ಕಾಫಿ ಬೆಳೆಗಾರರ ಕಣ್ಣೀರು! ರಾಷ್ಟ್ರೀಯ ವಿಪತ್ತು ಘೋಷಣೆ ಗೆ 15 ದಿನ ಗಡುವು ನೀಡಿದ ಬೆಳೆಗಾರರು

ಮಲೆನಾಡ ಮಹಾಮಳೆ ಕಾಫಿ-ಮೆಣಸು ಬೆಳೆಗಾರರಿಗೆ ಬಿಸಿ ತುಪ್ಪವಾಗಿದ್ರೆ, ಸರ್ಕಾರಗಳ ಮೌನ ಜೀವಂತ ಸಮಾಧಿಯನ್ನಾಗಿಸಿದೆ. ವರ್ಷದಿಂದ ವರ್ಷಕ್ಕೆ ಕಾಫಿಯ ದರ ಕುಂಠಿತಗೊಳ್ತಿದ್ದು ಕಾಫಿಯನ್ನೇ ಆಶ್ರಯಿಸಿದ್ದ ಮಲೆನಾಡಿಗರ ಬದುಕು ಬೀದಿಗೆ ಬಂದಿದ್ದು, ಪ್ರಕೃತಿಯ ಮುನಿಸು ಇನ್ನುಷ್ಟು ಸಂಕಷ್ಟಕ್ಕೆ ದೂಡಿದೆ. ಮಹಾಮಳೆಗೆ ಕಾಫಿ, ಮೆಣಸು ಕೊಚ್ಚಿ ಹೋಗಿದ್ದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಸರ್ಕಾರಗಳು ಬೆಳೆಗಾರರ ನೆರವಿಗೆ ಬಾರದಿದ್ರೆ, ಸರ್ಕಾರದ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ ಬೆಳೆಗಾರರು..

ಕಾಫಿನಾಡಲ್ಲಿ 90 ಸಾವಿರಕ್ಕೂ ಅಧಿಕ ಹೆಕ್ಟೇರ್‍ನಲ್ಲಿ ಕಾಫಿ ಬೆಳೆಯಲಾಗಿದೆ. ಅಷ್ಟರಲ್ಲೂ ಕಾಫಿಗೆ ಪರ್ಯಾಯವಾಗಿ ಮೆಣಸು ಬೆಳೆದಿದ್ದಾರೆ. ಆದ್ರೆ ಕಳೆದ ಎರಡೂವರೆ ತಿಂಗಳ ಹಿಂದೆ ಸುರಿದ ಮಹಾಮಳೆಗೆ ಕಾಫಿ, ಮೆಣಸು ಕೊಚ್ಚಿ ಹೋಗಿದ್ದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್.ಆರ್ ಪುರ ಸೇರಿದಂತೆ ಮಲೆನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಗೆ ಕಾಫಿ, ಮೆಣಸು ಸಂಪೂರ್ಣವಾಗಿ ಮಣ್ಣು ಪಾಲಾಗಿದೆ. ಎಕರೆ ಕಾಫಿಗೆ ವರ್ಷಕ್ಕೆ 70 ಸಾವಿರ ಖರ್ಚು ಮಾಡ್ತಿದ್ರೆ, ಸಿಗ್ತಿರೋದು ಕೇವಲ 30 ಸಾವಿರ ಮಾತ್ರ. ಈ ಮಧ್ಯೆ ಸಣ್ಣ ಬೆಳೆಗಾರರು ಪಡೆದ ಸಾಲಕ್ಕೆ ಬ್ಯಾಂಕ್‍ನವರ ಕಾಟ. ಬೆಳೆಗಾರರು ಇಷ್ಟೆಲ್ಲಾ ಸಮಸ್ಯೆಯಲ್ಲಿದ್ರು ಕೇಂದ್ರ ಸರ್ಕಾರ ಮೌನ ವಹಿಸಿರೋದ್ರ ವಿರುದ್ಧ ಕಾಫಿ ಬೆಳೆಗಾರರು ಕೇಂದ್ರದ ವಿರುದ್ಧ ಕೆಂಡಾಮಂಡಲರಾಗಿ, 15 ದಿನಗಳ ಗಡುವು ನೀಡಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸದಿದ್ರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನ ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೀಡಿದ್ದಾರೆ.

ದೇಶ-ವಿದೇಶದಲ್ಲೂ ಕಾಫಿನಾಡ ಕಾಫಿಯ ಘಮಲು ಪಸರಿಸಿದೆ. ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ನೀಡಿದೆ. ಆದ್ರೆ ಕೆಲ ವರ್ಷಗಳಿಂದ ಕೊಳೆರೋಗ, ಬೆರಿಬೋರರ್, ಮಾರುಕಟ್ಟೆ ಅನಿಶ್ಚಿತತೆ, ಉತ್ಪಾದನಾ ವೆಚ್ಚ ಏರಿಕೆ, ಬೆಲೆಯಲ್ಲಿ ಗಣನೀಯ ಇಳಿಕೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನ ಎದುರಿಸುತ್ತಲೇ ಇದ್ದಾರೆ. ಇಂತಹ ಸಂಕಷ್ಟಗಳನ್ನ ಹೇಗೋ ದಾಟಿಕೊಂಡು ಬಂದಿದ್ದ ಕಾಫಿ ಬೆಳೆಗಾರರಿಗೆ ಈ ಬಾರಿಯ ಮಹಾ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಕಾಫಿಗೆ ಮಾತ್ರವಲ್ಲ ಕಪ್ಪು ಚಿನ್ನ ಎಂದು ಕರೆಸಿಕೊಳ್ಳುವ ಕಾಳು ಮೆಣಸಿಗೂ ಇದರ ಬಿಸಿ ತಟ್ಟಿದೆ. ಬಳ್ಳಿಗಳು ನೆಲಕ್ಕೆ ಉರುಳಿದ್ರೆ. ಕಾಯಿ ಕಟ್ಟುತ್ತಿಲ್ಲ. ರೋಗ ಬಾಧೆ. ಹೀಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎನ್ನುವ ಅಳಲು ಬೆಳೆಗಾರರದ್ದು. ಸದ್ಯ ಒಂದು ಹೆಕ್ಟೇರ್ಗೆ (ಅಂದರೆ ಎರಡೂವರೆ ಎಕರೆ) 18 ಸಾವಿರ ಘೋಷಣೆ ಮಾಡಿರುವ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ, ಬದಲಾಗಿ ಕೇಂದ್ರ ಸರ್ಕಾರ ಸದ್ಯ ಆಗಿರೋ ನಷ್ಟವನ್ನ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಬೆಳೆಗಾರರ ಸಂಕಷ್ಟಕ್ಕೆ ಧಾವಿಸುವಂತೆ ಸಂತ್ರಸ್ಥರು ಮನವಿ ಮಾಡಿದ್ದಾರೆ.

ಒಟ್ಟಾರೆ, ಉದ್ಯಮದ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದ್ದ ಕಾಫಿ ಮಂಡಳಿ ನಿದ್ದೆಗೆ ಜಾರಿದೆ. ಕೇಂದ್ರ ಸರ್ಕಾರ ಇತ್ತ ಕಣ್ಣುಹಾಯಿಸಿಲ್ಲ. ಜನಪ್ರತಿನಿಧಿಗಳು ಗಮನಹರ್ಸಿಲ್ಲ ಎಂದು ಅಳಲು ತೋಡಿಕೊಳ್ಳುವ ಕಾಫಿ ಬೆಳೆಗಾರರು ಸರ್ಕಾರ ತಕ್ಷಣ ಸ್ಪಂದಿಸಿ ಶೂನ್ಯವಲಯ ಎಂದು ಘೋಷಿಸಿ ಸಾಲ ಮನ್ನಾ ಮಾಡೋದ್ರ ಜೊತೆಗೆ ಸೂಕ್ತ ಪರಿಹಾರವನ್ನ ನೀಡಬೇಕು ಅಂತಾ ಬೆಳೆಗಾರರು ಒತ್ತಾಯಿಸಿದ್ದಾರೆ. ಇದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯಾವ ರೀತಿ ಸ್ಪಂದನೆ ನೀಡುತ್ತವೆ ಎಂಬುದನ್ನ ಕಾದು ನೋಡಬೇಕಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights