ಕಾವೇರಿ ನೀರಿಗಾಗಿ ತಮಿಳುನಾಡಿನ ಯೋಜನೆಗೆ ಕೇಂದ್ರದಿಂದಲೇ ಹಣಕಾಸಿನ ನೆರವು-ಹೆಚ್ಡಿಕೆ
ಕಾವೇರಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಅದನ್ನು ವೈಗೈ, ವೆಲ್ಲಾರು, ಗುಂಡಾರು ನದಿಗಳಿಗೆ ಜೋಡಣೆ ಮಾಡುವ ತಮಿಳುನಾಡಿನ ಯೋಜನೆ ಮತ್ತು ಅದಕ್ಕೆ ಕೇಂದ್ರ ಸರ್ಕಾರವೇ ಹಣಕಾಸಿನ ನೆರವು ನೀಡುತ್ತಿರುವ ವಿಚಾರ ರಾಜ್ಯ ಸರ್ಕಾರದ ಅರಿವಿಗೇ ಬಾರದೇ ಹೋಗಿದ್ದು ಆಶ್ಚರ್ಯಕರ. ರಾಜಕೀಯದಲ್ಲೇ ಮುಳುಗಿ ಹೋದವರಿಗೆ ರಾಜ್ಯದ ಹಿತ ನೆನಪಿರುತ್ತದೆಯೇ?
ನಾನು ಸಿಎಂ ಆಗಿದ್ದಾಗ ರೂಪಿಸಲಾದ ಮೇಕೆದಾಟು ಯೋಜನೆಗೆ ತಮಿಳುನಾಡಿನ ಎಐಎಡಿಎಂಕೆ ಸರ್ಕಾರ ಅಡಿಗಡಿಗೂ ಕಾಡಿತು. ತನ್ನ ಮಿತ್ರ ಪಕ್ಷ ಬಿಜೆಪಿಯ ನೆರವಿನಿಂದ ಆಕ್ಷೇಪಿಸುತ್ತಲೇ ಬಂದಿತ್ತು. ಅದರ ಆತಂಕಕ್ಕೆ ಕಾರಣವಾಗಿದ್ದದ್ದು ಇದೇ ಹೆಚ್ಚುವರಿ ನೀರು. ಮೇಕೆದಾಟು ಜಲಾಶಯ ನಿರ್ಮಾಣವಾದರೆ ಹೆಚ್ಚುವರಿ ನೀರು ಅಲಭ್ಯ ಎಂಬ ಕಾರಣಕ್ಕೆ ವಿರೋಧಿಸಿತ್ತು.
ಈಗ ಅದೇ ಹೆಚ್ಚುವರಿ 6 ಕ್ಯೂಬಿಕ್ ಫೀಟ್ ನೀರು ಬಳಸಿಕೊಂಡು ಎಐಎಡಿಎಂಕೆ ಸರ್ಕಾರ 342 ಕೆರೆ, 42,170 ಎಕರೆಗೆ ನೀರು ಪೂರೈಸುತ್ತಿದೆ. ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆಯಾದರೂ, ಸಂಕಷ್ಟದ ಪರಿಸ್ಥಿತಿಯಲ್ಲಿ ಹೆಚ್ಚುವರಿ ನೀರನ್ನೂ ತಮಿಳುನಾಡು ತನ್ನ ಹಕ್ಕೆಂದು ಪ್ರತಿಪಾದಿಸುವ ಅಪಾಯವಿದೆ.
ವಿಚಾರ ಈಗ ಮಾಧ್ಯಮಗಳಿಂದ ಬಹಿರಂಗವಾಗುತ್ತಲೇ ಎಚ್ಚೆತ್ತುಕೊಂಡಿರುವ ಸರ್ಕಾರ, ಜಲಸಂಪನ್ಮೂಲ ಸಚಿವರು ಅಧಿಕಾರಿಗಳ ಸಭೆ ನಡೆಸಿದ್ದಾರೆ. ರಾಜ್ಯಕ್ಕೆ ತೊಂದರೆಯಾಗದಂತೆ ಯೋಜನೆ ರೂಪಿಸಲು ಕೋರುವುದಾಗಿ ಹೇಳಿದ್ದಾರೆ. ರಾಜ್ಯಕ್ಕೆ ತೊಂದರೆ ಆಗದಂತೆ ಯೋಜನೆ ರೂಪಿಸುವುದು ಎಂದರೇನು? ಹೆಚ್ಚುವರಿ ನೀರೆಂಬುದು ಮುಂದೊಂದುದಿನ ರಾಜ್ಯಕ್ಕೆ ಮಾರಕವಾಗಲಿದೆ.
ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ, ಮೇಕೆದಾಟು ಜಲಾಶಯದ ವಿಚಾರದಲ್ಲಿ ಎಐಎಡಿಎಂಕೆಯ ಚಾಡಿ ಮಾತನ್ನು ಕಿವಿಕೊಟ್ಟು ಕೇಳಿ ಕರ್ನಾಟಕವನ್ನು ಹಿಂಸಿಸಿದ ಕೇಂದ್ರ ಸರ್ಕಾರ, ತಮಿಳುನಾಡಿನ ಯೋಜನೆಗೆ ಈಗ ಧನಸಹಾಯ ನೀಡುತ್ತಿದೆ. ರಾಜ್ಯದಿಂದ ಎಲ್ಲ ಪಡೆದುಕೊಂಡ ಪಕ್ಷವೊಂದು ಹೇಗೆ ಅದೇ ರಾಜ್ಯವನ್ನು ಶೋಷಿಸುತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆ.
ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ದೀರ್ಘಾವಧಿಯ ಹೋರಾಟದಲ್ಲಿ ತಕ್ಕಮಟ್ಟಿನ ಯಶಸ್ಸು ಸಿಕ್ಕಿದೆ. ಈ ವರೆಗೆ ಜಲಸಂಪನ್ಮೂಲ ನಿರ್ವಹಿಸಿದವರ ಬದ್ಧತೆಯೂ ಇದಕ್ಕೆ ಕಾರಣ ಇರಬಹುದು. ಆದರೆ, ಈ ಸರ್ಕಾರದಲ್ಲಿ ಅದು ಕಾಣುತ್ತಿಲ್ಲ. ಇಲಾಖೆಯ ಕಚೇರಿಯಲ್ಲಿ ನಾನು ಕೂರಬೇಕೆಂಬುದಷ್ಟೇ ಸಚಿವರ ಇಚ್ಚೆಯಾಗಿತ್ತು. ಅದು ಈಡೇರಿದ ಮೇಲೆ ಇಲಾಖೆ ನಗಣ್ಯವಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಕೇಂದ್ರದಲ್ಲೂ ಬಿಜೆಪಿಯದ್ದೇ ಸರ್ಕಾರವಿದೆ. ರಾಜ್ಯದಿಂದ ಬಿಜೆಪಿಗೆ ಅತ್ಯಧಿಕ ಸಂಸದರು ಸಿಕ್ಕಿದ್ದಾರೆ. ಹೀಗಾಗಿ ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಗೌರವಯುತವಾಗಿ, ನ್ಯಾಯಯುತವಾಗಿ ಕರ್ನಾಟಕದ ಹಿತ ಕಾಯಬೇಕು. ಇದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಕಾವೇರಿ ವಿಚಾರದಲ್ಲಿ ಬಿಸಿಮುಟ್ಟಿಸಬೇಕಾಗುತ್ತದ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇಂಥದ್ದೊಂದು ಯೋಜನೆ ಬಗ್ಗೆ ಅರಿವಿಲ್ಲದೇ ಇದ್ದದ್ದು ರಾಜ್ಯದ ಜಲಸಂಪನ್ಮೂಲ ಸಚಿವರ ವೈಫಲ್ಯವೇ ಸರಿ. ಅವರು ಚಾಲೆಂಜ್ ರಾಜಕೀಯ ಮಾಡುವುದು ಬಿಟ್ಟು, ಅವರನ್ನು ಸೋಲಿಸುತ್ತೇನೆ, ಇವರನ್ನು ಸೋಲಿಸುತ್ತೇನೆ ಎನ್ನುವುದನ್ನು ಬಿಟ್ಟು ರಾಜ್ಯದ ಹಿತಕ್ಕಾಗಿ ಚಾಲೆಂಜ್ ಮಾಡಲಿ. ಕನಿಷ್ಠ ಜಲಸಂಪನ್ಮೂಲ ಇಲಾಖೆ ಏನು ಬೇಡುತ್ತದೆಯೋ ಅದನ್ನು ಗಳಿಸಿಕೊಳ್ಳಲಿ ಎಂದಿದ್ದಾರೆ.