ಮಹಾ ಸರ್ಕಾರ ಬಿಕ್ಕಟ್ಟಿನಲ್ಲಿಲ್ಲ; ಪವಾರ್‌ ಮತ್ತು ಅಮಿತ್‌ ಶಾ ರಹಸ್ಯ ಭೇಟಿ ನಡೆಸಿಲ್ಲ: ಸಂಜಯ್‌ ರಾವತ್‌

ಮಹಾರಾಷ್ಟ್ರದ ಮಹಾ ವಿಕಾಸ್‌ ಅಗಾಡಿ ಸರ್ಕಾರ ಬಿಕ್ಕಟ್ಟಿನಲ್ಲಿದೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್‌ನಲ್ಲಿ ರಹಸ್ಯವಾಗಿ ಭೇಟಿಯಾಗಿದ್ದರು ಎಂಬ ವದಂತಿಗಳು ಮಹಾರಾಷ್ಟ್ರ ರಾಜಕೀಯದ ಸುತ್ತ ಹರಿದಾಡುತ್ತಿವೆ. ಇಂತಹ ವದಂತಿಗಳನ್ನು ಅಂತ್ಯಗೊಳಿಸಬೇಕು. ಪವಾರ್‌ ಮತ್ತು ಅಮಿತ್‌ ಶಾ ನಡುವೆ ಯಾವುದೇ ರಹಸ್ಯ ಭೇಟಿ ನಡೆದಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ಶರದ್ ಪವಾರ್ ಮತ್ತು ಅವರ ಪಕ್ಷದ ಮುಖಂಡ ಪ್ರಫುಲ್ ಪಟೇಲ್ ಅವರು ಕೇಂದ್ರ ಗೃಹ ಸಚಿವರನ್ನು ಅಹಮದಾಬಾದ್‌ನ ತೋಟದ ಮನೆಯೊಂದರಲ್ಲಿ ಶನಿವಾರ ಭೇಟಿಯಾಗಿದ್ದರು ಎಂದು ಗುಜರಾತ್‌ನ ಸ್ಥಳೀಯ ಸುದ್ದಿ ಮಾಧ್ಯಮ ವರದಿ ಮಾಡಿದ್ದವು.

ವರದಿ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯಲಿದೆ ಎಂದು ಚರ್ಚೆಗೆ ಗ್ರಾಸವಾಗಿತ್ತು. ಈ ವದಂತಿಗೆ ಅಂತ್ಯ ಹಾಡಿರುವ ಶಿವಸೇನ ಮುಖಂಡ ಸಂಜಯ್ ರಾವತ್, ಶರದ್ ಪವಾರ್ ಮತ್ತು ಅಮಿತ್ ಶಾ ನಡುವೆ ಯಾವುದೇ ರಹಸ್ಯ ಸಭೆ ನಡೆದಿಲ್ಲ ಎಂದಿದ್ದಾರೆ.

“ಕೆಲವು ವಿಷಯಗಳು ಸಮಯದೊಂದಿಗೆ ಸ್ಪಷ್ಟವಾಗಬೇಕು, ಇಲ್ಲದಿದ್ದರೆ ಗೊಂದಲ ಸೃಷ್ಟಿಯಾಗುತ್ತದೆ. ಅಹಮದಾಬಾದ್‌ನಲ್ಲಿ ಅಥವಾ ಎಲ್ಲಿಯೂ ಶರದ್ ಪವಾರ್ ಮತ್ತು ಅಮಿತ್ ಶಾ ನಡುವೆ ಯಾವುದೇ ರಹಸ್ಯ ಸಭೆ ನಡೆದಿಲ್ಲ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಈಗ ಈ ವದಂತಿಗಳಿಗೆ ಅಂತ್ಯ ಹಾಡಿ. ಇದರಿಂದ ಯಾವುದೇ ಉಪಯೋಗವಿಲ್ಲ” ಎಂದು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.

ಆದರೆ, ಭಾನುವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಅಮಿತ್ ಶಾ, ‘ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.

“ಶರದ್ ಪವಾರ್ ಮತ್ತು ಅಮಿತ್ ಶಾ ನಡುವಿನ ಭೇಟಿ ವದಂತಿಯ ಬಗ್ಗೆ ಆಶ್ಚರ್ಯ ಮೂಡಿಸಲು ಏನೂ ಇಲ್ಲ. ವಾಸ್ತವವಾಗಿ, ವಿರೋಧ ಪಕ್ಷದ (ಪ್ರತಿಸ್ಪರ್ಧಿ) ಪಕ್ಷಗಳ ನಾಯಕರ ನಡುವಿನ ಸಂಭಾಷಣೆ ಒಳ್ಳೆಯದು. ಅಹಮದಾಬಾದ್‌ನಲ್ಲಿ ಅವರು ನಿಜವಾಗಿಯೂ ಒಬ್ಬರನ್ನೊಬ್ಬರು ಭೇಟಿಯಾಗಿದ್ದರೇ ನಾನು ಇದನ್ನೇ ಹೇಳುತ್ತಿದ್ದೆ”ಎಂದು ಶಿವಸೇನಾ ಸಂಸದ ಹೇಳಿದ್ದಾರೆ.

ಇಬ್ಬರು ಅನುಭವಿ ನಾಯಕರು ರಹಸ್ಯವಾಗಿ ಭೇಟಿಯಾದರೂ, ಅದರ ಬಗ್ಗೆ ಸುದ್ದಿ ಹೇಗೆ ಸಾರ್ವಜನಿಕರಲ್ಲಿ ಹರಡಿತು ಎಂಬುದರ ಕುರಿತು ಸಂಜಯ್ ರಾವತ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಿರಿಯ ಅಧಿಕಾರಿಗಳ ಕಿರುಕುಳ: ಮಹಾರಾಷ್ಟ್ರ ‘ಲೇಡಿ ಸಿಗಂ’ ದೀಪಾಲಿ ಚವಾಣ್ ಆತ್ಮಹತ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights