ಸಿನಿಮಾ ವಿಮರ್ಶೆ: ಪಬ್ಲಿಕ್‌ ಟಾಯ್ಲೆಟ್‌; ಸಿನೆಮಾ‌ ಕೊಳೆಯನ್ನು ತೊಳೆಯಬಲ್ಲದೆ?

ಯಾವುದೇ ಅಪರಾಧ ಆಗಿರಲಿ, ಅದೊಂದು ಅತ್ಯಂತ ನೋವು ತರಿಸುವ ಸಂಗತಿ. ಅದರಲ್ಲಿ ಕೆಲವು ಸಂಗತಿಗಳು ನಮ್ಮನ್ನು ಸುಮ್ನನೇ ಇರಲು ಬಿಡುವುದಿಲ್ಲ. ಅಪರಾಧ ಎಷ್ಟು ಘೋರವಾಗಿ ತಟ್ಟಿರುತ್ತೆ ಎಂದರೆ, ಅದರಲ್ಲಿ ನಾವೂ ಭಾಗಿ ಎಂದೆನಿಸುತ್ತದೆ ಹಾಗೂ ಅದು ಸತ್ಯವೂ ಕೂಡ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಆಗುವ ಎಲ್ಲಾ ಅಪರಾಧಗಳಲ್ಲಿ ಅಪರೋಕ್ಷವಾಗಿ ಭಾಗಿಯೇ.

ಇಂತಹ ಒಂದು ಅಪರಾದ ಆದಾಗ, ಅದಕ್ಕೆ ಕೇವಲ ಆ ಅಪರಾಧಿ ಮಾತ್ರ ಭಾಗಿಯಾಗದೇ, ಸಮಾಜವೇ ಭಾಗಿಯಾಗಿ ಅದನ್ನು ಸಂಭ್ರಮಿಸಿ, ಅಪರಾಧಕ್ಕೆ ತುತ್ತಾದವರನ್ನು ಇನ್ನಷ್ಟು ಕ್ಷೋಭೆಗೆ ಸಿಲುಕುವ ಕೆಲಸ ಮಾಡಿದಾಗ, ಅದಕ್ಕಾಗಿ ಏನಾದರೂ ಮಾಡಬೇಕು ಎಂದು ಎಲ್ಲರಿಗೂ ಅನಿಸುವುದು ಸಹಜ. ಆ ಅಪರಾಧಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು, ಅಂತಹ ಅಪರಾಧಗಳು ಮತ್ತೊಮ್ಮೆ ಆಗಬಾರದು ಎಂದು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು, ಕೆಲವು ಸಲ ಆ ವಿಷಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಎನ್ನುವ ಅನೇಕ ಕೆಲಸಗಳನ್ನು ಸಮಾಜದ ಕೆಲವು ಅಂಗಗಳು ಮಾಡುತ್ತವೆ.

ಅಂತಹದ್ದೇ ಒಂದು ಘೋರ ಅಪರಾಧದ ಬಗ್ಗೆ ನೊಂದ ನಾಗೇಶ್ ಹೆಬ್ಬೂರ ಅವರು ‘ಪಬ್ಲಿಕ್ ಟಾಯ್ಲೆಟ್’ ಎಂಬ ಕಿರುಚಿತ್ರವನ್ನು ಮಾಡಿದ್ದಾರೆ. ಒಂದು ಸಾರ್ವಜನಿಕ ಶೌಚಾಲಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ, ಆ ಕ್ರಿಯೆಯನ್ನು ಒಬ್ಬ ಕ್ಯಾಮೆರದಲ್ಲಿ ಸೆರೆ ಹಿಡಿದು, ಎಲ್ಲೆಡೆ ಹಂಚಲಾಗಿತ್ತು, ತದನಂತರ ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು ಎನ್ನಲಾದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು ಸುದ್ದಿಯಾಗಿತ್ತು. ಇದೇ ವಿಷಯವನ್ನು ಇಟ್ಟುಕೊಂಡು ಈ ಕಿರುಚಿತ್ರವನ್ನು ಮಾಡಲಾಗಿದೆ.

ಇಂತಹ ವಿಷಯಗಳಲ್ಲಿ ಯಾರನ್ನು ಚಿತ್ರದ ಮುಖ್ಯಪಾತ್ರವನ್ನಾಗಿ ಮಾಡಬೇಕು ಎಂಬದು ಯಾವಾಗಲೂ ಒಂದು ಪ್ರಶ್ನೆ ಇರುತ್ತದೆ. ಈ ಚಿತ್ರದಲ್ಲಿ ತನ್ನ ಕ್ಯಾಮೆರದಲ್ಲಿ ಆ ದೃಶ್ಯವನ್ನು ಸೆರೆಹಿಡಿದ ವ್ಯಕ್ತಿಯನ್ನೇ ಪ್ರಮುಖಪಾತ್ರ ಮಾಡಲಾಗಿದೆ. ಅದು ಸರಿ ಕೂಡ. ಇಂತಹ ಘೋರ ಕೃತ್ಯಗಳನ್ನು ಎಸಗುತ್ತಾದರೂ ಏಕೆ ಎಂದು ತಿಳಿದು, ಅದರ ಬಗ್ಗೆ ಪರಿಹಾರ ಕಂಡುಕೊಳ್ಳಬೇಕಾದರೆ ಅಪರಾಧಿಯ ಮನೋಸ್ಥಿತಿಯನ್ನು ಪ್ರಮಾಣಿಕ ಪ್ರಯತ್ನ ಆಗಲೇಬೇಕು.

ಹೌದು ಈ ಚಿತ್ರದ ಉದ್ದೇಶವೂ ಪ್ರಾಮಾಣಿಕವಾಗಿಯೇ ಇದೆ. ಆದರೆ,

ಆ ಅಪರಾಧಿಯ ಮನೋಸ್ಥಿತಿಯನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಕಾಣುವುದಿಲ್ಲ. ಅಂತಹ ಒಂದು ದೃಶ್ಯವನ್ನು ತನ್ನ ಫೋನಿನಲ್ಲಿ ಸೆರೆಹಿಡಿದು, ಎಲ್ಲೆಡೆ ವೈರಲ್ ಮಾಡಬೇಕಾದರೆ ಆ ವ್ಯಕ್ತಿ ಎಂಥವನಿರಬಹುದು, ಆ ಕ್ರೌರ್ಯ ಹೇಗೆ ಬಂದಿರಬಹುದು, ಆ ಮಟ್ಟದ ಅಸೂಕ್ಷ್ಮತೆಯನ್ನೆ ಹೇಗೆ ಅಳವಡಿಸಿಕೊಂಡಿರಬಹುದು, ಅದನ್ನು ವೈರಲ್ ಮಾಡಿ, ವಿಕೃತ ಖುಷಿಯನ್ನು ಅನುಭವಿಸಲು ಒಬ್ಬ ವ್ಯಕ್ತಿಗೆ ಹೇಗೆ ಸಾಧ್ಯ ಎಂಬ ಯಾವ ಪ್ರಶ್ನೆಗೂ ಉತ್ತರ ಸಿಗುವುದಿಲ್ಲ, ವಾಸ್ತವದಲ್ಲಿ ಆ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿಗೇ ಹೋಗಿಲ್ಲ. ಆ ವಿಡಿಯೋ ವೈರಲ್ ಮಾಡಿ, ಬರುವ ಲೈಕ್‍ಗಳು, ವೀವ್ಸ್‍ಗಳಿಂದ ಅನುಂದತುಲಿತನಾಗುತ್ತದ್ದ ವ್ಯಕ್ತಿ, ಯಾರೋ ಒಬ್ಬ ಅದನ್ನು ಟೀಕಿಸಿದೊಡನೇ, ಈತನ ತಪ್ಪಿತಸ್ಥ ಭಾವನೆ ಜಾಗೃತವಾಗುತ್ತದೆ. ಆ ನಂತರ ಆ ತಪ್ಪಿತಸ್ಥ ಭಾವನೆಯೊಂದಿಗೆ ಅವನು ಹೇಗೆ ಒದ್ದಾಡುತ್ತಾನೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಅಲ್ಲಿಯೂ, ಯಾವುದೇ ಅಧ್ಯಯನ ಮಾಡದೇ, ವಿಷಯದ ಆಳಕ್ಕೆ ಇಳಿಯದೇ ನೋಡುಗರಿಗೆ ‘ಮನುಷ್ಯರ ಆಳ ಸಂವೇದನೆಗಳು ಮನುಷ್ಯತ್ವದ ಕಡೆಗೇ ಚಲಿಸುತ್ತಿರುಬೇಕು’ ಎಂಬ ಮಹತ್ತರ ಸಂದೇಶ ನೀಡುವ ಉದ್ದೇಶದಿಂದ ಚಿತ್ರವನ್ನು ಮಾಡಿದ್ದಾರೆ.

ಸಿನಿಮಾ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಇಂತಹ ಯಾವುದೇ ಒಂದು ಘಟನೆಯನ್ನು ಆಧಾರಿಸಿ ಸಿನೆಮಾ ಮಾಡಬೇಕಾದರೆ, ಅದನ್ನು ಸಿನೆಮಾದ ಚೌಕಟ್ಟಿನಲ್ಲಿ ಇಳಿಸಬೇಕಾಗುತ್ತದೆ. ಸಿನೆಮಾ ಎಂಬ ಮಾಧ್ಯಮದ ಇತಿಮಿತಿ ಮತ್ತು ಸಾಮಥ್ರ್ಯಗಳನ್ನು ಅರಿತು ಅದರನುಗುಣವಾಗಿ ಮಾಡಬೇಕಾಗುತ್ತದೆ. ಅದರೊಂದಿಗೆ, ವಿಷಯವಸ್ತುವಿನ ಆಳ ಅಧ್ಯವನ್ನು ಮಾಡದೇ, ಕೇವಲ ಸಂದೇಶ ನೀಡಲೆಂದು ಸಿನೆಮಾ ಮಾಡುವುದೆಂದರೆ, ಆ ವಿಷಯಕ್ಕೆ ದ್ರೋಹ ಬಗೆದಂತೆ. ಈ ಚಿತ್ರವೂ ಮಾಡಿದ್ದು ಅದೇ.

ರಾಜಶೇಖರ್ ಅಕ್ಕಿ


ಇದನ್ನೂ ಓದಿ: ರೈತರಿಗೆ ಒಳ್ಳೆಯದಾಗುವುದನ್ನೇ ಮಾಡಬೇಕು: ರೈತ ಪರವಾಗಿ ದನಿಗೂಡಿಸಿದ ನಟ ಸಲ್ಮಾನ್‌ ಖಾನ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights