ಫ್ಯಾಕ್ಟ್‌ಚೆಕ್ : ಉತ್ತರ ಕನ್ನಡ ಜಿಲ್ಲಾಧಿಕಾರಿ ಕಾರಿನ ಇಂಧನಕ್ಕೆ ಹಣವಿಲ್ಲವೇ?

ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ  ತುಂಬಿದ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ  4 ಗ್ಯಾರೆಂಟಿಗಳು ಜಾರಿಯಾಗುತ್ತಿರುವಾಗಲೇ, ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ.

ನಮ್ಮ ಮೋದಿ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದ್ದು ಆ ಪೋಸ್ಟ್‌ನಲ್ಲಿ  ‘ಉತ್ತರ ಕನ್ನಡ ಜಿಲ್ಲಾಧಿಕಾರಿ ಕಾರಿನ ಇಂಧನಕ್ಕೆ ದುಡ್ಡಿಲ್ಲ. ಅನುದಾನದ ಕೊರತೆಯಿಂದ ಶೆಡ್‌ ಸೇರಿದ ಜಿಲ್ಲಾಧಿಕಾರಿ ವಾಹನ. ಸರ್ಕಾರಿ ಖಜಾನೆಯಲ್ಲಿ ಬರಿದಾದ ಹಣ!’ ಎಂದು ಆರೋಪಿಸಿ ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಎಂಬ ಸುದ್ದಿ ತಾಣವೊಂದರಲ್ಲಿ ಸುದ್ದಿಯೊಂದು ಪ್ರಕಟವಾಗಿದ್ದು ಉತ್ತರ ಕನ್ನಡ ಜಿಲ್ಲಾಧಿಕಾರಿ ಸಂಚಾರಕ್ಕಾಗಿ ಎರಡು ಸರ್ಕಾರಿ ವಾಹನ ನೀಡಲಾಗಿದ್ದು, ಆದರೆ ಒಂದು ವಾಹನಕ್ಕೆ ಇಂಧನ ಹಾಕಲು ಅನುದಾನವಿಲ್ಲದೇ ಶೆಡ್‌ ಸೇರಿದೆ. ಟೊಯೋಟಾ ಕಂಪನಿಯ ಇನ್ನೋವಾ ಕೆಎ-30, ಜಿ3456 ಹಾಗೂ ಕೆಎ-30, ಜಿ 7777 ವಾಹನವನ್ನು ಮೊದಲು ನೀಡಲಾಗಿತ್ತು. ವರ್ಷದ ಹಿಂದೆ ಟೊಯೋಟಾ ಇನ್ನೋವಾ ಕ್ರಿಸ್ಟಾಕೆಎ-30, ಜಿಎ 7777 ಹೊಸ ವಾಹನ ನೀಡಲಾಗಿತ್ತು.

ಹೀಗಾಗಿ ಅಪರ ಜಿಲ್ಲಾಧಿಕಾರಿ ಬಳಕೆಗೆ ಇದ್ದ ಸಫಾರಿ ಕಾರನ್ನು ಬದಲಿಸಿ ಡಿಸಿ ಬಳಕೆ ಮಾಡುತ್ತಿದ್ದ ಹಳೆಯ ಇನ್ನೋವಾ ಕೆಎ-30, ಜಿ 7777 ವಾಹನವನ್ನು ಎಡಿಸಿ ಓಡಾಟಕ್ಕೆ ನೀಡಲಾಗಿದೆ. ಆದರೆ ಮತ್ತೊಂದು ಇನ್ನೋವಾ ಕೆಎ 30, ಜಿ-3456 ವಾಹನ ಡಿಸಿ ಬಳಕೆಗಿದ್ದು, ಇದಕ್ಕೆ ಇಂಧನ ಹಾಕಲು ಅನುದಾನ ಇಲ್ಲದೆ ಕಳೆದ 1 ವರ್ಷದಿಂದ ಡಿಸಿ ಗೃಹ ಕಚೇರಿಯ ಶೆಡ್‌ನಲ್ಲಿ ಇರಿಸಲಾಗಿದೆ. ಹಾಲಿ ಹೊಸ ಇನ್ನೋವಾ ಕ್ರಿಸ್ಟಾ ಒಂದು ಕಾರನ್ನು ಬಳಕೆ ಮಾಡಲಾಗುತ್ತಿದೆ.

ಜಿಲ್ಲಾಧಿಕಾರಿ ಸರ್ಕಾರಿ ಕರ್ತವ್ಯಕ್ಕೆ ಬಳಕೆ ಮಾಡುವ ವಾಹನದ ಇಂಧನಕ್ಕೆ ನೀಡಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಹಾಲಿ ಬಳಕೆ ಮಾಡುತ್ತಿರುವ ಕಾರು ಸರ್ವಿಸ್‌ಗಾಗಿ ಅಥವಾ ದುರಸ್ತಿಗಾಗಿ ತೆಗೆದುಕೊಂಡು ಹೋದಲ್ಲಿ ಜಿಲ್ಲೆಗೆ ಗಣ್ಯ ವ್ಯಕ್ತಿಗಳು ಆಗಮಿಸಿದಾಗ ಬಳಕೆ ಮಾಡುವ ವಿಐಪಿ ಕಾರನ್ನು ಡಿಸಿ ಬಳಸುವಂತಾಗಿದೆ. ಎಂದು ಸುದ್ದಿಯನ್ನು ಪ್ರಕಟಿಸಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೆಬ್‌ಸೈಟ್‌ವೊಂದರ ವರದಿಯನ್ನು ಉಲ್ಲೇಖಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್, ‘ಉತ್ತರ ಕನ್ನಡ ಜಿಲ್ಲಾಧಿಕಾರಿ ಕಾರಿನ ಇಂಧನಕ್ಕೆ ದುಡ್ಡಿಲ್ಲ!, ಅನುದಾನದ ಕೊರತೆಯಿಂದ ಸೆಡ್ ಸೇರಿದ ಜಿಲ್ಲಾಧಿಕಾರಿ ವಾಹನ, ಸರ್ಕಾರಿ ಖಜಾನೆಯಲ್ಲಿ ಬರಿದಾದ ಹಣ!, ಡ್ರೈವರ್‌ಗಳ ಕೊರತೆ ಡಿಸಿ ಕಾರು ಚಾಲಕನಾದ ಗ್ರಾಮ ಸಹಾಯಕ!’ ಎಂದು ಟ್ವೀಟ್‌ ಮಾಡಿದ್ದರು. ಈ ಮೂಲಕ ಸರ್ಕಾರವನ್ನು ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಉತ್ತರ ಕನ್ನಡದ ಜಿಲ್ಲಾಧಿಕಾರಿ ಗಂಗೂಬಾಯಿ ರಮೇಶ ಮಾನಕರ್ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳ ಅಧಿಕೃತ ಟ್ವೀಟ್‌ ಖಾತೆಯ ಮೂಲಕ ಸ್ಪಷ್ಟನೆಯನ್ನು ನೀಡಿದ್ದರು.


ಈ ಆರೋಪ ಸುಳ್ಳು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ವಾಹನಕ್ಕೆ ಇಂಧನದ ಕೊರತೆಯಾಗಿಲ್ಲ. ಚಿತ್ರದಲ್ಲಿ ತೋರಿಸಿರುವ ವಾಹನವು ಜಿಲ್ಲಾಧಿಕಾರಿ ಕಚೇರಿಯ ಡಿ.ವಿ ವಾಹನವಾಗಿದೆ. ಯಾವುದೇ ವಿಐಪಿ ಭೇಟಿಯ ಸಮಯದಲ್ಲಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ಇದನ್ನು ಬಳಸಲಾಗುತ್ತದೆ. ಈ ವಾಹನವನ್ನು ತೀರಾ ಅಗತ್ಯ ಇದ್ದಾಗ ಮಾತ್ರ ಬಳಸಲಾಗುತ್ತದೆ. ಉಳಿದ ದಿನ ಅದನ್ನು ಶೆಡ್‌ನಲ್ಲಿ ನಿಲ್ಲಿಸಲಾಗುತ್ತದೆ’ ಎಂದಿದ್ದಾರೆ. ಆದ್ದರಿಂದ ಸರ್ಕಾರಿ ಖಜಾನೆಯಲ್ಲಿ ಹಣ ಬರಿದಾಗಿದೆ ಎಂಬುದು ಸುಳ್ಳು ಸುದ್ದಿ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಹಾವು ಕಡಿತದಿಂದ ಮೃತರಾದರೆ ರೂ 7.50 ಲಕ್ಷ ಪರಿಹಾರ ಸಿಗುತ್ತದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್ : ಉತ್ತರ ಕನ್ನಡ ಜಿಲ್ಲಾಧಿಕಾರಿ ಕಾರಿನ ಇಂಧನಕ್ಕೆ ಹಣವಿಲ್ಲವೇ?

  • September 4, 2023 at 6:11 pm
    Permalink

    ಈ ರೀತಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಚಾನಲ್ ಹಾಗೂ ವ್ಯಕ್ತಿಗಳ ಮೇಲೆ ಕಾನೂನಿನ ಪ್ರಕಾರ ಶಿಕ್ಷಿಸಬೇಕು .

    Reply

Leave a Reply

Your email address will not be published.

Verified by MonsterInsights