ಅಸ್ಸಾಂ ಚುನಾವಣೆ: NDA ತೊರೆದು ಕಾಂಗ್ರೆಸ್‌ ಜೊತೆ ಸೇರಿದ BPF ಪಕ್ಷ!

ಅಸ್ಸಾಂ ಚುನಾವಣೆಗೆ ಕೇಲವೇ ದಿನಗಳು ಬಾಕಿ ಇವೆ. ಆಡಳಿತಾರೂಢ ಬಿಜೆಪಿ ಈ ಬಾರಿಯೂ ಅಧಿಕಾರವನ್ನು ಉಳಿಸಿಕೊಳ್ಳಲು ಭಾರೀ ಕಸರತ್ತು ಮಾಡುತ್ತಿದೆ. ಈ ನಡುವೆ ಸರ್ಕಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ (BPF‌) ಪಕ್ಷವು ಕೇಸರಿ ಪಕ್ಷದೊಂದಿಗಿನ ಮೈತ್ರಿ ತೊರೆದು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ಇದು ಬಿಜೆಪಿ ಆಘಾತವನ್ನು ನೀಡಿದೆ ಎಂದು ಹೇಳಲಾಗುತ್ತಿದೆ.

ಕಳೆದ 2016ರ ಚುನಾವಣೆಯಲ್ಲಿ ಅಸ್ಸಾಂನ ಒಟ್ಟು 126 ಸ್ಥಾನಗಳಲ್ಲಿ ಬಿಪಿಎಫ್ 12 ಸ್ಥಾನಗಳಲ್ಲಿ ಜಯಗಳಿಸಿತ್ತು. ನಂತರ ಬಿಜೆಪಿ ಜೊತೆಗೂಡಿ ಸರ್ಕಾರದ ಭಾಗವಾಗಿತ್ತು. ಆದರೆ ಬಿಜೆಪಿಯು ಕಳೆದ ವರ್ಷ ಬಿಪಿಎಫ್‌ ಅನ್ನು ಬದಿಗೊತ್ತಿ, ಹೊಸ ಪಕ್ಷಗಳನ್ನು ಆಡಳಿತಕ್ಕೆ ಸೇರಿಸಿಕೊಂಡಿತ್ತು.

ಇದರಿಂದಾಗಿ ಬಿಜೆಪಿ ಜೊತೆಗಿನ ಮೈತ್ರಿ ಮುರಿದಿದ್ದು, ಕಾಂಗ್ರೆಸ್‌ ಜೊತೆಗೆ ಕೈ ಜೋಡಿಸುವುದಾಗಿ ಭಾನುವಾರ ಘೋಷಣೆ ಮಾಡಲಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಬಲ ತಂದುಕೊಟ್ಟರೆ, ಆಡಳಿತರೂಢ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನಲಾಗಿದೆ.

“ಶಾಂತಿ, ಐಕ್ಯತೆ, ಅಭಿವೃದ್ದಿ, ಸ್ಥಿರ ಸರ್ಕಾರ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಪಕ್ಷವು ಮಹಾಜಾಥ್ ಮೈತ್ರಿ ಸೇರಲು ನಿರ್ಧರಿಸಿದೆ. ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಮಹಾಜಾಥ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಬಿಜೆಪಿಯೊಂದಿಗೆ ಇನ್ನು ಮುಂದೆ ಯಾವುದೇ ಮೈತ್ರಿ ಇರುವುದಿಲ್ಲ” ಎಂದು ಬಿಪಿಎಫ್ ಮುಖಂಡ ಹಗ್ರಮ ಮೊಹಿಲರಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಅಸ್ಸಾಂ ರಾಜ್ಯದ ಸರ್ಬಾನಂದ ಸೋನೊವಾಲ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮೂವರು ಮಂತ್ರಿಗಳನ್ನು ಹೊಂದಿದ್ದ ಬಿಪಿಎಫ್, ಡಿಸೆಂಬರ್‌ನಲ್ಲಿ ನಡೆದ ಬಿಟಿಸಿ ಸ್ಥಳೀಯ ಚುನಾವಣೆಯಲ್ಲಿ 40 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಆದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 12 ಸ್ಥಾನಗಳನ್ನು ಗೆದ್ದ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಯನ್ನು ಅಭಿನಂದಿಸಿದರು ಮತ್ತು ತಮ್ಮ ಟ್ವೀಟ್‌ನಲ್ಲಿ ಪಕ್ಷವನ್ನು “ಮಿತ್ರ” ಎಂದು ಬಣ್ಣಿಸಿದ್ದರು. ಬಿಜೆಪಿ ಬೆಂಬಲದೊಂದಿಗೆ ಯುಪಿಪಿಎಲ್ ಮುಖ್ಯಸ್ಥ ಪ್ರಮೋದ್ ಬೊರೊ ಬಿಟಿಸಿಯಲ್ಲಿ ಹೊಸ ಮುಖ್ಯ ಕಾರ್ಯನಿರ್ವಾಹಕ ಸದಸ್ಯ (ಸಿಇಎಂ) ಆಗಲಿದ್ದಾರೆ ಎಂದು ಸಿಎಂ ಸೋನೊವಾಲ್ ಘೋಷಿಸಿದ್ದರು.

Read Also: ಚುನಾವಣಾ ಸಮೀಕ್ಷೆ: ಅಸ್ಸಾಂನಲ್ಲಿ BJPಗೆ ಭರ್ಜರಿ ಜಯ; ಉಳಿದ ರಾಜ್ಯಗಳ ಕತೆ ಏನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights