ಮತ್ತೆ ಲಾಕ್ಡೌನ್ ಭೀತಿ: ಕಾರ್ಮಿಕರ ಮತ್ತೊಂದು ಬೃಹತ್ ವಲಸೆ ಆರಂಭ!
ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪವಾಗಿ ಹರಡುತ್ತಿದೆ. ಹಿಂದೆಂದೂ ದಾಖಲಾಗದ ಪ್ರಮಾಣದಲ್ಲಿ ದಿನನಿತ್ಯ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನಲೆಯಲ್ಲಿ ಹಲವು ರಾಜ್ಯಗಳಲ್ಲಿ ಸೆಮಿ ಲಾಕ್ಡೌನ್, ಕರ್ಫ್ಯೂಗಳು ಜಾರಿಯಾಗುತ್ತಿವೆ. ಇದರಿಂದಾಗಿ ಮತ್ತೊಂದು ಲಾಕ್ಡೌನ್ ಭೀತಿ ಎದುರಾಗಿದ್ದು, ಮತ್ತೊಮ್ಮೆ ಭಾರೀ ಪ್ರಮಾಣದ ವಲಸೆ ಆರಂಭವಾಗಿದೆ.
ಕಳೆದ ವರ್ಷ ಇಡೀ ದೇಶವನ್ನೇ ಬಿಕ್ಕಟ್ಟಿಗೆ ಸಿಲುಕಿಸಿದ ಲಾಕ್ಡೌನ್ ಒಂದೆಡೆಯಾದರೆ, ಮೊತ್ತೊಂದೆಡೆ ಅದರ ಪರಿಣಾಮದಿಂದಾಗಿ ತಮ್ಮೂರಿಗೆ ನಡೆದೇ ಹೊರಟ ವಲಸೆ ಕಾರ್ಮಿಕರು ಸಾವು-ನೋವು-ಹಸಿವು ದೇಶವನ್ನು ತಲ್ಲಣಗೊಳಿಸಿತ್ತು. ಇದೀಗ ಮತ್ತೆ ಅಂತದ್ದೇ ಲಾಕ್ಡೌನ್ ಹೇರಿಕೆಯಾಗುವ ಭಯದಿಂದ ಈಗಲೇ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳುತ್ತಿದ್ದಾರೆ.
ಪ್ರತಿದಿನ ಸಾವಿರಾರು ವಲಸೆ ಕಾರ್ಮಿಕರು ಮಹಾರಾಷ್ಟ್ರ, ಪಂಜಾಬ್, ದೆಹಲಿ ಮತ್ತು ತೆಲಂಗಾಣ ರಾಜ್ಯಗಳಿಂದ ಮತ್ತೆ ತಮ್ಮ ತವರಿಗೆ ಮರಳುತ್ತಿದ್ದಾರೆ. ಮುಂಬೈ ಮತ್ತು ಸೂರತ್ನಿಂದ ಹೊರಡುವ ಎಲ್ಲಾ ರೈಲುಗಳು ತುಂಬುತ್ತಿವೆ. ರೈಲುಗಳನ್ನು ಹಿಡಿದು ವಲಸೆ ಕಾರ್ಮಿಕರು ಈಗಲೇ ತಮ್ಮ ಊರುಗಳನ್ನು ಸೇರಿಕೊಳ್ಳುತ್ತಿದ್ದಾರೆ.
ಸೂರತ್ನಲ್ಲಿ ಕನಿಷ್ಠ ನಾಲ್ಕು ಓಡಿಯಾ ಕಾರ್ಮಿಕರು ಕೋವಿಡ್ಗೆ ಬಲಿಯಾಗಿದ್ದಾರೆ. ಕೋವಿಡ್ ಭೀತಿಯೂ ಹೊರತಾಗಿ ಇತರ ಅಂಶಗಳು ಕೂಡ ವಲಸೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ಪಂಚರಾಜ್ಯಗಳ ಚುನಾವಣೆ (ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ) ನಿರ್ಣಾಯಕವಾಗಿವೆ.
ಕರ್ನಾಟಕದಲ್ಲಿದ್ದ ಬಹುಸಂಖ್ಯೆಯ ವಲಸೆ ಕಾರ್ಮಿಕರು ಮತ ಚಲಾಯಿಸಲು ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ. ಆದರೆ, ಈಗ ನಿರ್ಬಂಧಗಳ ಭಯದಿಂದ ಅವರು ಮರಳಿ ಬರಲು ಹೆದರುತ್ತಿದ್ದಾರೆ.
ಜಾರ್ಖಂಡ್ನ ಗಿರಿಡಿಹ್ ಜಿಲ್ಲೆಯ ಗೋವಿಂದ್ ಕುಮಾರ್ ಎಂಬುವವರು ಸುಮಾರು ಐದು ವರ್ಷಗಳಿಂದ ಮುಂಬೈನ ಕಾಫಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಇದೀಗ ಮುಂಬೈನಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿರುವುದರಿಂದ ಲಾಕ್ಡೌನ್ನ ಭೀತಿಯೂ ಶುರುವಾಗಿದೆ. ಹೀಗಾಗಿ, ಆತನ ಮಾಲೀಕ ಆತನಿಗೆ ತನ್ನ ಸ್ವಂತ ಊರಿಗೆ ತೆರಳುವಂತೆ ಸೂಚಿಸಿದ್ದು, ಪರಿಸ್ಥಿತಿ ಸರಾಗವಾದ ಬಳಿಕ ಕರೆಸಿಕೊಳ್ಳುವುದಾಗಿ ಹೇಳಿದ್ದಾರೆ. ಹಾಗಾಗಿ ತಾನು ತನ್ನ ರಾಜ್ಯಕ್ಕೆ ಮರಳುತ್ತಿರುವುದಾಗಿ ಗೋವಿಂದ್ ಹೇಳಿದ್ದಾರೆ.
ರಾಂಚಿ ಬಳಿಯ ಹಜಾರಿಬಾಗ್ ನಿವಾಸಿ ಅನಿಲ್ ಕುಮಾರ್ ಮಹ್ತೋ ಕೂಡ ಬೆಂಗಳೂರಿನಿಂದ ರಾಂಚಿಗೆ ತೆರಳಿದ್ದಾರೆ. ಆತ ಬೆಂಗಳೂರಿನ ಪೀಠೋಪಕರಣ ಅಂಗಡಿಯಲ್ಲಿ ಕೆಲಸ ಮಾಡುವ ಬಡಗಿ, ಬೆಂಗಳೂರಿನಲ್ಲಿಯೂ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಆತನ ಉದ್ಯೋಗದಾತ ಆತನನ್ನು ತನ್ನ ಊರಿಗೆ ಮರಳಿ ಕಳಿಸಿದ್ದಾರೆ.
“ತಿಂಗಳುಗಟ್ಟಲೆ ಮನೆಯಲ್ಲಿ ಕುಳಿತ ನಂತರ ದೀಪಾವಳಿಯ ಸಮಯದಲ್ಲಿ ನಾನು ಕೆಲಸಕ್ಕೆ ಮರಳಿದೆ. ಈಗ ನನ್ನ ಕೆಲಸ ಮತ್ತೆ ಅನಿಶ್ಚಿತವಾಗಿದೆ” ಎಂದು ಮಹತೋ ಹೇಳಿದರು.
ಕರ್ನಾಟಕದ ಕೆಲವರು ಸುಗ್ಗಿಯ ಸಮಯವಾಗಿದ್ದರಿಂದ ತಮ್ಮೂರಿಗೆ ತೆರಳಿದ್ದಾರೆ. ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಮತ್ತು ಒಡಿಶಾದಂತಹ ರಾಜ್ಯಗಳ ಜನರು ಮುಂಬರುವ ಹೊಸ ವರ್ಷದ ಹಬ್ಬಗಳಿಗಾಗಿ ತಮ್ಮ ಸ್ಥಳೀಯ ಸ್ಥಳಗಳಿಗೆ ತೆರಳುತ್ತಿದ್ದಾರೆ. ಅಂದಾಜು ಎಂಟು ಲಕ್ಷ ಜನರು ಈಗಾಗಲೇ ಮರಳಿ ಹೋಗಿದ್ದಾರೆ ಮತ್ತು ಇನ್ನೂ ಅನೇಕರು ವಲಸೆಯನ್ನು ಆರಂಭಿಸುವ ಸಾಧ್ಯತೆ ಇದೆ.
“ಹೆಚ್ಚಿನ ಕಾರ್ಮಿಕರು ಏಪ್ರಿಲ್ 13 ಯುಗಾದಿ ಹಬ್ಬದ ನಂತರ ಹಿಂತಿರುಗಲು ಬಯಸುತ್ತಾರೆ. ಆದರೆ ಕರ್ನಾಟಕದಲ್ಲಿ ಬದಲಾಗುತ್ತಿರುವ ಕೋವಿಡ್ ಸನ್ನಿವೇಶದಿಂದಾಗಿ ಇಲ್ಲಿ ಯಾವ ರೀತಿಯ ನಿಯಮಗಳು ಜಾರಿಗೆ ಬರುತ್ತವೆ ಎಂಬುದರ ಬಗ್ಗೆ ಖಾತ್ರಿ ಇಲ್ಲ. ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ನಿರ್ಧರಿಸಿ ಹೊರಟಿದ್ದಾರೆ.
ಇದನ್ನೂ ಓದಿ: PL 2021: ಇಬ್ಬರು ಕ್ರಿಕೆಟಿಗರಿಗೆ ಕೊರೊನಾ; ಟೂರ್ನಿಗೆ ಯಾವುದೇ ತೊಡಕಿಲ್ಲ: ಸೌರವ್ ಗಂಗೂಲಿ

