆಪಿ!

ನವೆಂಬರ್ 9ರಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಅಂದು ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಖಜಾಂಚಿ, ಜಿಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕೋರ್ ಕಮಿಟಿ ಮುಖಂಡರ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ವಾಸ್ತವವಾಗಿ ನಳೀನ್‍ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡಿ ತೆರವಾಗಲಿರುವ ಈ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎಂಬುದರ ಬಗ್ಗೆ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಪಕ್ಷದ ಪ್ರಮುಖರ ಜೊತೆ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಬಿಜೆಪಿಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ರಾಜ್ಯಾಧ್ಯಕ್ಷರನ್ನು ಬದಲಾವಣೆ ಮಾಡುವ ಸಂಪ್ರದಾಯವಿದೆ. ರಾಷ್ಟ್ರ ಮಟ್ಟದಲ್ಲಾಗಲಿ ಅಥವಾ ರಾಜ್ಯ ಮಟ್ಟದಲ್ಲಾಗಲಿ ಒಂದು ಬಾರಿ ಅಧ್ಯಕ್ಷರಾದರೆ ಅವರ ಸ್ಥಾನ ಮೂರು ವರ್ಷ ಭದ್ರವಾಗಿರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ನಳೀನ್‍ಕುಮಾರ್ ಕಟೀಲ್ ಅವರಿಗೆ ಈ ಭಾಗ್ಯವಿಲ್ಲ ಎಂದು ಹೇಳಲಾಗಿದೆ.

ಕಟೀಲ್ ಪ್ರತಿಯೊಂದಕ್ಕೂ ದೆಹಲಿಯಲ್ಲಿ ಕುಳಿತಿರುವ ನಾಯಕರನ್ನೇ ಅವಲಂಬಿಸುತ್ತಾರೆ. ಪದಾಕಾರಿಗಳ ನೇಮಕಾತಿ, ಯಾವುದೇ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಚುನಾವಣಾ ಪ್ರಚಾರ, ಕಾರ್ಯತಂತ್ರ ರೂಪಿಸುವುದರಲ್ಲೂ ವಿಫಲರಾಗಿದ್ದಾರೆ. ಅಲ್ಲದೆ ಪದೇ ಪದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದಾರೆ ಎಂಬ ಆರೋಪ ಬಿಜೆಪಿಯಲ್ಲಿ ಬಲವಾಗಿದೆ.

ಇದು ತಾಲ್ಲೂಕು ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದಲ್ಲೂ ಬಿಜೆಪಿಯ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಎಷ್ಟೇ ಒಗ್ಗಟ್ಟಿನಿಂದ ಇದ್ದೇವೆ ಎಂದು ನಾಯಕರು ಹೇಳಿದರೂ, ಯಡಿಯೂರಪ್ಪ ಬಣ ಮತ್ತು ಬಿಜೆಪಿ ಬಣ ಎಂಬ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಸಾಧ್ಯವಾಗಲಿಲ್ಲ.

ನಳೀನ್‍ಕುಮಾರ್ ಕಟೀಲ್ ಒಂದು ವೇಳೆ ಅಧ್ಯಕ್ಷ ಸ್ಥಾನದಿಂದ ಇಳಿದರೆ ತೆರವಾಗಲಿರುವ ಈ ಸ್ಥಾನಕ್ಕೆ ದಲಿತ ಸಮುದಾಯದ ಹಾಗೂ ಆರ್‍ಎಸ್‍ಎಸ್ ಹಿನ್ನೆಲೆಯಲ್ಲಿರುವ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ಮಾಡುವ ಸಂಭವವಿದೆ. ಈ ಪೈಕಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ದೇವಾಲಯದಲ್ಲಿ ಅಲೆಮಾರಿ ಮಹಿಳೆಗೆ ಊಟ ನಿರಾಕರಣೆ; ಮಹಿಳೆಯ ಮನೆಗೆ ಭೇಟಿ ನೀಡಿದ ಸಿಎಂ ಸ್ಟಾಲಿನ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights