ಮಿಝೋರಾಂನ ಚಕ್ಮಾ ಕೌನ್ಸಿಲ್ ಸಿಇಎಂ ರಾಜೀನಾಮೆ; BJP ತೊರೆದ 06 ಸದಸ್ಯರು MNFಗೆ ಸೇರ್ಪಡೆ!
ಮಿಜೋರಾಮ್ ರಾಜ್ಯದ ಲಾಂಗ್ಟ್ಲೈ ಜಿಲ್ಲೆಯ ಚಕ್ಮಾ ಸ್ವಾಯತ್ತ ಜಿಲ್ಲಾ ಮಂಡಳಿ (ಸಿಎಡಿಸಿ)ಯ ಮುಖ್ಯ ಕಾರ್ಯನಿರ್ವಾಹಕ ಸದಸ್ಯ (ಸಿಇಎಂ) ಮಿಜೊ ನ್ಯಾಷನಲ್ ಫ್ರಂಟ್ (ಎಂಎನ್ಎಫ್)ನ ರಾಸಿಕ್ ಮೋಹನ್ ಚಕ್ಮಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿದು ಬಂದಿದೆ.
ರಾಸಿಕ್ ಅವರು ತಮ್ಮ ರಾಜೀನಾಮೆಯನ್ನು ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರಿಗೆ ಸೋಮವಾರ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯೊಂದಿಗೆ ಸಿಎಡಿಸಿಯ ಪ್ರಸ್ತುತ ಕಾರ್ಯಕಾರಿ ಸಮಿತಿ ವಿಸರ್ಜನೆಯಾಗಿದೆ ಮತ್ತು ಹೊಸ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗುವುದು ಎಂದು ಸಿಎಡಿಸಿ ಮಾಹಿತಿ ಮತ್ತು ಜನಸಂಪರ್ಕ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 26 ರಂದು ನಡೆದ ಬಜೆಟ್ ಅಧಿವೇಶನದ ಮೊದಲ ಸಭೆಯಲ್ಲಿ ಕೌನ್ಸಿಲ್ ಅಧ್ಯಕ್ಷ ಎಚ್ ಅಮರೇಶ್ ಚಕ್ಮಾ ಅವರನ್ನು ಅವಿಶ್ವಾಸ ನಿರ್ಣಯದಿಂದ ಕೆಳಗಿಳಿಸಿದ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಚಕ್ಮಾ ಜನರ ಹೆಚ್ಚಿನ ಹಿತದೃಷ್ಟಿಯಿಂದ ಹೊಸ ಕಾರ್ಯಕಾರಿ ಸಮಿತಿ ರಚನೆಗೆ ದಾರಿ ಮಾಡಿಕೊಡಲು ರಾಸಿಕ್ ಮೋಹನ್ ಚಕ್ಮಾ ಸ್ವಯಂಪ್ರೇರಣೆಯಿಂದ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಬಿಜೆಪಿಯ ಎಂಟು ಸದಸ್ಯರಲ್ಲಿ ಆರು ಮಂದಿ ಕೇಸರಿ ಪಕ್ಷವನ್ನು ತೊರೆದು ಮಾರ್ಚ್ 27 ರಂದು ಎಂಎನ್ಎಫ್ಗೆ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಬಿಜೆಪಿಗೆ ಸಿಎಡಿಸಿಯಲ್ಲಿ ಹಿನ್ನಡೆ ಅನುಭವಿಸಿದೆ ಎಂದು ಎಂಎನ್ಎಫ್ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: BJPಯೊಂದಿಗೆ ಚುನಾವಣಾ ಆಯೋಗ ಶಾಮೀಲು; TMC ಆಡಿಯೋ ಬಿಡುಗಡೆ!
ಎಂಎನ್ಎಫ್ ಮುಖಂಡ ಮತ್ತು ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಔಪಚಾರಿಕವಾಗಿ ಆರು ಸದಸ್ಯರನ್ನು ಸೇರಿಸಿಕೊಂಡರು – ಬುದ್ಧಲಿಲಾ ಚಕ್ಮಾ, ಅಜೋಯ್ ಕುಮಾರ್ ಚಕ್ಮಾ, ಒನಿಶ್ ಮೊಯ್ ಚಕ್ಮಾ, ಅನಿಲ್ ಕಾಂತಿ ಚಕ್ಮಾ, ಹಿರಾನಂದ್ ಟೋಂಗ್ಚ್ಯಾಂಗ್ಯಾ ಮತ್ತು ಸಂಜೀವ್ ಚಕ್ಮಾ ಅವರು ಮಿಜೋರಾಂ ದಕ್ಷಿಣದ ಲಾಂಗ್ಟ್ಲೈ ಜಿಲ್ಲೆಯ ಕಮಲನಗರದಲ್ಲಿರುವ ಎಂಎಂಎಫ್ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಸೋಮವಾರ ಎಂದು ಹೇಳಿಕೆ ತಿಳಿಸಿದೆ.
ಮಿಜೋರಾಂನ ಬಹುಪಾಲು ಜನರು ಬಿಜೆಪಿ ಸಿದ್ಧಾಂತದ ಬಗ್ಗೆ ತಿಳಿದುಕೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಪ್ರಾಬಲ್ಯ ಬೆಳೆಸಿಕೊಳ್ಳುವುದು ದೂರದ ಕನಸು ಎಂದು ಬುದ್ಧಲೀಲಾ ಚಕ್ಮಾ ಹೇಳಿದ್ದಾರೆ.
ಎಂಎನ್ಎಫ್ ಶಾಸಕಾಂಗ ಪಕ್ಷದ ಸಭೆಯಲ್ಲಿ ದುರ್ಜ್ಯಾ ಧನ್ ಚಕ್ಮಾ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಅವರ ನೇತೃತ್ವದಲ್ಲಿ ಹೊಸ ಸಿಎಡಿಸಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಲಾಗಿದೆ.
ಸಿಎಡಿಸಿಯನ್ನು 1972 ರಲ್ಲಿ ಚಕ್ಮಾ ಜನರಿಗಾಗಿ ಸ್ಥಾಪಿಸಲಾಯಿತು.
ಮಂಡಳಿಯಲ್ಲಿ 24 ಸದಸ್ಯರಿದ್ದು, ಅದರಲ್ಲಿ 20 ಮಂದಿ ಆಯ್ಕೆಯಾಗಿದ್ದಾರೆ ಮತ್ತು 4 ಜನರನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದಾರೆ.
ಪ್ರಸ್ತುತ, ಎಂಎನ್ಎಫ್ 18 ಚುನಾಯಿತ ಸದಸ್ಯರನ್ನು ಹೊಂದಿದ್ದರೆ. ಬಿಜೆಪಿಯು ಮಂಡಳಿನಲ್ಲಿ 2 ಚುನಾಯಿತ ಸದಸ್ಯರನ್ನು ಹೊಂದಿದೆ.
ಇದನ್ನೂ ಓದಿ: ಮಹಾ ಸರ್ಕಾರ ಬಿಕ್ಕಟ್ಟಿನಲ್ಲಿಲ್ಲ; ಪವಾರ್ ಮತ್ತು ಅಮಿತ್ ಶಾ ರಹಸ್ಯ ಭೇಟಿ ನಡೆಸಿಲ್ಲ: ಸಂಜಯ್ ರಾವತ್