ಶಹೀನ್ ಭಾಗ್ ಪ್ರತಿಭಟನಕಾರರಿಗೆ ಜಾಮೀನು: ಸಿಎಎ, ಎನ್ ಆರ್ ಸಿ ಬಗ್ಗೆ ಪೋಸ್ಟ್ ಮಾಡುವುದಕ್ಕೆ ನಿರ್ಬಂಧ

ಲಾಕ್ ಡೌನ್ ನಿರ್ಬಂಧವನ್ನು ಉಲ್ಲಂಘಿಸಿ ಶಹೀನ್ ಭಾಗ್ ಪ್ರತಿಭಟನ ಪ್ರದೇಶವನ್ನು ತೊರೆಯಲು ನಿರಾಕರಿಸಿದ್ದ ಮೂವರು ವ್ಯಕ್ತಿಗಳಿಗೆ ದೆಹಲಿ ಕೋರ್ಟ್ ಭಾನುವಾರ ಜಾಮೀನು ನೀಡಿದೆ.

ಕೊರೊನ ಸಾಂಕ್ರಾಮಿಕವನ್ನು ತಡೆಗಟ್ಟಲು ದೆಹಲಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ಇದರ ಪ್ರಕಾರ ಐದು ಅಥವಾ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಇದರ ಸಲುವಾಗಿ ಶಾಹೀನ್ ಭಾಗ್ ಪ್ರತಿಭಟನೆಯ ಪ್ರದೇಶವನ್ನು ತೆರವುಗೊಳಿಸಲಾಗಿತ್ತು.

ಈ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಸಾಕೆತ್ ಕೋರ್ಟ್ ಸಮುಚ್ಚಯದ ನ್ಯಾಯಮೂರ್ತಿ ಜಿತೇಂದ್ರ ಪ್ರತಾಪ್ ಸಿಂಗ್ ಹಲವು ಷರತ್ತುಗಳನ್ನು ವಿಧಿಸಿದ್ದಾರೆ. ಆರೋಪಿಗಳು ಸಿಎಎ ಮತ್ತು ಎನ್ ಪಿ ಆರ್ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ವಾಟ್ಸ್ ಆಪ್ ನಲ್ಲಿ ಯಾವುದೇ ಪೋಸ್ಟ್ ಬರೆಯುವಂತಿಲ್ಲ ಮತ್ತು ಹಂಚುವಂತಿಲ್ಲ. ಈ ವಿಷಯಗಳ ಬಗ್ಗೆ ಮಾಧ್ಯಮಗಳ ಜೊತೆ ಮಾತಾಡುವಂತೆಯೂ ಇಲ್ಲ.

ತಮ್ಮ ವಿರುದ್ಧ ಹಿಂದೆ ಯಾವುದೇ ಕ್ರಿಮಿನಲ್ ಅಪರಾಧಗಳು ದಾಖಲಾಗಿಲ್ಲ ಎಂದು ತಿಳಿಸಿರುವ ಆರೋಪಿಗಳಾದ  ಶಾನ್ ಮೋಹಮದ್, ಸಯ್ಯದ್ ಮಸೂದ್ ಅಹ್ಮದ್ ಮತ್ತು ಸಯ್ಯದ್ ತಸೀರ್ ಹೆಚ್ಚು ದಿನ ಬಂಧಿಸಿದರೆ ತಮಗೆ ಕೊರೊನ ಸೋಂಕು ತಗಲುವ ಅಪಾಯವಿದೆ ಎಂದು ಕೋರ್ಟ್ ಗೆ ಹೇಳಿದ್ದಾರೆ.

ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರು, ಆರೋಪಿಗಳು ಶಹೀನ್ ಭಾಗ್ ಗೆ ತೆರಳದಂತೆ ಮತ್ತು ಸೆಕ್ಷನ್ 144 ಆದೇಶವನ್ನು ಮತ್ತೆ ಉಲ್ಲಂಘಿಸದಂತೆ ಷರತ್ತು ವಿಧಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights