ಕೊರೊನಾ ನಿರ್ವಹಣೆಗೆ ಮನಮೋಹನ್‌ ಸಿಂಗ್‌ ಸಲಹೆ; ಮಾಜಿ ಪ್ರಧಾನಿ ಬಗ್ಗೆ ವ್ಯಂಗ್ಯವಾಡಿದ ಕೇಂದ್ರ ಸರ್ಕಾರ!

ಕೊರೊನಾ ಸೋಂಕಿನ ವಿರುದ್ದ ಹೋರಾಟ ನಡೆಸಲು ೦೫ ಅಂಶಗಳ ಸಲಹೆ ನೀಡಿ ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಪತ್ರವೊಂದನ್ನು ಬರೆದಿದ್ದರು. ಅವರ ಪತ್ರಕ್ಕೆ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಸಲಹೆಯನ್ನು ಕಾಂಗ್ರೆಸ್‌ನ ನಾಯಕರು ಅನುಸರಿಸಿದರೆ ಇತಿಹಾಸವು ನಿಮಗೆ ಋಣಿ ಆಗಿರುತ್ತದೆ ಎಂದು ಟೀಕಿಸಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಅವರಿಗೆ ಎರಡು ಪುಟಗಳ ಪತ್ರವನ್ನು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಹರ್ಷವರ್ಧನ್‌, “ಇಂತಹ ಅಸಾಧಾರಣ ಕಾಲದಲ್ಲಿ ನೀವು ಹೇಳಿರುವ ರಚನಾತ್ಮಕ ಸಹಕಾರ ಮತ್ತು ಮೌಲ್ಯಯುತ ಸಲಹೆಯನ್ನು ನಿಮ್ಮ ಪಕ್ಷವಾದ ಕಾಂಗ್ರೆಸ್‌ನ ನಾಯಕರು ಅನುಸರಿಸಿದರೆ ಇತಿಹಾಸವು ನಿಮಗೆ ಋಣಿಯಾಗಿರುತ್ತದೆ” ಎಂದು ಬರೆದಿದ್ದಾರೆ.

ಪತ್ರದಲ್ಲಿ ಬಗ್ಗೆ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಸೂಚಿಸಿ ಅವರು ವ್ಯಂಗ್ಯವಾಡಿದ್ದಾರೆ. ಅಲ್ಲದೆ ಮನಮೋಹನ್ ಸಿಂಗ್ ಅವರು ಲಸಿಕೆ ಕಂಡು ಹಿಡಿದ ವಿಜ್ಞಾನಿಗಳು ಮತ್ತು ತಯಾರಕರಿಗೆ ಕೃತಜ್ಞತೆಯನ್ನು ಹೇಳದೆ ಇರುವುದಕ್ಕೆ ಪತ್ರದಲ್ಲಿ ಅಘಾತ ವ್ಯಕ್ತಪಡಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ಪತ್ರಕ್ಕೆ ಆರೋಗ್ಯ ಸಚಿವ ಹರ್ಷ್‌ವರ್ಧನ್‌ ನೀಡಿರುವ ವ್ಯಂಗ್ಯ ಪ್ರತಿಕ್ರಿಯೆಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/drharshvardhan/status/1384028878998425607?s=20

ಗೌರವ್ ದೋಗ್ರ ಅವರು, “ನಾಚಿಕೆಗೇಡು ಮತ್ತು ಭಾವಶೂನ್ಯ ಪ್ರತಿಕ್ರಿಯೆ. ಡಾ. ಸಿಂಗ್ ನೀಡಿದ ಬೌದ್ಧಿಕ ಸಲಹೆಯನ್ನು ವಿರೋಧಿಸುವುದನ್ನು ಬಿಟ್ಟು, ಕೊರೊನಾ ಭೀತಿಯಿಂದ ಹೊರಬರುವ ಒಂದು ತಂತ್ರವನ್ನು ಮಾಡಲು ಸಾಧ್ಯವಾದರೆ ಇತಿಹಾಸವು ನಿಮಗೆ ಋಣಿಯಾಗಿರುತ್ತದೆ. ನೀವು ನಿಮ್ಮ ಅರೆಕಾಲಿಕ ವೃತ್ತಿಯಿಂದ ಹೊರಬಂದು ಆರೋಗ್ಯ ಸಚಿವರಂತೆ ವರ್ತಿಸಬಹುದೆಂದು ಹಾರೈಸುತ್ತೇನೆ” ಎಂದು ಬರೆದಿದ್ದಾರೆ.

ಅಭಿಜಿತ್ ಅವರು, “ನೀವು ಯಾರು? ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಸಾಮರ್ಥ್ಯ ಇಲ್ಲ ಎಂದು ನಮಗೆ ತಿಳಿದಿದೆ. ನೀವು ನಿಮ್ಮ ಕೆಲಸದ ಬಗ್ಗೆ ಗಮನಹರಿಸಿ ಸರ್. ಟ್ರೋಲ್‌ ಮಾಡುವುದನ್ನು ಸರ್‌ ಗೋಯಲ್ ಮತ್ತು ಮೇಡಮ್ ಇರಾನಿ ನೋಡಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಶಿವಂ ಅವರು, “ಈ ಸರ್ಕಾರದ ಸಮಸ್ಯೆ ದುರಹಂಕಾರ ಮತ್ತು ಪ್ರತಿ ಟೀಕೆಗಳನ್ನು ಎದುರಿಸುವ ಮನೋಭಾವ ಹಾಗೂ ವಿಮರ್ಶಕನನ್ನು ಅಪಖ್ಯಾತಿಗೊಳಿಸುವ ಮನೋಭಾವ. ಆದ್ದರಿಂದಲೇ ಆರ್ಥಿಕ ಮತ್ತು ಆರೋಗ್ಯದ ವಿಷಯಗಳಲ್ಲಿ ದೇಶವು ಇಂತಹ ವಿನಾಶಕಾರಿ ಸಮಯವನ್ನು ಎದುರಿಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ನರೇಂದ್ರ ಮೋದಿ ಯಾವುದೇ ಹೊಣೆಗಾರಿಕೆ ಇಲ್ಲದೆ ಅಧಿಕಾರವನ್ನು ಬಯಸುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Also: ಕೊರೊನಾ ಉಲ್ಬಣಕ್ಕೆ ಮೋದಿಯೇ ಕಾರಣ; ಮೋದಿ ರಾಜೀನಾಮೆಗೆ ಆಗ್ರಹಿಸಿ ಟ್ವಿಟರ್‌ ಟ್ರೆಂಡಿಂಗ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights