ದೆಹಲಿ ಗಡಿ: ಕೃಷಿ ಕಾಯ್ದೆಗಳ ವಿರುದ್ಧ ರೈತ ಹೋರಾಟಕ್ಕೆ 150 ದಿನ!

ಕೇಂದ್ರ ಸರ್ಕಾರದ ಹೊಸ ಮೂರು ಕೃಷಿ ಕಾನೂನುಗಳ ವಿರುದ್ದ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಐತಿಹಾಸಿಕ ಹೋರಾಟ 150 ದಿನಗಳನ್ನು ಪೂರೈಸಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳು ರದ್ದಾಗಬೇಕು, ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧ ಗೊಳಿಸಬೇಕು ಪಟ್ಟು ಹಿಡಿದಿರುವ ರೈತರು ತಮ್ಮ ಶಾಂತಿಯುತ ಹೋರಾಟವನ್ನು ಮುಂದುವರೆಸಿದ್ದಾರೆ.

`ನಮ್ಮ ಪ್ರತಿಭಟನೆಯು ನ್ಯಾಯಯುತವಾದ ಕಾರಣಕ್ಕೆ ನಡೆಯುತ್ತಿದ್ದು, ಇದು ನಮ್ಮ ಏಕತೆ ಮತ್ತು ಬದ್ಧತೆಗೆ ಉದಾಹರಣೆಯಾಗಿದೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಹಲವಾರು ಕುತಂತ್ರಗಳನ್ನು ಬಳಸಲು ಪ್ರಯತ್ನಿಸಿತು. ಆದರೆ ಕಳೆದ 150 ದಿನಗಳಿಂದ ರೈತರು ಪಟ್ಟುಬಿಡದೇ ಹೋರಾಟ ನಡೆಸುತ್ತಿದ್ದಾರೆ’ ಎಂದು ಬಿಕೆಯು (ರಾಜೇವಾಲ್) ಸಂಘಟನೆಯ ನಾಯಕರಾದ ಪರ್ಗಾತ್ ಸಿಂಗ್ ತಿಳಿಸಿದರು.

ಇದನ್ನೂ ಓದಿ: ರಸಗೊಬ್ಬರ ಬೆಲೆ ಏರಿಕೆ: ರೈತರ ಬೇಡಿಕೆ – ಸರ್ಕಾರದ ಧೋರಣೆ!

ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರಾದ ಡಾ. ದರ್ಶನ್ ಪಾಲ್ ಮಾತನಾಡಿ, ‘ಐದು ತಿಂಗಳ ಕಾಲ ಶಾಂತಿಯುತವಾಗಿ ಪ್ರತಿಭಟಿಸುವ ಮೂಲಕ ರೈತರು ನೈತಿಕವಾಗಿ ಯುದ್ಧವನ್ನು ಗೆದ್ದಿದ್ದಾರೆ. ಕೇಂದ್ರ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿ, ಕನಿಷ್ಠ ಬೆಂಬಲ ಬೆಲೆ ಕಾನೂನಿಗೆ ಖಾತರಿ ನೀಡಿದ ನಂತರ ನಮ್ಮ ಗೆಲುವು ಪೂರ್ಣಗೊಳ್ಳುತ್ತದೆ’ ಎಂದರು.

`ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ತುರ್ತು ಸೇವೆಗಳಿಗಾಗಿ ರೈತರು ರಸ್ತೆಯ ಒಂದು ಬದಿಯನ್ನು ಸ್ವಚ್ಛಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಆದ್ರೆ ಗಡಿಗಳಲ್ಲಿ ಪೊಲೀಸರು ಹಾಕಿರುವ ಬ್ಯಾರಿಕೇಟ್ಗಳನ್ನು ಇನ್ನು ತೆಗೆದುಹಾಕಿಲ್ಲ’ ಎಂದು ಮೋರ್ಚಾದ ಮುಖಂಡರಾದ ಬಲ್ಬೀರ್ ಸಿಂಗ್ ರಾಜೇವಾಲ್ ತಿಳಿಸಿದರು.

ಈ ನಡುವೆ, ಕೆಎಂಪಿ ಎಕ್ಸ್ಪ್ರೆಸ್ವೇಯ ಟೋಲ್ ಪ್ಲಾಜಾಗಳನ್ನು ತೆರೆಯಲು ಭಾನುವಾರ ಅಧಿಕಾರಿಗಳು ಪ್ರಯತ್ನಿಸಿದ್ದಾರೆ.

ಬಿಕೆಯು ಮುಖಂಡ ಗುರ್ನಾಮ್ ಸಿಂಗ್ ಚಾದುನಿ ಇದಕ್ಕೆ ಪ್ರತಿಕ್ರಿಯಿಸಿ, `ಪ್ರತಿಭಟನೆ ಮುಗಿಯುವವರೆಗೆ ರೈತರು ಯಾವುದೇ ಟೋಲ್ ಶುಲ್ಕ ಕಟ್ಟುವುದಿಲ್ಲ. ರಾಜ್ಯ ಸರ್ಕಾರ ಮತ್ತು ಟೋಲ್ ನಿರ್ವಾಹಕರು ಶುಲ್ಕ ವಿಧಿಸಲು ಪ್ರಯತ್ನಿಸಿದರೆ ಅವರು ರೈತರ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಇಡೀ ದೇಶದ ರೈತರು ಬೆಂಬಲಿಸುತ್ತಿರುವ ಈ ಹೋರಾಟಕ್ಕೆ ವಿಶ್ವದ ನಾನಾ ಭಾಗಗಳ ಹೆಸರಾಂತ ವ್ಯಕ್ತಿಗಳು ಬೆಂಬಲ ಸೂಚಿಸಿದ್ದಾರೆ. ನೂರಾರು ಸಂಘಟನೆಗಳು ಒಗ್ಗಟ್ಟಾಗಿ ರೈತರ ಉತ್ತಮ ಭವಿಷ್ಯಕ್ಕಾಗಿ, ಕೃಷಿ ಉಳಿವಿಗಾಗಿ ಪಟ್ಟುಬಿಡದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ದೇಶದೆಲ್ಲೆಡೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವಾಗಲೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಿರುವ ರೈತರು ಪ್ರತಿಭಟನಾ ಗಡಿಗಳಲ್ಲಿ ಕೋವಿಡ್ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. ಮಾಸ್ಕ್ ಬಳಕೆ, ಕೋವಿಡ್ ಲಸಿಕಾ ಶಿಬಿರಗಳು, ಕೋವಿಡ್ ಕುರಿತು ಮುಂಜಾಗೃತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿರತರಾಗಿದ್ದಾರೆ. ಜೊತೆಗೆ ಕೋವಿಡ್ ಲಾಕ್ಡೌನ್ ಕಾರಣಕ್ಕೆ ಕೆಲಸವಿಲ್ಲದೆ ತಮ್ಮ ಹಳ್ಳಿಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರನ್ನು ಪ್ರತಿಭಟನಾ ಸ್ಥಳಗಳಿಗೆ ಬನ್ನಿ ಎನ್ನುತ್ತಿರುವ ರೈತರು ಕಾರ್ಮಿಕರಿಗೆ ಅಗತ್ಯವಿರುವ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಿದ್ದಾರೆ.

ಇದನ್ನೂ ಓದಿ: ರೈತರ ಮೇಲೆ ಮತ್ತೊಂದು ಆಕ್ರಮಣ: 2022 ನಂತರ ರಸಗೊಬ್ಬರ ಸಬ್ಸಿಡಿ ರದ್ದು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights