ಫ್ಯಾಕ್ಟ್‌ಚೆಕ್ : ಹಾವು ಕಡಿತದಿಂದ ಮೃತರಾದರೆ ರೂ 7.50 ಲಕ್ಷ ಪರಿಹಾರ ಸಿಗುತ್ತದೆ ಎಂಬುದು ನಿಜವೇ?

ಹಾವು ಕಡಿತದಿಂದ ಯಾರಾದರೂ ಅತಂಹ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ರೂ 7.5 ಲಕ್ಷ ಪರಿಹಾರ ದೊರೆಯುತ್ತದೆ ಎಂಬ ಸಂದೇಶವನ್ನು  ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಶೇರ್ ಮಾಡಲಾಗುತ್ತಿದೆ.

ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಸಂದೇಶದಲ್ಲಿ “ಆಕಸ್ಮಿಕವಾಗಿ ಯಾರಾದರೂ ಹಾವಿನ ಕಡಿತಕ್ಕೆ ಒಳಗಾಗಿ ಮೃತಪಟ್ಟರೆ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಮರಣೋತ್ತರ ಪರೀಕ್ಷೆಯ ಪ್ರಮಾಣ ಪತ್ರವನ್ನು ಪಡೆದು ನಿಮ್ಮ ವ್ಯಾಪ್ತಿಯ ಅರಣ್ಯ ಇಲಾಖೆ ಕಚೇರಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ. ಮೃತರ ವಾರಸುದಾರರಿಗೆ ಅರಣ್ಯ ಇಲಾಖೆಯ ವತಿಯಿಂದ 7.50 ಲಕ್ಷ ಪರಿಹಾರ ದೊರೆಯುತ್ತದೆ. ಈ ಸಂದೇಶವನ್ನು ಇತರರಿಗೂ ತಲುಪಿಸಿ” ಎಂದು ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್ ಗ್ರೂಪ್‌ಗಳಲ್ಲಿ ವೈರಲ್ ಆಗುತ್ತಿರುವ ಸಂದೇಶವನ್ನು ಪರಿಶೀಲಿಸುವಂತೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಏನ್‌ಸುದ್ದಿ.ಕಾಂ ಅನ್ನು ವಿನಂತಿಸಿದ್ದಾರೆ. ಹಾಗಿದ್ದರೆ ಹಾವು ಕಡಿತದಿಂದ ಮೃತರಾದ ಕುಟುಂಬಕ್ಕೆ ಸರ್ಕಾರ ರೂ 7.50 ಲಕ್ಷ ಮೊತ್ತದ ಪರಿಹಾರವನ್ನು ನೀಡುತ್ತದೆಯೇ ಎಂದು ಪರಿಶೀಲಿಸೋಣ.

ಪ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಸಂದೇಶದಲ್ಲಿ ಹೇಳಿರುವಂತೆ ಹಾವು ಕಡಿತದಿಂದ ಮೃತರಾದ ವ್ಯಕ್ತಿಯ ಕುಟುಂಬಕ್ಕೆ ರೂ 7.50 ಲಕ್ಷ ಮೊತ್ತದ ಪರಿಹಾರ ನೀಡಲಾಗುತ್ತದೆಯೇ ಎಂದು ತಿಳಿದುಕೊಳ್ಳಲ್ಲು ಸರ್ಕಾರದ ಸುತ್ತೋಲೆಯನ್ನು ಪರಿಶೀಲಿಸಿದಾಗ ವಾಟ್ಸಾಪ್ ಸಂದೇಶ ತಪ್ಪು ದಾರಿಗೆಳೆಯುವಂತಿದೆ.

ಸರ್ಕಾರದಿಂದ ಹೊರಡಿಸಿರುವ ಅಧಿಕೃತ ಆದೇಶದ ಪತ್ರದ ಪ್ರಕಾರ ಪರಿಹಾರ ಮೊತ್ತ ಎರಡು ಲಕ್ಷ ರೂಪಾಯಿ ಎಂಬುದು ಖಾತ್ರಿ ಆಗಿದೆ. ಅದರಲ್ಲಿ ಇರುವಂತೆ, ರೈತ ಕುಟುಂಬಗಳಿಗೆ ನೀಡಬೇಕಾದ ಪರಿಹಾರದ ಬಗ್ಗೆ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ. ಒಂದು ವೇಳೆ ಆ ಸಮಿತಿಯ ತೀರ್ಪು ಸಮಂಜಸ ಎನಿಸದಿದ್ದರೆ ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು.

ಆದ್ದರಿಂದ ರೈತರ ಆತ್ಮಹತ್ಯೆ, ಹಾವು ಕಡಿತದಿಂದ ಸಾವು, ಬಣವೆಗೆ ಬೆಂಕಿ ಬಿದ್ದ ಪ್ರಕರಣಗಳಲ್ಲಿ ಕಂದಾಯ ಇಲಾಖೆಯಿಂದ ಪರಿಹಾರ ನೀಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟು ಆದೇಶವನ್ನು ಹೊರಡಿಸಲಾಗಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರದಿಂದ ಅನುದಾನವನ್ನು ಸಹ ಒದಗಿಸಲಾಗಿದೆ.

ರೈತರು ಆತ್ಮಹತ್ಯೆ ಮಾಡಿಕೊಂಡಲ್ಲಿ 5 ಲಕ್ಷ ಪರಿಹಾರ, ಹಾವು ಕಡಿತ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ 2 ಲಕ್ಷ ರೂಪಾಯಿ ಮತ್ತು ಬಣವೆ ನಷ್ಟಕ್ಕೆ 20 ಸಾವಿರ ರೂಪಾಯಿ ಪರಿಹಾರವಾಗಿ ನೀಡಬೇಕು ಎಂದು ಉಲ್ಲೇಖಿಸಲಾಗಿದೆ.  ಸರ್ಕಾರದ ಆದೇಶದಲ್ಲೇ ಯಾವ ಇಲಾಖೆಗೆ ಬರುತ್ತದೆ ಮತ್ತು ಎಷ್ಟು ಮೊತ್ತ ಪಾವತಿಸಬೇಕು ಎಂಬ ಬಗ್ಗೆ ಮಾಹಿತಿ ಇದೆ. ಹಾಗಾಗಿ ಅರಣ್ಯ ಇಲಾಖೆಯು ಹಾವಿನ ಕಡಿತದಿಂದ ಮೃತಪಟ್ಟವರಿಗೆ ಏಳೂವರೆ ಲಕ್ಷ ರೂಪಾಯಿ ಪರಿಹಾರ ನೀಡುತ್ತದೆ ಎಂಬುದು ಸುಳ್ಳು ಸುದ್ದಿ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ತಿಳಿಯದೆ ಬಿಜೆಪಿಗೆ ಮತ ಹಾಕಿದ ಕಾರಣ ವ್ಯಕ್ತಿಯೊಬ್ಬ ತನ್ನ ಕೈ ಬೆರಳನ್ನು ಕತ್ತರಿಸಿಕೊಂಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights