CPI(M) ಹಿರಿಯ ಮುಖಂಡ ಮತ್ತು ಕೇರಳ ಕೈಗಾರಿಕಾ ಸಚಿವ ಜಯರಾಜನ್ ಚುನಾವಣಾ ರಾಜಕೀಯಕ್ಕೆ ಗುಡ್‌ ಬೈ!

ಸಿಪಿಐ (ಎಂ) ಹಿರಿಯ ಮುಖಂಡ ಮತ್ತು ಕೇರಳ ಕೈಗಾರಿಕಾ ಸಚಿವ ಇ ಪಿ ಜಯರಾಜನ್ ಅವರು ಚುನಾವಣಾ ರಾಜಕೀಯವನ್ನು ತೊರೆಯಲು ನಿರ್ಧರಿಸಿರುವುದಾಗಿ ಮಂಗಳವಾರ ಹೇಳಿದ್ದಾರೆ.

ಮೂರು ಬಾರಿ ಶಾಸಕರಾಗಿರುವ ಜಯರಾಜನ್ ಈ ಬಾರಿ ಟಿಕೆಟ್ ಪಡೆಯದ ಹಲವಾರು ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಎರಡು ಅವಧಿ ಪೂರ್ಣಗೊಳಿಸಿದವರಿಗೆ ಟಿಕೆಟ್‌ ನೀಡಬಾರದು ಎಂದು ಎಡಪಕ್ಷಗಳು ನಿರ್ಧರಿಸಿವೆ. ಹೀಗಾಗಿ ತಾವು ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜಯರಾಜನ್, ಇಂದಿನಿಂದ ಯಾವುದೇ ರೀತಿಯ ಚುನಾವಣೆಗೆ ಸ್ಪರ್ಧಿಸುವುದಿಲ್ಲ. “ಈಗಾಗಲೇ ಎರಡು ಅವಧಿಗಳನ್ನು ಪೂರ್ಣಗೊಳಿಸಿದ ಪಕ್ಷದ ಮುಖಂಡರನ್ನು ಕಣಕ್ಕಿಳಿಸದಿರಲು ಪಕ್ಷಗಳು ನಿರ್ಧರಿಸಿವೆ. ನಾನು ನನ್ನ ಅವಧಿಯನ್ನು ಪೂರ್ಣಗೊಳಿಸಿದ್ದೇನೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೇನೆ ಮತ್ತು ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ” ಎಂದು ಅವರು ಹೇಳಿದರು.

ಅಲ್ಲದೆ, ತಮಗೆ ವಯಸ್ಸಾಗಿದ್ದು, ವಯೋಸಹಜ ಕಾಯಿಲೆಗಳನ್ನು ಎದುರಿಸುತ್ತಿದ್ದೇನೆ. ಹೀಗಾಗಿ ಚುನಾವಣಾ ರಾಜಕೀಯದಿಂದ ಹೊರಗುಳಿಯಲು ನಿರ್ಧರಿಸಿದ್ದೇನೆ. ತಾವು ಸ್ಪರ್ಧಿಸಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ. ಆದರೆ, ನಾನು ಸ್ಪರ್ಧಿಸಲಾರೆ. ಈ ಬಗ್ಗೆ ಪಕ್ಷದ ನಾಯಕರಿಗೆ ಮನವರಿಕೆ ಮಾಡುತ್ತೇನೆ ಎಂದು 70 ವರ್ಷದ ಜಯರಾಜನ್‌ ಹೇಳಿದ್ದಾರೆ.

“ಪಕ್ಷವು ನನ್ನ ನಿಲುವನ್ನು ಸ್ವೀಕರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ನನ್ನ ಸ್ಥಾನದ ಬಗ್ಗೆ ಪಕ್ಷಕ್ಕೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ. ನನಗೆ ವಯಸ್ಸಾಗುತ್ತಿದೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ.. ಹಾಗಾಗಿ, ನಾನು ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ” ಎಂದು ಹಿರಿಯ ನಾಯಕ ಹೇಳಿದರು .

75 ನೇ ವಯಸ್ಸಿನಲ್ಲಿಯೂ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಯರಾಜನ್, ಮುಖ್ಯಮಂತ್ರಿಯವರು ಅಸಾಧಾರಣ ಸಾಮರ್ಥ್ಯ ಮತ್ತು ಶಕ್ತಿಯನ್ನು ಹೊಂದಿರುವ “ಶ್ರೇಷ್ಠ ವ್ಯಕ್ತಿತ್ವ”ದವರು ಎಂದು ಹೇಳಿದ್ದಾರೆ

ಪಿಣರಾಯಿ ವಿಜಯನ್‌ ಅವರ ಆಪ್ತರಾಗಿದ್ದ ಜಯರಾಜನ್‌, 2016ರಲ್ಲಿ ಎಲ್‌ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೃಗಾರಿಕಾ ಸಚಿವರಾಗಿದ್ದರು. ಆದರೆ, ಈ ವೇಳೆ ಅವರ ವಿರುದ್ದ ಸ್ವಜನಪಕ್ಷಪಾತದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2016 ರ ಅಕ್ಟೋಬರ್‌ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ನಂತರ, 2018ರಲ್ಲಿ ಮತ್ತೆ ಅವರು ಸಚಿವ ಸಂಪುಟಕ್ಕೆ ಸೇರಿದ್ದರು.

ಇದನ್ನೂ ಓದಿ: ಮಿಝೋರಾಂನ ಚಕ್ಮಾ ಕೌನ್ಸಿಲ್ ಸಿಇಎಂ ರಾಜೀನಾಮೆ; BJP ತೊರೆದ 06 ಸದಸ್ಯರು MNFಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights