‘ವಿಸ್ಟ್ರಾನ್’ ಕಂಪನಿ ದುರ್ಘಟನೆ: ಸತ್ಯಶೋಧನಾ ವರದಿ ಬಿಡುಗಡೆ; ವರದಿಯಲ್ಲಿ ಹೇಳಿದ್ದೇನು?

ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ’ವಿಸ್ಟ್ರಾನ್’ ಕಂಪನಿಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ AICCTU ಕಾರ್ಮಿಕ ಸಂಘಟನೆಯು ಸತ್ಯಶೋಧನೆ ನಡೆಸಿದೆ. ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಕಾನೂನುಗಳ ಉಲ್ಲಂಘನೆ ಮತ್ತು ಕೈಗಾರಿಕಾ ಶಾಂತಿಯನ್ನು ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿಯಲ್ಲಿ ತಿಳಿಸಿದೆ.

3-4 ತಿಂಗಳ ಬಾಕಿ ಸಂಬಳ ನೀಡಬೇಕೆಂದು ಹಲವು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಸಾವಿರಾರು ಕಾರ್ಮಿಕರು ಡಿಸೆಂಬರ್‌ 12 ರ ಬೆಳಿಗ್ಗೆ ತಾಳ್ಮೆ ಕಳೆದುಕೊಂಡಿದ್ದು, ಕಂಪನಿಯ ಒಂದು ಭಾಗಕ್ಕೆ ಬೆಂಕಿ ಹಚ್ಚಿ, ಕಿಟಕಿ ಗಾಜುಗಳನ್ನು ಒಡೆದು, ಕಾರುಗಳನ್ನು ಜಖಂಗೊಳಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿದ್ದ ಪೊಲೀಸರು ಇದುವರೆಗೂ ಸುಮಾರು 160 ಜನರನ್ನು ಬಂಧಿಸಿದ್ದೇವೆ ಎಂದು ನಿನ್ನೆ ತಿಳಿಸಿದ್ದಾರೆ.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮತ್ತು ಕೈಗಾರಿಕಾ ಶಾಂತಿಯನ್ನು ಕಾಪಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾರ್ಮಿಕ ಸಂಘಟನೆ AICCTU ರಾಜ್ಯ ಸರ್ಕಾರಕ್ಕೆ ನೀಡಿರುವ ವರದಿ ಮತ್ತು ಸಲಹೆಗಳ ಪೂರ್ಣ ಪಾಠಕ್ಕೆ ಇಲ್ಲಿ ಕ್ಲಿಕ್ ಮಾಡಿ

ಘಟನೆಯಲ್ಲಿ ಕಾರ್ಖಾನೆಯ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಒಪ್ಪಿಕೊಂಡಿರುವ AICCTU, “ಪೊಲೀಸರೂ ಕಾರ್ಮಿಕರ ಮೇಲೆ ದಾಳಿ ಕೂಡಾ ನಡೆಸಿದ್ದಾರೆ. ಪ್ರಸ್ತುತ ಕಾರ್ಖಾನೆಯ ಜಾಗವನ್ನು ಸಂಪೂರ್ಣವಾಗಿ ಪೊಲೀಸ್ ಪಡೆಗಳ ಮೂಲಕ ನಿರ್ಬಂಧಿಸಲಾಗಿದ್ದು ಸಾರ್ವಜನಿಕರಿಗೆ ಪ್ರವೇಶ ಇಲ್ಲದಂತಾಗಿದೆ. ಕಾರ್ಮಿಕರು ಮಾತನಾಡಲು ಭಯಪಡುತ್ತಿದ್ದು, ಬೀಡುಬಿಟ್ಟಿರುವ ಪೊಲೀಸರ ಭೀತಿಯಿಂದ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ” ಎಂದು ಹೇಳಿದೆ.

“ಲಾಕ್‌ಡೌನ್ ನಂತರದಲ್ಲಿ ಕಾರ್ಯಾರಂಭ ಮಾಡಿದ ಈ ಕಾರ್ಖಾನೆಯು 1343 ಖಾಯಂ ನೌಕರರನ್ನು, 8490 ಗುತ್ತಿಗೆ ಕಾರ್ಮಿಕರನ್ನೂ ನೇಮಕ ಮಾಡಿಕೊಂಡಿದ್ದು, ಒಟ್ಟು ಆರು ಗುತ್ತಿಗೆದಾರರು ಈ ಕಾರ್ಮಿಕರನ್ನು ನೇಮಿಸಿದ್ದಾರೆ. ಕಾರ್ಮಿಕರ ಪೈಕಿ ಇಂಜಿನಿಯರಿಂಗ್ ಪದವೀಧರರು, ಐಟಿಐ ಡಿಪ್ಲೊಮಾ ಹೊಂದಿರುವವರು, 10 ನೆ ತರಗತಿ ಮತ್ತು ಪಿಯುಸಿ ವ್ಯಾಸಂಗ ಮುಗಿಸಿರುವವರು ಇದ್ದಾರೆ” ಎಂದು ವರದಿ ಹೇಳಿದೆ.

ಇದನ್ನೂ ಓದಿ: ವಿಸ್ಟ್ರಾನ್ ಕಂಪನಿ ದಾಳಿಗೆ SFI ಕಾರಣ; BJP ಸಂಸದರ ಹೇಳಿಕೆಗೆ ವಿದ್ಯಾರ್ಥಿ ಸಂಘಟನೆ ಆಕ್ರೋಶ!

ಗುತ್ತಿಗೆ ಕಾರ್ಮಿಕರಲ್ಲಿ ತಮಿಳುನಾಡು, ಆಂಧ್ರ ಪ್ರದೇಶ, ಬಿಹಾರ ಮತ್ತಿತರ ರಾಜ್ಯಗಳಿಂದ ವಲಸೆ ಕಾರ್ಮಿಕರು, ಕರ್ನಾಟಕದ ಇತರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರು ಮತ್ತು ನರಸಾಪುರ ಸುತ್ತಲಿನ ತಾಲೂಕು ಮತ್ತು ಹಳ್ಳಿಗಳಿಂದ ಬಂದಿರುವ ಕಾರ್ಮಿಕರು ಸೇರಿದಂತೆ ಒಟ್ಟು ಮೂರು ವರ್ಗಗಳಿವೆ ಎಂದು AICCTU ಸೂಚಿಸಿದೆ.

ಕಂಪೆನಿಯಲ್ಲಿನ ಕಾರ್ಮಿಕ ವರ್ಗ ಯುವಕರಾಗಿದ್ದು, 26 ವರ್ಷಕ್ಕೂ ಮೇಲ್ಪಟ್ಟ ಕಾರ್ಮಿಕರ ಎಲ್ಲ ಅರ್ಜಿಗಳನ್ನೂ ವಿಸ್ಟ್ರಾನ್ ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎಂದಿರುವ ಕಾರ್ಮಿಕ ಸಂಘಟನೆ, “ಖಾಯಂ ನೌಕರರಿಗೆ ಒದಗಿಸಬೇಕಾದ ಹಕ್ಕುಗಳನ್ನು ಮತ್ತು ಸೌಲಭ್ಯಗಳನ್ನು ತಪ್ಪಿಸುವ ಸಲುವಾಗಿ ಕಂಪೆನಿಯು ಗುತ್ತಿಗೆದಾರರನ್ನು ನೇಮಿಸಿದ್ದು, ನೇಮಕಾತಿ ಆದೇಶವನ್ನು ಕಾರ್ಮಿಕರಿಗೆ ನೀಡುವುದು ಮತ್ತು ವೇತನ ಪಾವತಿ ಮಾಡುವುದನ್ನು ಹೊರತುಪಡಿಸಿ ಗುತ್ತಿಗೆದಾರರು ಮತ್ತಾವುದೇ ಪಾತ್ರ ವಹಿಸುವುದಿಲ್ಲ” ಎಂದು ಹೇಳಿದೆ.

“ಹತ್ತಿರದ ಹಳ್ಳಿಗಳಿಂದ ಬಂದಿರುವ ಕಾರ್ಮಿಕರು ತೀವ್ರ ಬಡತನದ ಹಿನ್ನೆಲೆ ಹೊಂದಿದ್ದು ಹೆಚ್ಚಿನವರು ದಲಿತ ಸಮುದಾಯದವರಾಗಿದ್ದಾರೆ. ಲಾಕ್‌ಡೌನ್‌ನಿಂದಾಗಿ‌‌ ಕಾಲೇಜುಗಳನ್ನು ಮುಚ್ಚಲಾಗಿದ್ದರಿಂದ ಇವರಲ್ಲಿ ಅನೇಕರು ಕಾರ್ಖಾನೆಯ ಕೆಲಸಕ್ಕೆ ಸೇರಿಕೊಂಡಿದ್ದು, ಇವರ ನೇಮಕಾತಿಯ ಸಂದರ್ಭದಲ್ಲಿ ತಿಂಗಳಿಗೆ 22000/- ರೂಗಳ ವೇತನದ ಜೊತೆಗೆ, ಹೆಚ್ಚುವರಿ ದುಡಿಮೆಯ ವೇತನವನ್ನೂ ನೀಡುವುದಾಗಿ ಹೇಳಿತ್ತಾದರೂ ಇದನ್ನು ಕಂಪೆನಿ ನೀಡುತ್ತಿಲ್ಲ. ಜೊತೆಗೆ ರಜೆಯ ಸೌಲಭ್ಯಗಳನ್ನೂ ನೀಡುತ್ತಿಲ್ಲ” ಎಂದು AICCTU ಆರೋಪಿಸಿದೆ. ಇದುವರೆಗೂ ಯಾವುದೇ ಗುತ್ತಿಗೆ ಕಾರ್ಮಿಕರಿಗೆ 12,000 ಕ್ಕಿಂತ ಹೆಚ್ಚಿನ ಸಂಬಳ ನೀಡಿಲ್ಲ ಎಂದು ಕಾರ್ಮಿಕರು ದೂರಿದ್ದಾರೆ.

“ಕಾನೂನು ಪ್ರಕಾರ ನೀಡಬೇಕಾದ ಹೆಚ್ಚುವರಿ ದುಡಿಮೆಯ ವೇತನವನ್ನು ಈವರೆಗೂ ಪಾವತಿ ಮಾಡದಿರುವುದು ಮಾತ್ರವಲ್ಲದೆ, ಪ್ರತಿ ತಿಂಗಳೂ ಕಾರ್ಮಿಕರ ಖಾತೆಗಳಿಗೆ ಜಮಾ ಆಗುವ ವೇತನಗಳು ಕಡಿಮೆಯಾಗುತ್ತಲೇ ಇದೆ. ಕಾರ್ಮಿಕರು ತಮ್ಮ ಕುಂದುಕೊರತೆಗಳನ್ನು ಕಂಪನಿಯ ಅಧಿಕಾರಿಗಳಿಗೆ ಸಲ್ಲಿಸುವುದರ ಜೊತೆಗೆ ಕೋಲಾರದ ಜಿಲ್ಲಾಧಿಕಾರಿಗಳನ್ನೂ ಸಂಪರ್ಕಿಸಿದ್ದರು” ಎಂದು AICCTU ಹೇಳಿದೆ.

“ಡಿಸೆಂಬರ್‌ 9 ರಂದು ಕಾರ್ಮಿಕರು ಸಿಬ್ಬಂದಿ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿ ತಮ್ಮ ವೇತನ ಪಾವತಿ ಮಾಡುವಂತೆ ವಿನಂತಿಸಿದ್ದಾರಾದರೂ, ಅವರ ವಿನಂತಿಯನ್ನು ಆಲಿಸಲಾಗಿಲ್ಲ. ಆದರೆ ಇದಾಗಿ ಕೆಲವೆ ದಿನದಲ್ಲಿ ಒಮ್ಮೆಲೆ ಪರಿಸ್ಥಿತಿ ಕೈಮೀರಿಹೋಗಿದ್ದು, ಕೆಲವು ಕಾರ್ಮಿಕರು ಕಂಪನಿಯ ಆಸ್ತಿಪಾಸ್ತಿಯ ಹಾನಿ ಮಾಡಿದ್ದಾರೆ. ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ವಿಡಿಯೋ ಚಿತ್ರಗಳ ಅನುಸಾರ ಕಾರ್ಮಿಕರು ಗಾಜಿನ ಕಿಟಕಿಗಳನ್ನು ಒಡೆದುಹಾಕಿದ್ದು, ವಾಹನಗಳನ್ನು ತಲೆಕೆಳಗು ಮಾಡಿರುವುದು, ಹಾನಿ ಮಾಡಿರುವುದು ಕಂಡುಬಂದಿದೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರ್ಮಿಕರನ್ನು ಚದುರಿಸಿದ್ದಾರೆ”

ಇದನ್ನೂ ಓದಿ: ನಾಲ್ಕು ತಿಂಗಳಿಂದ ವೇತನ ನೀಡದ ಕಂಪನಿ; ಕಾರುಗಳಿಗೆ ಬೆಂಕಿ ಹಚ್ಚಿ, ಕಚೇರಿ ಮೇಲೆ ನೌಕರರ ದಾಳಿ!

ಹೊರಗಿನಿಂದ ಕೆಲವು ವ್ಯಕ್ತಿಗಳು ಕಾರ್ಖಾನೆಯೊಳಗೆ ಬಂದು ಧ್ವಂಸ ಮಾಡಿದ್ದಾರೆ ಎಂದು ಕೆಲವು ಕಾರ್ಮಿಕರು ಹೇಳಿದ್ದಾರೆಂದು ಹೇಳಿರುವ AICCTU, “ವಿಡಿಯೋ ಚಿತ್ರಣವನ್ನು ನೋಡಿದರೆ, ಬಹುಪಾಲು ಜನರು ಕೇವಲ ವೀಕ್ಷಕರಾಗಿ ಕಾಣುತ್ತಿದ್ದು, ಕೆಲವರು ಮಾತ್ರವೇ ಕಂಪನಿಯ ಆಸ್ತಿಪಾಸ್ತಿಗೆ ಹಾನಿ ಮಾಡಿರುವುದು ಕಂಡುಬರುತ್ತದೆ” ಎಂದಿದೆ. ಇದುವರೆಗೂ ಒಟ್ಟು 160 ಕಾರ್ಮಿಕರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆಯಾದರೂ ಬಂಧಿತರನ್ನು ಕುರಿತಂತೆ ಯಾವುದೇ ಮಾಹಿತಿ ನೀಡಲಾಗಿಲ್ಲ ಎಂದು AICCTU ಆರೋಪಿಸಿದೆ.

“ರಾಜ್ಯ ಸರ್ಕಾರವು ಕಂಪನಿಯ ಆಸ್ತಿಪಾಸ್ತಿಗೆ ಹಾನಿ ಮಾಡಿರುವುದನ್ನು ಖಂಡಿಸಿದೆ. ಆದರೆ ಕಾರ್ಮಿಕರ ಬವಣೆಯ ಬಗ್ಗೆ ಯಾವುದೇ ಅನುಕಂಪ ವ್ಯಕ್ತಪಡಿಸಿಲ್ಲ. ಡಿ.12 ರಂದು ನಡೆದ ಘಟನೆಗಳು ಶೋಷಣೆಗೊಳಗಾದ, ಅಸಂಘಟಿತ ಕಾರ್ಮಿಕರ ಹತಾಶೆ ಮತ್ತು ಆಕ್ರೋಶದ ಪರಿಣಾಮವಾಗಿದ್ದು, ತಮ್ಮ ಕುಂದುಕೊರತೆಗಳನ್ನು ನಿವಾರಿಸಲು ಯಾವುದೇ ಮಾರ್ಗ ಕಾಣದೆ ಈ ದಾಂಧಲೆಯಲ್ಲಿ ತೊಡಗಿದೆ. ತಮ್ಮ ವಿರುದ್ದ ನಡೆಯುತ್ತಿರುವ ಶೋಷಣೆಯ ಒತ್ತಡ ಒಮ್ಮೆಲೆ ಸ್ಫೋಟಿಸಿದ್ದು ಈ ಹಿಂಸಾತ್ಮಕ ಘಟನೆಯಲ್ಲಿ ಪರ್ಯವಸಾನ ಹೊಂದಿದೆ” ಎಂದು ಕಾರ್ಮಿಕ ಸಂಘಟನೆ ಹೇಳಿದೆ.

ಕಾರ್ಮಿಕರು ನಡೆದಿರುವ ಘಟನೆಯ ಬಗ್ಗೆ ಭಯಗೊಂಡಿದ್ದು, ಈ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ, ಕಾರ್ಮಿಕ ಇಲಾಖೆ ಮತ್ತು ಪೊಲೀಸರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾರ್ಮಿಕ ಸಂಘಟನೆಯು ಸಲಹೆ ನೀಡಿದೆ.

“ವೇತನ ಪಾವತಿಯಾಗದಿರುವುದು ಮತ್ತು ತಡವಾಗಿ ಪಾವತಿಯಾಗಿರುವುದು 1936 ರ ವೇತನ ಪಾವತಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು. ಕನಿಷ್ಟ ವೇತನ ಪಾವತಿ ಮಾಡದಿರುವುದು ಮತ್ತು ಹೆಚ್ಚುವರಿ ದುಡಿಮೆಯ ವೇತನ ನೀಡದಿರುವುದು 1948 ರ ಕನಿಷ್ಟ ವೇತನ ಕಾಯ್ದೆಯ ಉಲ್ಲಂಘನೆಯಾಗಿದೆ. ಕಾರ್ಖಾನೆ ಕಾಯ್ದೆಯ ಸೆಕ್ಷನ್ 59 ರ ಉಲ್ಲಂಘಿಸಿ ಹೆಚ್ಚುವರಿ ದುಡಿಮೆಗೆ ಪಾವತಿ ಮಾಡಿಲ್ಲ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ” ಎಂದು AICCTU ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ಇದನ್ನೂ ಓದಿ: ಪ್ರತಿಭಟನೆ ಪೆಂಡಾಲ್‌ ಕಿತ್ತೆಸೆದು ಟೊಯೊಟಾ ಕಂಪನಿ ದರ್ಪ; ಛತ್ರಿ ಚಳುವಳಿ ಆರಂಭಿಸಿದ ಕಾರ್ಮಿಕರು

“1947 ರ ಕೈಗಾರಿಕಾ ವಿವಾದಗಳ ಕಾಯ್ದೆಯ ಅನುಸಾರ 100 ಕ್ಕಿಂತಲೂ ಹೆಚ್ಚಿನ ಕಾರ್ಮಿಕರು ಇರುವ ಯಾವುದೇ ಕೈಗಾರಿಕೋದ್ಯಮವು ಕಾರ್ಮಿಕ ಮತ್ತು ಮಾಲಿಕರ ಪ್ರತಿನಿಧಿಗಳನ್ನೊಳಗೊಂಡ ಕ್ರಿಯಾ ಸಮಿತಿಯೊಂದನ್ನು ರಚಿಸುವುದು ಕಡ್ಡಾಯವಾಗಿದೆ. ಆದರೆ ಈ ಕಾರ್ಖಾನೆಯಲ್ಲಿ ಈ ಯಾವುದೇ ನಿಯಮಗಳನ್ನು ಪಾಲಿಸಲಾಗಿಲ್ಲ” ಎಂದು AICCTU ಹೇಳಿದೆ.

ಕಂಪೆನಿಯು ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ನಿಯಮಗಳನ್ನು ಮೀರಿ ದುಡಿಸಿಕೊಳ್ಳುತ್ತಿದೆ. 10 ಸಾವಿರಕ್ಕಿಂತಲೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಒಂದು ಉದ್ದಿಮೆಯಲ್ಲಿ ಕಾರ್ಮಿಕರಿಗೆ ಸಂಘಟನೆ ಇಲ್ಲ ಎಂದು ಕಾರ್ಮಿಕ ಸಂಘಟನೆಯು ವಿಷಾದ ವ್ಯಕ್ತಪಡಿಸಿದ್ದು, “ಗುತ್ತಿಗೆ ಕಾರ್ಮಿಕರನ್ನು ಹಿಂಬಾಗಿಲಿನಿಂದ ನೇಮಕ ಮಾಡಿ, ಗುತ್ತಿಗೆ ಕಾರ್ಮಿಕ ಕಾಯ್ದೆಗಳನ್ನೂ ಉಲ್ಲಂಘನೆ ಮಾಡಿದೆ. ಈ ವಿಷಯದಲ್ಲಿ ಸರ್ಕಾರವು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು” ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

“ಡಿಸೆಂಬರ್ 12 ರ ಘಟನೆಗಳು ಕಂಪನಿಯಲ್ಲಿ ಅನುಸರಿಸಲಾಗಿರುವ ಶೋಷಕ ನೀತಿಗಳ ಪರಿಣಾಮವಾಗಿದ್ದು, ಎಲ್ಲ ಕಾರ್ಮಿಕ ಕಾನೂನು ನಿಯಮಗಳನ್ನೂ ಉಲ್ಲಂಘಿಸಿ, ಬಡ ಕಾರ್ಮಿಕರ ಮೂಲ ವೇತನವನ್ನೂ ಪಾವತಿ ಮಾಡದೆ ಇರುವುದರಿಂದ ನೊಂದ ಶೋಷಿತ ಕಾರ್ಮಿಕರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ ಕಾರ್ಮಿಕರು ಅಸಹಾಯಕ ಪರಿಸ್ಥಿತಿಗೆ ದೂಡಲ್ಪಟ್ಟ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕಾರ್ಮಿಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವುದು, ಕಾರ್ಮಿಕರನ್ನು ಬಂಧಿಸುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡುವಂತೆ ಮಾಡುತ್ತದೆ. ರಾಜ್ಯ ಸರ್ಕಾರ ಇದನ್ನು ಅರ್ಥಮಾಡಿಕೊಳ್ಳಬೇಕಿದೆ. ಹಾಗಾಗಿ ರಾಜ್ಯ ಸರ್ಕಾರವು ಕಾರ್ಮಿಕರ ವಿರುದ್ಧ ದಾಖಲಾಗಿರುವ ಎಲ್ಲ ದೂರುಗಳನ್ನು ಹಿಂಪಡೆಯಬೇಕು” ಎಂದು AICCTU  ಒತ್ತಾಯಿಸಿದೆ.


ಇದನ್ನೂ ಓದಿ: ಟೊಯೊಟಾ ಬೆನ್ನಲ್ಲೇ ಮತ್ತೊಂದು ಕಂಪನಿ ಲಾಕೌಟ್: ಬೀದಿಗೆ ಬಿದ್ದ ಕಾರ್ಮಿಕರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights