ಗೋಕಾಕ್ ನಲ್ಲಿ ರಮೇಶ್ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ : ಬಸ್ ಸಂಚಾರ ಬಂದ್!

ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕೂಡ ಗೋಕಾಕ್ ನಲ್ಲಿ ರಮೇಶ್ ಬೆಂಬಲಿಗರು ಬೃಹತ್ ಪ್ರತಿಭಟನೆ ಕೈಗೊಂಡಿದ್ದಾರೆ.

ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕು ಕಣ್ಣೂರು ಪಟ್ಟಣದಿಂದ 10 ಕಿ.ಮೀ ರ್ಯಾಲಿ ನಡೆಯಲಿದೆ. ರಮೇಶ್ ಜಾರಕಿಹೊಳಿಯನ್ನು ರಾಸಲೀಲೆ ಪ್ರಕರಣದಲ್ಲಿ ಸಿಗಿಸಿ ಹಾಕಲಾಗಿದೆ. ಇದನ್ನು ಸಿಬಿಐಗೆ ತನಿಗೆಗೆ ನೀಡಬೇಕು. ದೂರುದಾರ ದಿನೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಬೆಳಿಗ್ಗೆಯಿಂದಲೇ ಪ್ರತಿಭಟನೆಗೆ ಮುಂದಾದ ಪ್ರತಿಭಟನಾಕಾರರು ಅರ್ಧಗಂಟೆಯಿಂದ ಸರ್ಕಾರಿ ಬಸ್ ಗಳನ್ನು ಬಂದ್ ಮಾಡಿದ್ದಾರೆ.  ಕಾಲೇಜುಗಳು ಕೂಡ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಹೀಗಾಗಿ ದೊಡ್ಡಮಟ್ಟದಲ್ಲಿ ಪೋಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಹಿತಕರ ಘಟನೆಗಳನ್ನು ತಡೆಹಿಡಿಯಲು 200ಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಈ ವೇಳೆ ದೂರುದಾರ ದಿನೇಶ್ ವಿರುದ್ಧ ಘೋಷಣೆ ಕೂಗುತ್ತಾ ರಮೇಶ್ ಬೆಂಬಲಿಗನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಸಿದ್ದಾನೆ. ಬಾಲದಿನ್ನಿಯ ಕೊಣ್ಣೂರು ಕ್ರಾಸ್ ನಲ್ಲಿ ಬೆಂಬಲಿಗ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪೊಲೀಸರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಜೊತೆಗೆ ಪ್ರತಿಭಟನಾಕಾರರು ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಗೋಕಾಕ್ ಸರ್ಕಾರಿ ಬಸ್ ಗಳು ಸಂಚಾರ ಸಂಪೂರ್ಣ ಬಂದ್ ಆಗಿದ್ದು ವಿದ್ಯಾರ್ಥಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಮೊನ್ನೆಯಷ್ಟೇ ಬಲವಂತವಾಗಿ ಮಾರ್ಕೇಟ್ ಬಂದ್ ಮಾಡಲಾಗಿತ್ತು. ಸರ್ಕಾರಿ ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಇಂದು ಬಸ್ ಬಂದ್ ಮಾಡಲಾಗಿದ್ದು ಶಾಲಾ-ಕಾಲೇಜುಗಳಿಗೆ ಹೋಗಬೇಕಿದ್ದ ವಿದ್ಯಾರ್ಥಿಗಳು, ಪ್ರಯಾಣಿಗಳು ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಜೊತೆಗೆ ಬೆಳಗಾವಿ-ಧಾರವಾಡ ಮುಖ್ಯ ರಸ್ತೆ ಬಂದ್ ಮಾಡಲಾಗಿದೆ. ಕಣ್ಣೂರಿನಿಂದ ಪ್ರತಿಭಟನೆ ಡಿವೈಎಸ್ಪಿ ಕಚೇರಿ ತಲುಪಿ ಮನವಿ ಸಲ್ಲಿಸಲಿದ್ದಾರೆ. ಹೀಗಾಗಿ ಸದ್ಯಕ್ಕೆ ಗೋಕಾಕ್ ನಲ್ಲಿ ಬೆಂಬಲಿಗರ ಆಕ್ರೋಶ ತಣ್ಣಗಾಗುವಂತೆ ಕಾಣಿಸುತ್ತಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights