ದೇಶಕ್ಕಾಗಿ 3 ಯುದ್ದದಲ್ಲಿ ಹೋರಾಡಿದ್ದೇನೆ; ಸರ್ಕಾರ ನನ್ನನ್ನೇ ಭಯೋತ್ಪಾದಕ ಎನ್ನುತ್ತಿದೆ: ಮಾಜಿ ಯೋಧ ಗುರುಮುಖ್ ಸಿಂಗ್

“ದೇಶಕ್ಕಾಗಿ 3 ಯುದ್ಧಗಳಲ್ಲಿ ಹೋರಾಡಿದ್ದೇನೆ; ಆದರೆ ಈಗ ನಾನು ಭಯೋತ್ಪಾಕ ಅಂತೆ” ಎಂದು ರೈತ ಹೋರಾಟಗಾರ, ಮಾಜಿ ಯೋಧ ಗುರುಮುಖ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಭಾಗಿಯಾಗಿದ್ದ 80 ವರ್ಷದ ಗುರುಮುಖ್ ಸಿಂಗ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. 15 ದಿನಗಳ ಕಾಲ ಜೈಲು ವಾಸ ಅನುಭವಿಸಿ, ಕೊನೆಗೂ ಜಾಮೀನು ಪಡೆದು ಹೊರ ಬಂದಿರುವ ಅವರು ‘ದೇಶಕ್ಕಾಗಿ ಯುದ್ದದಲ್ಲಿ ಹೋರಾಟ ಮಾಡಿದ ನನ್ನನ್ನೇ ಭಯೋತ್ಪಾದಕ ಎನ್ನುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂಜಾಬಿನ ಫತೇಗಡ ಸಾಹಿಬ್ ಗ್ರಾಮದ ನಿವಾಸಿ ಸಿಂಗ್ 1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದರು. ತರಬೇತಿಯ ಬಳಿಕ 1962, ನವಂಬರ್ ತಿಂಗಳಿನಲ್ಲಿ ಉಭಯ ದೇಶಗಳು ಕದನ ವಿರಾಮವನ್ನು ಘೋಷಿಸುವವರೆಗೆ ಸಿಕ್ಕಿಮ್ ನ ನಾಥು ಲಾ ಪಾಸ್ ನಲ್ಲಿ ಅವರು ಕರ್ತವ್ಯ ನಿರ್ವಹಿಸಿದ್ದರು. 1965ರ ಭಾರತ-ಪಾಕಿಸ್ತಾನ ಯುದ್ಧ ಮತ್ತು ಆರು ವರ್ಷಗಳ ಬಳಿಕ ಬಾಂಗ್ಲಾದೇಶ ವಿಮೋಚನಾ ಸಮರದಲ್ಲಿಯೂ ಅವರು ಹೋರಾಡಿದ್ದರು. 22 ವರ್ಷಗಳ ಸುದೀರ್ಘ ಸೇವೆಯ ಬಳಿಕ 1984ರಲ್ಲಿ ಅವರು ಸೇನೆಯಿಂದ ನಿವೃತ್ತಗೊಂಡಿದ್ದರು. ಉತ್ತಮ ಕುಸ್ತಿ ಮತ್ತು ಬಾಕ್ಸಿಂಗ್ ಪಟುವಾಗಿದ್ದ ಸಿಂಗ್ ಒಳ್ಳೆಯ ಕಬಡ್ಡಿ ಆಟಗಾರರೂ ಆಗಿದ್ದರು ಎಂದು ನ್ಯೂಸ್ ಲಾಂಡ್ರಿಯು ವರದಿ ಮಾಡಿದೆ.

“ಸೇನೆಯು ನನಗೆ ತುಂಬ ಪ್ರೀತಿ ಮತ್ತು ಗೌರವವನ್ನು ನೀಡಿತ್ತು. ಈ ದೇಶಕ್ಕಾಗಿ ಮೂರು ಯುದ್ಧಗಳಲ್ಲಿ ನಾನು ಹೋರಾಡಿದ್ದೇನೆ. 10 ಪದಕಗಳನ್ನೂ ಪಡೆದಿದ್ದೇನೆ. ಈಗ ಅವರು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಈ ಅವಮಾನವನ್ನು ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಿಲ್ಲ” ಎಂದು ಗುರುಮುಖ್ ಸಿಂಗ್ ಹೇಳಿದ್ದಾರೆ.

ಜ.25ರಂದು ಗುರುಮುಖ್ ಸಿಂಗ್ ಗಣರಾಜ್ಯೋತ್ಸವ ದಿನದಂದು ಆಯೋಜಿಸಲಾಗಿದ್ದ ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳಲೆಂದು ತನ್ನ ಗ್ರಾಮದ 25 ರೈತರೊಂದಿಗೆ ದಿಲ್ಲಿ ಗಡಿಯನ್ನು ತಲುಪಿದ್ದರು. ಆದರೆ ಪ್ರಯಾಣದಿಂದ ಸುಸ್ತಾಗಿದ್ದ ಅವರು ಬುರಾರಿಯ ನಿರಂಕಾರಿ ಮೈದಾನದಲ್ಲಿಯ ಟೆಂಟ್‌ನಲ್ಲಿ ಉಳಿದುಕೊಂಡಿದ್ದರು. ಟ್ರಾಕ್ಟರ್ ರ್ಯಾಲಿಗಾಗಲೀ ಕೆಂಪು ಕೋಟೆಗಾಗಲೀ ಅವರು ಹೋಗಿರಲಿಲ್ಲ. ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಸಂಭವಿಸಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಫೆ.1ರ ವೇಳೆಗೆ 122 ರೈತರನ್ನು ಪೊಲೀಸರು ಬಂಧಿಸಿದ್ದರು ಮತ್ತು ಅವರಲ್ಲಿ ಗುರುಮುಖ್ ಸಿಂಗ್ ಸೇರಿದ್ದರು.

ಟ್ರಾಕ್ಟರ್ ರ್ಯಾಲಿಯ ಮೂರು ದಿನಗಳ ಬಳಿಕ ನಿರಂಕಾರಿ ಮೈದಾನದಲ್ಲಿ ನಿಯೋಜಿತರಾಗಿದ್ದ ಪೊಲೀಸರು ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ರೈತರಿಗೆ ಬೆದರಿಕೆಯೊಡ್ಡಿದ್ದರು. ಜನವರಿ 28ರಂದು ಸಮುದಾಯ ಪಾಕಶಾಲೆಯಲ್ಲಿ ಅಡಿಗೆ ಕೆಲಸಕ್ಕೆ ನೆರವಾದ ಬಳಿಕ ಗುರುಮುಖ್ ಸಿಂಗ್ ತನ್ನ ಟೆಂಟ್‌ಗೆ ಮರಳಿದ್ದರು. ರಾತ್ರಿ 11ರ ಸುಮಾರಿಗೆ ರೈತರು ಮಲಗಲು ಸಜ್ಜಾಗುತ್ತಿದ್ದಾಗ ಏಕಾಏಕಿ ವಿದ್ಯುತ್ ನಿಲುಗಡೆಗೊಂಡಿತ್ತು. ಆಗ ಗುರುಮುಖ್ ಸಿಂಗ್ ಟೆಂಟ್‌ನಿಂದ ಹೊರಬಂದಾಗ ಅವರ ಮೇಲೆ ಮುಗಿಬಿದ್ದ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿ ಎಳೆದೊಯ್ದು ಪೊಲೀಸ್ ವ್ಯಾನ್‌ನಲ್ಲಿ ತಳ್ಳಿದ್ದರು. ಅವರೊಂದಿಗೆ ಇನ್ನೂ ಕೆಲವು ರೈತರನ್ನು ಬಂಧಿಸಲಾಗಿತ್ತು ಎಂದು ನ್ಯೂಸ್‌ ಲಾಂಡ್ರಿಯು ವರದಿ ಮಾಡಿದೆ.

ಪೊಲೀಸರು ಗುರುಮುಖ್ ಸಿಂಗ್ ವಿರುದ್ಧ ದಾಖಲಿಸಿರುವ ಎಫ್ಐಆರ್ನಲ್ಲಿ ಅವರು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಆದರೆ ಅವರು ಇದನ್ನು ನಿರಾಕರಿಸಿದ್ದಾರೆ.

ಜಾಮೀನು ಕೋರಿ ಗುರುಮುಖ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ತನಿಖೆಯು ಇನ್ನೂ ಪ್ರಗತಿಯಲ್ಲಿದೆ ಎಂಬ ಕಾರಣವನ್ನು ನೀಡಿ ಫೆ.9ರಂದು ನ್ಯಾಯಾಲಯವು ತಿರಸ್ಕರಿಸಿತ್ತು. ಆದಾಗ್ಯೂ ಮೂರು ದಿನಗಳ ಬಳಿಕ ಅವರ ವಯಸ್ಸು ಮತ್ತು ಅವರ ವಿರುದ್ಧ ಹಿಂದೆ ಯಾವುದೇ ಪ್ರಕರಣಗಳು ಇಲ್ಲದಿರುವುದನ್ನು ಪರಿಗಣಿಸಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.

ಗುರುಮುಖ್ ಸಿಂಗ್ ಈಗ ಸ್ವಗ್ರಾಮಕ್ಕೆ ಮರಳಿದ್ದಾರೆ. “ಪೊಲೀಸರು ನನಗೆ ಭಯೋತ್ಪಾದಕನ ಹಣೆಪಟ್ಟಿಯನ್ನು ಕಟ್ಟಿದ್ದರು. ಸೇನೆಯಲ್ಲಿ ನಾನು 22 ವರ್ಷಗಳ ಸೇವೆ ಸಲ್ಲಿಸಿದ್ದೇನೆ. ಸಾಯುವ ಮೊದಲು ಇದನ್ನು ನಾನು ಕೇಳಬೇಕಿತ್ತೇ” ಎಂದು ಸಿಂಗ್ ಪ್ರಶ್ನಿಸಿದರು.

ಇದನ್ನೂ ಓದಿ: ಕಾವೇರಿ ನೀರಿಗಾಗಿ ತಮಿಳುನಾಡಿನ ಯೋಜನೆಗೆ ಕೇಂದ್ರದಿಂದಲೇ ಹಣಕಾಸಿನ ನೆರವು-ಹೆಚ್ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights