ಪ್ರತಿಭಟನೆ ಮತ್ತು ಚುನಾವಣೆಗಳ ಭಯದಿಂದ ಸಿಎಎ ಜಾರಿಗೆ ಹಿಂದೆ ಸರಿಯುತ್ತಿದೆಯೇ ಬಿಜೆಪಿ?
2019ರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದು 2020ರ ಜನವರ 10ಕ್ಕೆ ಒಂದು ವರ್ಷ ಕಳೆದರೂ ಕಾಯ್ದೆಯ ಅನುಷ್ಠಾನಕ್ಕೆ ನಿಯಮಗಳನ್ನು ರೂಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದು ಕುತೂಹಲಕಾರಿಯೂ ಆಗಿದೆ. ಈ ಕಾಯ್ದೆಗಳ ವಿರುದ್ಧ 2019ರ ಜನವರಿ ಮತ್ತು ಫೆಬ್ರವರಿಯಲ್ಲಿ ಭಾರೀ ಪ್ರತಿಭಟನೆಗಳೂ ನಡೆದವು. CAA ಕಾಯ್ದೆಯನ್ನು ವಿರೋಧಿಸುವವರು ಒಂದು ವರ್ಷದ ವಿಳಂಬದ ನಂತರ ಕಾನೂನು ಅನುಷ್ಟಾನಕ್ಕೆ ಮೋದಿ ಸರ್ಕಾರ ಹಿಂಜರಿಯುತ್ತಿದೆ ಎಂದು ಹೇಳುತ್ತಿದ್ದಾರೆ.
ಏಕೆಂದರೆ, ಕಾಯ್ದೆಯನ್ನು ಅನುಷ್ಟಾನ ಗೊಳಿಸಲು ಮುಂದಾದರೆ ಮತ್ತೊಂದು ಸುತ್ತಿನ ಪ್ರತಿಭಟನೆ-ಹೋರಾಟಗಳು ಹೆಚ್ಚಾಗಲಿವೆ. ಅಲ್ಲದೆ, ತಾರತಮ್ಯ ಧೋರಣೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿರುವ ಪೌರತ್ವ ಕಾಯ್ದೆಯು ಅಂತಾರಾಷ್ಟ್ರೀಯ ವಿರೋಧಭಾಸವನ್ನು ಹೊಂದಿದೆ. ಇದರಮಧ್ಯೆ, ಈಗ ದೇಶಾದ್ಯಂತ ನಡೆಯುತ್ತಿರುವ ರೈತ ಹೋರಾಟವನ್ನು ಎದುರಿಸುತ್ತಿರುವ ಸರ್ಕಾರ ಮತ್ತೊಂದು ಹೋರಾಟವನ್ನು ಎದುರಿಸಲಾಗದ ಪರಿಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತಿದೆ.
ಆದರೆ, ಸರ್ಕಾರದ ವಿಳಂಬಕ್ಕೆ ಈ ಅಂಶಗಳು ನಿಖರ ಪಾತ್ರವಿದೆ ಎಂದು ನಿರ್ಣಯಸಬಹುದೇ? ಅಥವಾ ಕೋವಿಡ್-19 ವೈರಸ್ಅನ್ನು ನಿಭಾಯಿಸಲು ಎಣಗಾಡುತ್ತಿರುವ ಸರ್ಕಾರ ನಿಯಮಗಳನ್ನು ರೂಪಿಸಲು ಸಮಯ ತೆಗೆದುಕೊಂಡಿದೆಯೇ? ಸಿಎಎ ಜಾರಿಗೆ ನಿಯಮಗಳನ್ನು ರೂಪಿಸಲು ರಾಜ್ಯಸಭಾ ಸಮಿತಿಯು ಜುಲೈ 09ಕ್ಕೆ ಹೊಸ ಗಡುವು ಹಾಕಿಕೊಂಡಿದೆ. ಬಹುಶಃ ಈ ದಿನಾಂಕ ಬಿಜೆಪಿ ಸರ್ಕಾರಕ್ಕೆ ಸೂಕ್ತವಾಗುದ್ದು ಎಂಬುದೂ ಸತ್ಯ. ಏಕೆಂದರೆ, ಜೂನ್ ವೇಳೆಗೆ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗಳಲ್ಲಿ ಹೊಸ ಸರ್ಕಾರ ರಚನೆಯಾಗಲಿವೆ.
ಇದನ್ನೂ ಓದಿ: ಸಿಎಎ ವಿರುದ್ಧ ಪ್ರತಿಭಟನೆಯ ಆರೋಪಿಗಳಿಗೆ ಜಾಮೀನು : ಪೊಲೀಸರ ವಿರುದ್ಧ FIR
ಈ ನಾಲ್ಕು ರಾಜ್ಯಗಳೂ ವಿಭಿನ್ನವಾದ ರೀತಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಗೆ ಸಾಕ್ಷಿಯಾದ ರಾಜ್ಯಗಳು. ಸಿಎಎಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದರೆ, ಅದು ಈ ರಾಜ್ಯಗಳ ಚುನಾವಣೆಯ ಹಾಟ್ ಬಟನ್ ಆಗಿರುತ್ತಿತ್ತು. ಇದು ರಾಜ್ಯಗಳಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರಗಳ ಕಾರ್ಯಕ್ಷಮತೆ ಮತ್ತು ಜನಾಭಿಪ್ರಾಯಕ್ಕೆ ನಿರ್ಣಾಯಕ ಪಾತ್ರವಹಿಸುತ್ತಿತ್ತು. ಕೇರಳ ಮತ್ತು ತಮಿಳುನಾಡಿನಲ್ಲಿ ಚುನಾವಣಾ ಅನುಕೂಲಗಳಿಗಾಗಿ ಸಿಎಎ ಅನ್ನು ಜಾರಿಗೊಳಿಸಲು ಮುಂದಾಗಿದ್ದ ಬಿಜೆಪಿ ಅಂತಹ ಪರಿಣಾಮಕಾರಿ ನೆಲೆಯನ್ನೂ ಹೊಂದಿಲ್ಲ.

ಇದಕ್ಕೆ ತದ್ವಿರುದ್ಧವಾಗಿ, ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪಶ್ಚಿಮ ಬಂಗಾಳವನ್ನು ಗೆಲ್ಲುವ ಸಂಘಟಿತ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಮಾತ್ರವಲ್ಲದೆ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಸಿಎಎ ಸಂಪೂರ್ಣವಾಗಿ ವಿಭಿನ್ನ ಪ್ರತಿರೋಧವನ್ನು ಹೊಂದಿದೆ. ಈ ಎರಡೂ ರಾಜ್ಯಗಳು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಅಲ್ಲಿಂದ ಹಿಂದೂ ಜನಸಂಖ್ಯೆಯ ಹೆಚ್ಚಿನ ಭಾಗವು ಈ ಎರಡು ರಾಜ್ಯಗಳಿಗೆ ದಶಕಗಳಿಂದ ವಲಸೆ ಬಂದಿದ್ದಾರೆ. ಈ ವಲಸಿಗರು ಸಿಎಎಯನ್ನು ಹೆಚ್ಚು ಬೆಂಬಲಿಸುವವರಾಗಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯು 2014ರ ಡಿಸೆಂಬರ್ 31ರ ಮೊದಲು ಭಾರತಕ್ಕೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಿಂದ ಬಂದ ಮುಸ್ಲಿಮೇತರ ವಲಸಿಗರನ್ನು ಅಕ್ರಮ ವಲಸಿಗರೆಂದು ಪರಿಗಣಿಸುವುದಿಲ್ಲ. ಅವರಿಗೆ ಸೆರೆವಾಸ ಅಥವಾ ಗಡೀಪಾರು ಮಾಡಲಾಗುವುದಿಲ್ಲ; ಅವರಿಗೆ ವೇಗವಾಗಿ ಪೌರತ್ವವನ್ನು ನೀಡುವ ಕೆಲಸಕ್ಕೆ ಮುಂದಾಗುತ್ತದೆ. ಇದು ಮೂಲ ಅಸ್ಸಾಮಿಗರು ಮತ್ತು ಬಂಗಾಳಿಗರ ವಿರೋಧಕ್ಕೆ ಕಾರಣವಾಗಿದೆ.
ಅಸ್ಸಾಂ: ಮುಸ್ಲೀಂ ವಿರೋಧಿ ಧೋರಣೆಯಷ್ಟೇ ಫಲಿಸುವುದಿಲ್ಲ!
ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಹೊಸ ಪೌರತ್ವ ಕಾನೂನನ್ನು ಜಾರಿಗೆ ತರಲು ಬಿಜೆಪಿ ಮುಂದಾಗಲಾರದು. ಅದಕ್ಕೆ ಮುಖ್ಯ ಕಾರಣ ಸಿಎಎ ವಿರೋಧಿ ಅಸ್ಸಾಮಿಗಳ ಹೋರಾಟ. ಭಾರತದ ಹೆಚ್ಚಿನ ಭಾಗಗಳಲ್ಲಿ ಸಿಎಎ ವಿರುದ್ಧದ ಆಂದೋಲನದಲ್ಲಿ ಹೆಚ್ಚಾಗಿ ಮುಸ್ಲಿಮರು ಕಾಣಿಸಿಕೊಂಡಿದ್ದರು. ಆದರೆ, ಅಸ್ಸಾಂನಲ್ಲಿ ಇದ್ದಕ್ಕೆ ತದ್ವಿರುದ್ದವಾಗಿತ್ತು. ಸಿಎಎಗೆ ವಿರೋಧ ವ್ಯಕ್ತಪಡಿಸಿ ಬೀದಿಗಳಿದು ಹೋರಾಟ ನಡೆಸಿದವರು ಸ್ಥಳೀಯ ಅಸ್ಸಾಮೀ ಹಿಂದೂಗಳು.
ಅವರ ಪ್ರತಿರೋಧದ ಮೂಲವು ಅಸ್ಸಾಂನಲ್ಲಿನ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ)ಯಲ್ಲಿ ನಿಗಧಿ ಪಡಿಸಿದ ಕಟ್-ಆಫ್ ದಿನಾಂಕ – ಮಾರ್ಚ್ 25, 1971 ರ ನಂತರ ರಾಜ್ಯಕ್ಕೆ ಬಂದವರೆಲ್ಲರನ್ನು ಅಕ್ರಮ ವಲಸಿಗರು ಎಂದು ಘೋಷಿಸಬೇಕಾಗಿತ್ತು. ಆಗಸ್ಟ್ 2019 ರಲ್ಲಿ ಪ್ರಕಟವಾದ ಎನ್ಆರ್ಸಿಯಲ್ಲಿ ತಮ್ಮ ಪೌರತ್ವವನ್ನು ಸಾಬೀತುಪಡಿಸಲು ದಾಖಲೆಗಳನ್ನು ಸಲ್ಲಿಸಿದ ನಾಗರಿಕರಲ್ಲಿ 19 ಲಕ್ಷ ಜನರನ್ನು ಹೊರಗಿಡಲಾಗಿದೆ; ಅವರಲ್ಲಿ ಸುಮಾರು 12 ಲಕ್ಷ ಮಂದಿ ಬಂಗಾಳಿ ಹಿಂದೂಗಳು ಎಂದು ಹೇಳಲಾಗಿದೆ. ಇದರಿಂದಾಗಿ ಇವರೆಲ್ಲರೂ ಅಕ್ರಮ ವಲಸಿಗರು ಎಂದು ಹೇಳಲಾಗಿತ್ತು. ಈ ಬೃಹತ್ ಸಂಖ್ಯೆಯ ಹಿಂದೂಗಳು ಹೊರಗುಳಿದ ನಂತರ ಅವರಿಗೆ ಪೌರತ್ವ ನೀಡಲು ಸಿಎಎ ಜಾರಿಗೆ ತರಲಾಗಿದೆ. ಇದು ಈ 12 ಲಕ್ಷ ಬಂಗಾಳಿ ಹಿಂದೂಗಳಲ್ಲಿ ಹೆಚ್ಚಿನವರಿಗೆ ಪೌರತ್ವವನ್ನು ನೀಡುತ್ತದೆ.

ಸಿಎಎ ಜಾರಿಗೆ ತರುವ ಮೂಲಕ, ಬಿಜೆಪಿ ನಾಲ್ಕು ದಶಕಗಳಿಂದ ಸ್ಥಳೀಯ ಅಸ್ಸಾಮೀ ಹಿಂದೂಗಳು ಒತ್ತಾಯಿಸುತ್ತಿದ್ದ ಚಳವಳಿಗೆ ದ್ರೋಹ ಬಗೆದಿದೆ ಎಂದು ತಿಳಿದುಬಂದಿದೆ. ಅಕ್ರಮ ವಲಸಿಗರು ಅಥವಾ ಮಾರ್ಚ್ 25, 1971 ರ ನಂತರ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದ ಎಲ್ಲರನ್ನು ಗುರುತಿಸಲಾಗುವುದು ಮತ್ತು ಅವರ ಧರ್ಮವನ್ನು ಲೆಕ್ಕಿಸದೆ ಗಡೀಪಾರು ಮಾಡಲಾಗುತ್ತದೆ ಎಂದು 2016ರ ವಿಧಾನ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹೇಳಿತ್ತು. ಆ ಕಾರಣದಿಂದಾಗಿ ಆ ಚುನಾವಣೆಯಲ್ಲಿ ಅಸ್ಸಾಮೀ ಹಿಂದೂಗಳು ಬಿಜೆಪಿಗೆ ಅಗಾಧವಾಗಿ ಮತ ಚಲಾಯಿಸಿದ್ದರು. ಆದರೆ, ಸಿಎಎ ಅವರ ಒತ್ತಾಯಕ್ಕೆ ವಿರುದ್ದವಾಗಿದ್ದು, ಅದು ಅಕ್ರಮ ವಲಸಿಗೆ ಹಿಂದೂಗಳಿಗೆ ಪೌರತ್ವ ಕೊಡಲು ಮುಂದಾಗಿದೆ. ಇದು ಮೂಲ ಅಸ್ಸಾಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಅವರೆಲ್ಲರೂ ಪ್ರತಿಭಟನೆಯಲ್ಲಿ ಒಟ್ಟುಗೂಡಿದ್ದಾರೆ. ಅವರ ಪ್ರತಿಭಟನೆಯು 2019 ರ ಡಿಸೆಂಬರ್ನಲ್ಲಿ ಅಸ್ಸಾಂನ ಬಹುಭಾಗವನ್ನು ಸ್ಥಗಿತಗೊಳಿಸಿತ್ತು. ಬಿಜೆಪಿ ಸರ್ಕಾರವು ತನ್ನ ಬಲಪ್ರಯೋಗವನ್ನು ಅಲ್ಲಿ ತೋರಿಸಿತು. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಕ್ರಿಶಕ್ ಮುಕ್ತಿ ಸಂಗ್ರಾಮ್ನ ಸಂಸ್ಥಾಪಕ ಅಖಿಲ್ ಗೊಗೊಯ್ ಅವರನ್ನು ಬಂಧಿಸಿತು.
ಸಿಎಎಗೆ ನಿಯಮಗಳನ್ನು ರೂಪಿಸದಿರುವ ಮೂಲಕ, ಬಿಜೆಪಿ ತನ್ನ ವಿರುದ್ಧವಿರುವ ರಾಜಕೀಯ ವಿರೋಧವನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ. ಪೌರತ್ವ ವಿಷಯದಲ್ಲಿ ಒಗ್ಗೂಡಿರುವ ಅಸ್ಸಾಮೀಸ್ ಹಿಂದೂಗಳನ್ನು ಕೆರಳಿಸುವುದನ್ನು ತಡೆಯಲು ಸಿಎಎ ಜಾರಿಗೆ ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿದೆ.
ಸಿಎಎ ಅನುಷ್ಠಾನಗೊಳಿಸದಿರುವ ವಿಳಂಬವು ಬಂಗಾಳಿ ಹಿಂದೂಗಳಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ, ಅವರು ಬಿಜೆಪಿಯನ್ನು ತಮ್ಮ ಪೌರತ್ವ ಹಕ್ಕುಗಳ ಅತ್ಯಂತ ಕಟ್ಟಾ ರಕ್ಷಕರೆಂದು ಭಾವಿಸುತ್ತಾರೆ. ಹೀಗಾಗಿ, ಸಿಎಎ ಅನುಷ್ಠಾನಗೊಳಿಸುವ ಅನಾನುಕೂಲಗಳು ಅಸ್ಸಾಂನಲ್ಲಿ ಬಿಜೆಪಿ ಗಳಿಸಬಹುದಾದ ಪ್ರಯೋಜನವನ್ನು ಮೀರಿಸುತ್ತದೆ.
ಪಶ್ಚಿಮ ಬಂಗಾಳದಲ್ಲಿ ಸಿಎಎ ಮುಂದಿಟ್ಟು ಗೆಲ್ಲುತ್ತೇವೆ ಎಂಬ ಭರವಸೆ ಇಲ್ಲ:
ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದಿಂದ ವಲಸೆ ಬಂದ ಹೆಚ್ಚಿನ ಸಂಖ್ಯೆಯ ಹಿಂದೂಗಳಿದ್ದಾರೆ. ಅವರಲ್ಲಿ, ಪರಿಶಿಷ್ಟ ಜಾತಿಗಳ ಉಪಜಾತಿ ನಮಸೂದ್ರರು ಅಥವಾ ಮಾಟುವಾಸ್ ಸಮುದಾಯವರು ಹೆಚ್ಚು. ರಾಜ್ಯದ ಜನಸಂಖ್ಯೆಯಲ್ಲಿ ಶೇ.23 ರಷ್ಟು ಪರಿಶಿಷ್ಟ ಜಾತಿಗೆ ಸೇರಿದ ಜನರಿದ್ದರು. ಆ ಒಟ್ಟು ಪರಿಶಿಷ್ಟ ಜಾತಿಯ ಜನಸಂಖ್ಯೆಯ ಶೇ. 17.4 ರಷ್ಟು ಮಾಟುವಾಸ್ಗಳಿದ್ದಾರೆ. ಈ ಸಮುದಾಯವು ಸುಮಾರು 50 ಸ್ಥಾನಗಳ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಅವರು ಸಿಎಎ ಜಾರಿಯ ಬಗ್ಗೆ ಉತ್ಸುಕರಾಗಿದ್ದಾರೆ, ಅವರಲ್ಲಿ ಹೆಚ್ಚಿನ ಭಾಗವು 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ತಮ್ಮ ಭದ್ರಕೋಟೆಗಳಲ್ಲಿ ಸಾರ್ವಜನಿಕ ಸಭೆಗಳನ್ನು ಗೃಹ ಸಚಿವ ಅಮಿತ್ ಷಾ ರದ್ದುಗೊಳಿಸಿದರು. ಈ ಬಗ್ಗೆ ಮಾಟುವಾಸ್ ಸಮುದಾಯದ ಜನರು ತೀವ್ರ ನಿರಾಶೆಗೊಂಡಿದ್ದಾರೆ. ಈ ಸಭೆಗಳಲ್ಲಿ ಸಿಎಎ ಅನುಷ್ಠಾನಗೊಳಿಸುವ ಸಮಯವನ್ನು ಅಮಿತ್ ಶಾ ಸ್ಪಷ್ಟಪಡಿಸುತ್ತಾರೆ ಎಂದು ಅವರು ನಿರೀಕ್ಷಿಸಿದ್ದರು. ಸಿಎಎ ನಿಯಮಗಳನ್ನು ರೂಪಿಸಲು ಸರ್ಕಾರಕ್ಕೆ ಇನ್ನೂ ಕೆಲವು ತಿಂಗಳುಗಳು ಬೇಕಾಗುತ್ತದೆ ಎಂಬ ಸುದ್ದಿ ಹೊರಬಂದಿದೆ. ಇದರಿಂದಾಗಿ 2019ರ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಬೆಂಬಲ ನೀಡಿದ್ದ ಮಾತುವಾಸ್ ಸಮುದಾಯದ ಮತಗಳು ಈಗ ಛಿದ್ರವಾಗುತ್ತಿವೆ ಎಂದು ಹೇಳಲಾಗಿದೆ.
“ಸಿಎಎ ಅಸೆಂಬ್ಲಿ ಚುನಾವಣೆಯ ಕೇಂದ್ರವಾಗಲು ಬಿಜೆಪಿ ಬಯಸುವುದಿಲ್ಲ” ಎಂದು ಕೋಲ್ಕತ್ತಾದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತಜ್ಞ ಜಾದ್ ಮಹಮೂದ್ ವಿವರಿಸಿದ್ದಾರೆ. ಮಿಗಿಲಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಂದ ರಾಜ್ಯದ ಗಮನವನ್ನು ಸೆಳೆಯಲು ಬಿಜೆಪಿ ಬಯಸಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳವನ್ನು ಗೆಲ್ಲುವ ಅನಿಶ್ಚಿತತೆಯಿಂದಾಗಿ ಸಿಎಎಯನ್ನು ಜಾರಿಗೆ ತರಲು ಅಥವಾ ಸಿಎಎ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಬಿಜೆಪಿ ಹಿಂದೇಟು ಹಾಕುತ್ತಿದೆ ಎಂನ ಅಭಿಪ್ರಾಯ ಕೊಲ್ಕತ್ತಾ ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಶಹೀನ್ ಭಾಗ್ ಪ್ರತಿಭಟನಕಾರರಿಗೆ ಜಾಮೀನು: ಸಿಎಎ, ಎನ್ ಆರ್ ಸಿ ಬಗ್ಗೆ ಪೋಸ್ಟ್ ಮಾಡುವುದಕ್ಕೆ ನಿರ್ಬಂಧ

