ಬಂಗಾಳದಲ್ಲಿ ಮೋದಿ ರ್‍ಯಾಲಿಗಾಗಿ 3 ರೈಲು ಬಾಡಿಗೆಗೆ; ವಿವಿಧ ಪ್ರದೇಶದ ಜನರನ್ನು ಕರೆತಂದ BJP!

ಪಶ್ಚಿಮ ಬಂಗಾಳದ ಚುನಾವಣೆಯ ಭಾಗವಾಗಿ ಭಾನುವಾರ ಕೊಲ್ಕತ್ತಾದಲ್ಲಿ ನಡೆದ ಪ್ರಧಾನಿ ಮೋದಿಯವರ ಬ್ರಿಗೇಡ್ ರ್‍ಯಾಲಿಗಾಗಿ ಜನರನ್ನು ಕರೆತರಲು ಬಿಜೆಪಿ ಮೂರು ರೈಲುಗಳನ್ನು ಬಾಡಿಗೆಗೆ ಪಡೆದಿತ್ತು ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ, ಉತ್ತರ ದಿನಾಜ್‌ಪುರ ಜಿಲ್ಲೆಯ ಅಲಿಪುರ್ದುರ್, ಮಾಲ್ಡಾ ಮತ್ತು ಹರಿಶ್ಚಂದ್ರಪುರದಿಂದ ಬುಕ್ ಮಾಡಲಾಗಿರುವ ಈ ಮೂರು ರೈಲುಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಿಜೆಪಿಯು 60 ಲಕ್ಷ ರೂ. ಖರ್ಚು ಮಾಡಿದೆ.

22 ಬೋಗಿಗಳ ಎರಡು ವಿಶೇಷ ರೈಲು ಅಲಿಪುರ್ದುರ್ ಮತ್ತು ಮಾಲ್ಡಾದಿಂದ ಶನಿವಾರ ಸಂಜೆ ಹೊರಟು ಭಾನುವಾರ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಹೌರಾ ನಿಲ್ದಾಣವನ್ನು ತಲುಪಿದೆ ಎನ್ನಲಾಗಿದೆ. ಎರಡು ರೈಲುಗಳ ಬಾಡಿಗೆ ಶುಲ್ಕ ಕ್ರಮವಾಗಿ 26 ಲಕ್ಷ ಮತ್ತು 22 ಲಕ್ಷ ರೂ.ಗಳಾಗಿದೆ.

ಹರಿಶ್ಚಂದ್ರಪುರದಿಂದ ಹೊರಟ 16 ಭೋಗಿಗಳನ್ನು ಹೊಂದಿರುವ ಮೂರನೇ ವಿಶೇಷ ರೈಲು ಶನಿವಾರ ಸಂಜೆ ಹೊರಟು ಭಾನುವಾರ ಬೆಳಿಗ್ಗೆ ಸೀಲ್ಡಾ ನಿಲ್ದಾಣವನ್ನು ತಲುಪಿದ್ದು, ಈ ರೈಲಿನ ಬಾಡಿಗೆ ಶುಲ್ಕ 18 ಲಕ್ಷ ರೂ.ಗಳಾಗಿದೆ.

ಈ ಮೂರು ರೈಲುಗಳು ಹೌರಾ ಮತ್ತು ಸೀಲ್ಡಾದಲ್ಲಿ 18 ಗಂಟೆಗಳ ಕಾಲ ಕಾದು, ಪ್ರಧಾನಿಯ ರ್‍ಯಾಲಿ ಮುಗಿದ ನಂತರ ಬಿಜೆಪಿ ಬೆಂಬಲಿಗರನ್ನು ಆಯಾ ಸ್ಥಳಗಳಿಗೆ ಹಿಂತಿರುಗಿಸಿದೆ. ಸಾಮಾನ್ಯ ವಿಶೇಷ ರೈಲು ಶುಲ್ಕದ ಶೇಕಡಾ 10 ಕ್ಕಿಂತ ಹೆಚ್ಚು ಹಣವನ್ನು ಪಾವತಿಸುವ ಮೂಲಕ ರೈಲುಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದು ಐಆರ್‌ಸಿಟಿಸಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿಯಾಗಿದೆ.

ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿವೆ. ಇದರ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಮೋದಿಗೆ ಚುನಾವಣಾ ರ್‍ಯಾಲಿ ನಡೆಸಲು ಸಮಯವಿದೆ; ರೈತರ ಭೇಟಿಗೆ ಸಮಯವಿಲ್ಲ: ಶರದ್ ಪವಾರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights