ರಸಗೊಬ್ಬರ ಬೆಲೆ ಏರಿಕೆ: ರೈತರ ಬೇಡಿಕೆ – ಸರ್ಕಾರದ ಧೋರಣೆ!
ರೈತರ ಬೆನ್ನ ಮೇಲೆ ಒಂದಾದ ನಂತರ ಒಂದರಂತೆ ಬರೆ ಎಳೆಯುತ್ತಿರುವ ಕೇಂದ್ರ ಸರ್ಕಾರ, ರಸಗೊಬ್ಬರ ಗಳ ಮೇಲಿನ ಬೆಲೆಯನ್ನೂ ಏರಿಕೆ ಮಾಡಿ ಆದೇಶ ಹೊರಡಿಸಿತ್ತು. ಆದರೆ, ದೇಶಾದ್ಯಂತ ಭಾರೀ ಪ್ರಮಾಣದ ವಿರೋಧ ವ್ಯಕ್ತವಾದ ಬೆನ್ನಲ್ಲೇ ತನ್ನ ಆದೇಶವನ್ನು ಹಿಂಪಡೆದುಕೊಂಡಿದ್ದು, ಮೊದಲಿದ್ದ ಬೆಲೆಯನ್ನು ರಸಗೊಬ್ಬರಗಳನ್ನು ವಿತರಣೆ ಮಾಡುವುದಾಗಿ ಹೇಳಿದೆ.
ಖಾಸಗಿ ಕಂಪನಿಗಳು ಕಳೆದ ತಿಂಗಳೇ ಗೊಬ್ಬರ ದರ ಹೆಚ್ಚಿಸಿದ್ದವು. ಸಿಎಫ್‌ಸಿಎಲ್, ಐಐಪಿಎಲ್ ಸೇರಿದಂತೆ ಹಲವು ಕಂಪನಿಗಳು ವಿವಿಧ ರಸಗೊಬ್ಬರದ ದರ ಹೆಚ್ಚಿಸಿದ್ದವು. ಇಫ್ಕೋ ಕೂಡ ದರ ಏರಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು.
ಶನಿವಾರ ಸ್ಪಷ್ಟಪಡನೆ ನೀಡಿದ ಇಫ್ಕೊ, ಈಗ 11. 6 ಲಕ್ಷ ಟನ್‌ನಷ್ಟು ಸಂಯುಕ್ತ ಗೊಬ್ಬರವನ್ನು ಹಳೆಯ ದರದಂತೆಯೇ ಮಾರಾಟ ಮಾಡುವುದಾಗಿ ತಿಳಿಸಿದೆ. ಏಪ್ರಿಲ್‌ನಲ್ಲಿ ತಯಾರಿಸಲಾದ ಡಿಎಪಿ ಗೊಬ್ಬರಗಳ ಚೀಲದ ಮೇಲೆ ₹ 1,700 ಎಂದು ಮುದ್ರಿಸಲಾಗಿದೆ. ಇವುಗಳನ್ನು ಸಂಗ್ರಹದ ಉದ್ದೇಶದಿಂದ ಮಾತ್ರವೇ ಗೋದಾಮುಗಳಿಗೆ ಸಾಗಿಸಲಾಗಿದೆ. ಅವುಗಳನ್ನು ರೈತರಿಗೆ ಮಾರಾಟ ಮಾಡುವುದಿಲ್ಲ’ ಎಂದು ಇಫ್ಕೊ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.
ಈಗಾಗಲೇ ಗೊಬ್ಬರ ದೇಶದಾದ್ಯಂತ ಸರಬರಾಜಾಗಿರುವ ಕಾರಣದಿಂದ ಹಳೆಯ ದರದಲ್ಲೇ ಮಾರಾಟ ಮಾಡುವುದಾಗಿ ಇಫ್ಕೊ ಹೇಳಿರಬಹುದು. ಹಿಂಗಾರಿನ ಹೊತ್ತಿಗೆ ಸರಬರಾಜಾಗುವ ಹೊಸ ಗೊಬ್ಬರ ದರ ಅನ್ವಯವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕೇಂದ್ರದ ರಸಗೊಬ್ಬರ ಸಚಿವರಾದ ಡಿ ವಿ ಸದಾನಂದಗೌಡ ಇಫ್ಕೊ ಜೊತೆ ಮಾತನಾಡಿ, ಖಾಸಗಿ ಕಂಪನಿಗಳೂ ಹಳೆಯ ದರದಲ್ಲೇ ಮಾರಾಟ ಮಾಡುವಂತೆ ಮನವೊಲಿಸುವಂತೆ ಸೂಚಿಸಿರುವುದಾಗಿ ಹೇಳಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಪೆಟ್ರೋಲ್, ಡೀಸೆಲ್, ಗ್ಯಾಸ್, ದಿನಸಿ ವಸ್ತುಗಳ ದರ ಏರಿಕೆಯ ಬೆನ್ನಲ್ಲೇ, ಗೊಬ್ಬರ ದರವನ್ನು ಶೇ. 58ರಷ್ಟವರೆಗೆ ಹೆಚ್ಚಿಸಿದ್ದು, ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿ ಎಂದು ಕೇಂದ್ರದ ಕೃಷಿ ಕಾಯ್ದೆ ವಿರೋಧಿ ಹೋರಾಟ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿಕೆ ನೀಡಿದೆ.
ಇಫ್ಕೊ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೊಬ್ಬರ ತಯಾರಿಸುವ ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗೊಬ್ಬರ ದರ ಹೆಚ್ಚಿಸಲಾಗಿದೆ ಎಂದು ಸ್ಪಷ್ಟ ನೀಡುವ ಪ್ರಯತ್ನ ಮಾಡಿದ್ದಾರೆ.
ಇದು ಅನಿರೀಕ್ಷಿತವಲ್ಲ. ಕಳೆದ ವರ್ಷ ಉದ್ಯಮದ ತಜ್ಞರು, ವಿಶ್ಲೇಷಕರು ಗೊಬ್ಬರ ದರ ಏರಿಕೆಯನ್ನು ನಿರೀಕ್ಷಿಸಿದ್ದರು. ಆದರೆ ಅವರ ಲೆಕ್ಕಾಚಾರದಂತೆ ಶೇ. 5ರಿಂದ 26 ರಷ್ಟು ಏರಿಕೆಯನ್ನು ನಿರೀಕ್ಷಿಸಲಾಗಿತ್ತು. ಅಷ್ಟೇ ಅಲ್ಲ, ಕಳೆದ ವರ್ಷಾಂತ್ಯದಲ್ಲಿ ವರ್ಲ್ಡ್‌ಬ್ಯಾಂಕ್ ಕೂಡ ಶೇ. 3ರಷ್ಟು ಗೊಬ್ಬರ ದರ ಏರಿಕೆಯಾಗುವ ಸಾಧ್ಯತೆಯನ್ನು ಹೇಳಿತ್ತು.
ಅವಧಿಗೆ ಮುನ್ನವೇ ಬಂದ ಮಾನ್ಸೂನ್ ಕಾರಣದಿಂದ ಭಾರತದಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಬೇಡಿಕೆ ಹೆಚ್ಚಿಗೆ ಕಾರಣವಾಗಿದೆ ಎಂದು ಈ ಬರಹ ವಿಶ್ಲೇಷಿಸಿತ್ತು. ಒಂದೆಡೆ ಸಬ್ಸಿಡಿ ಸರಿಯಾಗದೆ ಇರುವ ಹಾಗೂ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ ಸಂಪೂರ್ಣ ಹಾದಿ ತಪ್ಪಿರುವ ಹೊತ್ತಲ್ಲಿ ರಸಗೊಬ್ಬರದ ಬೆಲೆ ಏರಿಕೆ ರೈತನ ಪಾಲಿಗೆ ಬರಸಿಡಿಲೇ ಸರಿ.
ದೇಶದಲ್ಲಿ ಗೊಬ್ಬರ ಬೇಡಿಕೆ-ಪೂರೈಕೆ ಹೇಗಿದೆ?
ದೇಶದಲ್ಲಿ ಯೂರಿಯಾ ಗೊಬ್ಬರ ಉತ್ಪಾದಿಸುವ 39, ಡಿಎಪಿ ಗೊಬ್ಬರ ಉತ್ಪಾದಿಸುವ 18, ಸಾರಜನಕ ಗೊಬ್ಬರ ಉತ್ಪಾದಿಸುವ 7 ಹಾಗೂ ಅಮೋನಿಯಂ ಸಲ್ಫೇಟ್ ಗೊಬ್ಬರ ಉತ್ಪಾದಿಸುವ 9 ಘಟನೆಗಳು ಅಸ್ತಿತ್ವದಲ್ಲಿವೆ.
2016ರಿಂದ 2020ರವರೆಗಿನ ಉತ್ಪಾದನೆಯನ್ನು ಗಮನಿಸಿದರೆ, ಬೇಡಿಕೆಗೂ ಉತ್ಪಾದನೆಗೂ ನಡುವೆ ಸುಮಾರು 150ರಿಂದ 200 ಲಕ್ಷ ಮೆಟ್ರಿಕ್ ಟನ್‌ನಷ್ಟು ಅಂತರವಿದೆ. ಅಂದರೆ 2016-17ರಲ್ಲಿ 614 ಲಕ್ಷ ಮೆಟ್ರಿನ್ ಬೇಡಿಕೆಯಿದ್ದರೆ, ಪೂರೈಕೆಯಾಗಿದ್ದು 414 ಲಕ್ಷ ಮೆಟ್ರಿಕ್ ಟನ್, 2017-18ರಲ್ಲಿ ಬೇಡಿಕೆ ಇದ್ದಿದ್ದು 598.95 ಲಕ್ಷ ಮೆಟ್ರಿಕ್ ಟನ್ ಆದರೆ ಪೂರೈಕೆಯಾಗಿದ್ದು, 413.61 ಲಕ್ಷ ಮೆಟ್ರಿನ್, 2018-19ರ ಸಾಲಿನಲ್ಲಿ 603 ಲಕ್ಷ ಮೆಟ್ರಿಕ್ ಟನ್ ಇದ್ದಾಗ, ಪೂರೈಕೆಯಾಗಿದ್ದು, 414.85 ಲಕ್ಷ ಮೆಟ್ರಿಕ್ ಟನ್ ಮಾತ್ರ. ಇನ್ನು 2019-20ರ ಅಕ್ಟೋಬರ್ ವರೆಗೆ 640 ಲಕ್ಷ ಮೆಟ್ರಿಕ್ ಬೇಡಿಕೆ ಇದ್ದರೂ, ಪೂರೈಕೆಯಾಗಿದ್ದು ಕೇವಲ 245 ಮೆಟ್ರಿಕ್ ಟನ್ ಮಾತ್ರ.
ಇದು ಬರೀ ಹೆಚ್ಚಿದ ದರವಲ್ಲ, ರೈತನ ಮೇಲೆ ಬರೆ
ಸ್ವಾತಂತ್ರ್ಯಾನಂತರ ಗೊಬ್ಬರದ ಬೆಲೆ ನಿಗದಿ ಮಾಡುತ್ತಾ ಬಂದಿರುವುದು ಸರ್ಕಾರವೆ. 1957ರಲ್ಲಿ ಗೊಬ್ಬರ ನಿಯಂತ್ರಣ ಆದೇಶವೊಂದು ಜಾರಿಗೆ ಬಂದು,, ಸರ್ಕಾರ ಬೆಲೆ ನಿಗದಿ ಮಾಡುವ ನಿಯಮವನ್ನು ಜಾರಿಗೆ ತಂದಿದತು. ಇದು ದೇಶಿ ಮತ್ತು ವಿದೇಶಿ ದರಗಳನ್ನು ನಿಗದಿ ಮಾಡುತ್ತಿತ್ತು. ಆಮದು ಮಾಡಿಕೊಂಡ ಗೊಬ್ಬರ, ದೇಶೀಯ ಉತ್ಪಾದನೆ ಎಲ್ಲವೂ ಆಧರಿಸಿ ದರವನ್ನು ನಿಗದಿ ಪಡಿಸಲಾಗುತ್ತಿತ್ತು. ಇದುಯಾವುದೇ ಲಾಭ ನಷ್ಟಗಳಿಗೆ ಅವಕಾಶವಿಲ್ಲದ ದರವನ್ನು ನಿಗದಿಪಡಿಸುವ ಮೂಲಕ ಬಜೆಟ್ ಮೇಲೆ ಯಾವುದೇ ಹೊರೆಯಾಗದಂತೆ ಎಚ್ಚರವಹಿಸಲಾಗುತ್ತಿತ್ತು.
ಆದರೆ ಐವತ್ತರ ದಶಕದಲ್ಲಿ ಗೊಬ್ಬರ ಬಳಕೆ ಕಡಿಮೆ ಇತ್ತು. ಎಪ್ಪತ್ತರ ದಶಕದಲ್ಲಿ ಹೊಸ ನೀತಿಗಳು ಮತ್ತು ತೈಲ ದರ ಏರಿಕೆಯಿಂದಾಗಿ ಚಿತ್ರಣವೇ ಬದಲಾಯಿತು. ಹಸಿರ ಕ್ರಾಂತಿಯ ಭಾಗವಾಗಿ 1977ರಲ್ಲಿ ಗೊಬ್ಬರ ಉತ್ಪಾದನೆ ಮತ್ತು ವಿತರಣೆ ಪ್ರೋತ್ಸಾಹಿಸಲಾಯಿತು ಹೊಸ ನೀತಿಯನ್ನೇ ಜಾರಿಗೆ ತರಲಾಯಿತು. ಅದೇ ಧಾರಣಾ ಬೆಲೆ ಯೋಜನೆ (ಆರ್ಪಿಎಸ್). ಈ ಯೋಜನೆಯಂತೆ ಕಾರ್ಖಾನೆಯಿಂದ ಹೊರಬರುವ ರೈತನಿಗೆ ಮಾರಾಟವಾಗುವ ನಡುವಿನ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಹಾಗಾಗಿ ರೈತನ ಮೇಲೆ ಬೀಳುವ ಹೆಚ್ಚುವರಿ ಭಾರ ತಪ್ಪುತ್ತಿತ್ತು.
ದೇಶದಲ್ಲಿ ಯೂರಿಯಾ ನಂತರ ಅತಿಹೆಚ್ಚು ಬಳಕೆಯಾಗುವ ಡಿಎಪಿ ರಸಗೊಬ್ಬರ. ಖಾಸಗಿ ಕಂಪನಿಗಳು ಮಾರ್ಚ್ ತಿಂಗಳಿನಲ್ಲೇ ಡಿಎಪಿ ಗೊಬ್ಬರದ ಬೆಲೆ ಏರಿಸಿದ್ದವು. ಸಿಎಫ್‌ಸಿಎಲ್ ಕಂಪನಿಯು 50 ಕೆ.ಜಿ. ಡಿಎಪಿ ಗೊಬ್ಬರದ ಚೀಲದ ಬೆಲೆಯನ್ನು ರೂ. 1,600ಕ್ಕೆ, ಐಐಪಿಎಲ್ ಡಿಎಪಿ ಬೆಲೆಯನ್ನು ರೂ. 1,200ರಿಂದ ರೂ. 1,495ಕ್ಕೆ ಏರಿಕೆ ಮಾಡಿದ್ದವು. ಕ್ರಿಬ್ಕೊ, ಎಂಸಿಎಫ್‌ಎಲ್, ಜುವಾರಿ ಆಗ್ರೊ, ಪ್ರದೀಪ್ ಫಾಸ್ಪಟ್ಸ್ ಕಂಪನಿಗಳು ಡಿಎಪಿ ರಸಗೊಬ್ಬರದ ಬೆಲೆಯನ್ನು ರೂ. 1,700ಕ್ಕೆ ಏರಿಕೆ ಮಾಡಿದ್ದವು. ಇದರ ಬೆನ್ನಲ್ಲೇ ಇಫ್ಕೊ ಸಹ 50 ಕೆ.ಜಿ ಡಿಎಪಿ ರಸಗೊಬ್ಬರದ ಬೆಲೆಯನ್ನು ರೂ. 1,200ರಿಂದ ರೂ. 1,700ಕ್ಕೆ ಏರಿಕೆ ಮಾಡಿ ಪ್ರಕಟಣೆ ಹೊರಡಿಸಿದೆ. ನೂತನ ಬೆಲೆಯನ್ನು ಮುದ್ರಿಸಿರುವ ರಸಗೊಬ್ಬರದ ಚೀಲಗಳು ಈಗಾಗಲೇ ಗೋದಾಮುಗಳಿಗೆ ಪೂರೈಕೆಯಾಗಿವೆ.
ಗೊಬ್ಬರ ಬೆಲೆ ನಿಗದಿ ಪಡಿಸುವ ಗೊಂದಲ
ರಸಗೊಬ್ಬರವನ್ನು ಅದರ ಮಾರಾಟ, ಬೆಲೆ ಮತ್ತು ಗುಣಮಟ್ಟವನ್ನು ನಿಯಂತ್ರಿಸಲು 1957 ರಲ್ಲಿ ರಸಗೊಬ್ಬರ ನಿಯಂತ್ರಣ ಆದೇಶ (ಎಫ್‌ಸಿಒ) ಅಡಿಯಲ್ಲಿ ತರಲಾಯಿತು. ಆದರೆ ಬೆಲೆ ನಿಗದಿ ಪಡಿಸುವ ನೀತಿ ಮಾತ್ರ ಸ್ಪಷ್ಟವಾಗದೆ ಉಳಿಯಿತು. ಇದರ ಸಲುವಾಗಿ 70ರ ದಶಕದ ನಂತರ ಹಲವು ಸಮಿತಿಗಳು ರಚನೆಯಾದವು.
1977ರಲ್ಲಿ ಮರಾಠೆ ಸಮಿತಿ, 1992ರಲ್ಲಿ ಜಂಟಿ ಸಂಸದೀಯ ಸಮಿತಿ, 1998ರಲ್ಲಿ ಬೆಲೆ ನೀತಿ ಪರಿಶೀಲನೆಗಾಗಿ ಹನುಮಂತರಾವ್ ಸಮಿತಿ, 2000ದಲ್ಲಿ ವೆಚ್ಚ ಸುಧಾರಣಾ ಸಮಿತಿ, 2001ರಲ್ಲಿ ರಸಗೊಬ್ಬರಗಳ ತಯಾರಿಕಾ ವೆಚ್ಚ ಅಧ್ಯಯನ ಸಮಿತಿ, 2005 ಫಾಸ್ಫೆಟಿಕ್ ರಸಗೊಬ್ಬರಗಳ ನೀತಿ ರಚನೆಗೆ ತಜ್ಞರ ಸಮಿತಿ… ಹೀಗೆ ಹತ್ತಾರು ಸಮಿತಿಗಳು ರಚನೆಯಾಗಿವೆ. ಅವು ಕಾಲಕಾಲಕ್ಕೆ ವರದಿಗಳನ್ನೂ ನೀಡುತ್ತಾ ಬಂದಿವೆ.
ಮರಾಠೆ ಸಮಿತಿ ಶಿಫಾರಸಿನಿಂದಾಗಿ ಧಾರಣಾ ಬೆಲೆ ಯೋಜನೆ (ಆರ್ ಪಿ ಎಸ್) ಕೂಡ ಜಾರಿಗೆ ಬಂದಿತು. ಇದರಿಂದ ದೇಶೀಯ ಉತ್ಪಾದನೆ ಮತ್ತು ರಸಗೊಬ್ಬರಗಳ ಬಳಕೆಯಲ್ಲಿ ಅದ್ಭುತ ಹೆಚ್ಚಳಕ್ಕೆ ಕಾರಣವಾಯಿತು. ಆದರೆ ಚಿಲ್ಲರೆ ಬೆಲೆಯಲ್ಲಿ ಅನುಗುಣವಾದ ಏರಿಕೆಯಿಲ್ಲದೆ ವೆಚ್ಚದ ಏರಿಕೆಯಿಂದಾಗಿ ಸಬ್ಸಿಡಿ ಬಿಲ್ ಗಮನಾರ್ಹವಾಗಿ ಹೆಚ್ಚುತ್ತಲೇ ಇತ್ತು.
1991ರಲ್ಲಿ ರಚನೆಯಾಗಿದ್ದ ಜಂಟಿ ಸಂಸದೀಯ ಸಮಿತಿಯು ಪಾಸ್ಫೇಟ್ ಮತ್ತು ಪೊಟಾಷ್ ಮೇಲಿನ ಬೆಲೆ ನಿಯಂತ್ರಣವನ್ನು ರದ್ದು ಪಡಿಸಿ, ಯೂರಿಯಾ ಬೆಲೆಯಲ್ಲಿ ಶೇ 10ರಷ್ಟು ಇಳಿಕೆ ಮಾಡುವ ಪ್ರಸ್ತಾವವನ್ನು ನೀಡಿತು. ಇದು ಜಾರಿಯಾಗುತ್ತಿದ್ದಂತೆ ಪಾಸ್ಫೇಟ್ ಹಾಗೂ ಪೊಟಾಷ್ ಬೆಲೆ ಹೆಚ್ಚಳವಾಗಿ, ಅದರ ಬಳಕೆಯಲ್ಲಿ ಭಾರಿ ಇಳಿಕೆ ಕಂಡುಬಂತು. ಎನ್‌ಪಿಕೆ ಬಳಕೆ ಪ್ರಮಾಣವು ಮತ್ತೆ ಹಿಂದಿನ ಸ್ಥಿತಿಗೆ ಹೋಗಬೇಕಾದರೆ ಸಾಕಷ್ಟು ವರ್ಷಗಳೇ ಬೇಕಾದವು. ಆದರೆ, ಇತರ ಸಮಿತಿಗಳ ವರದಿಗಳು ಹೆಚ್ಚಿನವುಗಳಿಗೆ ಸಬ್ಸಿಡಿ ಸಹಿತವಾದ ಪರಿಹಾರ ಕ್ರಮಗಳನ್ನೇ ಸೂಚಿಸಿದ್ದವು.
ಈ ವಿಚಾರದಲ್ಲಿ ಎಷ್ಟೇ ಬದಲಾವಣೆಗಳಾಗಿದ್ದರೂ ಇತ್ತೀಚಿನವರೆಗೂ ದೇಶದಲ್ಲಿ ರಸಗೊಬ್ಬರ ತಯಾರಿಕಾ ಸಂಸ್ಥೆಗಳು ಸಂಪೂರ್ಣವಾಗಿ ನಿಯಂತ್ರಣ ಮುಕ್ತವಾಗಿರಲಿಲ್ಲ. ಆದ್ದರಿಂದ ಈ ಕ್ಷೇತ್ರದಲ್ಲಿ ಆಗಿರುವ ಹೂಡಿಕೆ ಕಡಿಮೆ ಎಂದು ಉದ್ದಿಮೆ ವಲಯ ಹೇಳುತ್ತದೆ.
ದೀರ್ಘಕಾಲದಿಂದ ರಸಗೊಬ್ಬರಗಳ ಅನಿಯಂತ್ರಿತವಾದ ಬಳಕೆಯಿಂದ ಭೂಮಿಯು ಫಲವತ್ತತೆ ಕಳೆದುಕೊಳ್ಳುತ್ತಿರುವುದನ್ನು ಮನಗಂಡ ಸರ್ಕಾರವು 2009ರಲ್ಲಿ ಪೋಷಕಾಂಶ ಆಧಾರಿತ ಸಬ್ಸಿಡಿ ವ್ಯವಸ್ಥೆ ಜಾರಿಮಾಡಿತು. ಇದರಿಂದ ಈ ಕ್ಷೇತ್ರಕ್ಕೆ ಇನ್ನಷ್ಟು ಹೂಡಿಕೆ ಬರಬಹುದು ಎಂದೂ ನಿರೀಕ್ಷಿಸಲಾಗಿತ್ತು. ಯೂರಿಯಾ ಅನ್ನು ಈ ವ್ಯವಸ್ಥೆಯಿಂದ ಹೊರಗಿಡಲಾಯಿತು. ಆದರೆ, ಈ ವ್ಯವಸ್ಥೆಯು ಸಮರ್ಪಕವಾಗಿ ಅನುಷ್ಠಾನಗೊಳ್ಳಲಿಲ್ಲ.
2003ರಲ್ಲಿ ಹೊಸ ದರ ನಿಗದಿ ಯೋಜನೆ ಅಸ್ತಿತ್ವಕ್ಕೆ ಬಂದಿತು. ಇದು ಯುರಿಯಾ ಗೊಬ್ಬರವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ಬಂದ ಯೋಜನೆ. ಪೂರಕ ಸಾಮಗ್ರಿ ದರಗಳ ಮತ್ತು ಘಟಕಗಳ ದರಗಳನ್ನು ಆಧರಿಸಿ, ಯೂರಿಯಾ ಗೊಬ್ಬರದ ಬೆಲೆ ನಿಗದಿ ಪಡಿಸಲಾಗುತ್ತಿತ್ತು. ಉತ್ಪಾದನೆಯ ವೆಚ್ಚ ಮತ್ತು ಮಾರಾಟದ ವೆಚ್ಚದ ನಡುವಿನ ವ್ಯತ್ಯಾಸದ ಮೊತ್ತವನ್ನು ಉತ್ಪಾದಕರಿಗೆ ನೀಡಲಾಗುತ್ತಿತ್ತು. ಗೊಬ್ಬರಗಳ ಪೈಕಿ ಯೂರಿಯಾ ಮಾತ್ರ ನಿಯಂತ್ರಿತ ಗೊಬ್ಬರವಾಗಿದ್ದು, ಅದರ ದರ ಏಕರೂಪದಲ್ಲಿರುತ್ತದೆ. ರಂಜಕ, ಪೊಟ್ಯಾಷ್ ಗೊಬ್ಬರಗಳು ಈ ನಿಯಂತ್ರಗಳಿಂದ ಮುಕ್ತವಾಗಿದ್ದು, ಗರಿಷ್ಠ ರೀಟೇಲ್ ದರದಡಿ ಮಾರಾಟವಾಗುತ್ತವೆ.
ಈ ಹೊಸ ಯೋಜನೆಯ ಉದ್ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಸಮರ್ಥ, ಹೆಚ್ಚು ಪಾರದರ್ಶಕ ಮತ್ತು ಸಬ್ಸಿಡಿ ವ್ಯವಸ್ಥೆಯನ್ನು ಸರಳಗೊಳಿಸುವುದಕ್ಕಾಗಿ ಅನುಸರಿಸಲಾಯಿತು. ಆದರೆ ಆಗಿದ್ದೇನು?
ಯೂರಿಯಾ ದರ ಏಕರೂಪಗೊಳಿಸಿದ್ದರಿಂದ ಗೊಬ್ಬರ ಉತ್ಪಾದನಾ ಕಂಪನಿಗಳು ನಷ್ಟ ಅನುಭವಿಸಲಾರಂಭಿಸಿದವು. ಇನ್ನೊಂದೆಡೆ ನೈಸರ್ಗಿಕ ಅನಿಲ ಮತ್ತು ನ್ಯಾಫ್ತ್ ದರ ಹೆಚ್ಚಿದ್ದರಿಂದ ಯೂರಿಯಾ ಉತ್ಪಾದನಾ ವೆಚ್ಚ ಹೆಚ್ಚಾಗಿತ್ತು. ಗೊಬ್ಬರ ಬಳಕೆಯಲ್ಲಿ ಅಸಮತೋಲನ ಉಂಟಾಗಿ, ಅಕ್ರಮ ರಫ್ತು, ಕಲಬೆರಕೆ ಪ್ರಕರಣಗಳು ಹೆಚ್ಚಾದವು. ಇದು ಗೊಬ್ಬರ ಮಾರುಕಟ್ಟೆಯನ್ನು ಹಾಳು ಮಾಡಿತು.
ದ್ವಿಗುಣವಾಗಿದ್ದು ಆದಾಯವಲ್ಲ, ವೆಚ್ಚ!
ರೈತನ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಎದೆ ತಟ್ಟಿಕೊಂಡು ಅಧಿಕಾರ ಹಿಡಿದ ಸರ್ಕಾರ ಎಕರೆ ಕನಿಷ್ಠ 1,000 ರಿಂದ 2000 ರೂ. ಹೆಚ್ಚುವರಿ ಹೊರೆಯನ್ನು ರೈತನ ಮೇಲೆ ಹೊರಿಸಿದೆ. ಗೊಬ್ಬರ ದರ ಹೆಚ್ಚಳ ರೈತನ ಇತರ ಕೃಷಿ ಚಟುವಟಿಕೆಗಳ ಮೇಲೆ ಆರ್ಥಿಕ ಹೊರೆಯಾಗಿ ಪರಿಣಮಿಸಲಿದ್ದು, ರೈತನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ.
ರಸಗೊಬ್ಬರಕ್ಕೆ ನೀಡುತ್ತಿರುವ ಸಹಾಯಧನವನ್ನು ಕೇಂದ್ರ ಸರ್ಕಾರವು ಪ್ರತಿ ಆರ್ಥಿಕ ವರ್ಷದಲ್ಲಿ ಇಳಿಕೆ ಮಾಡುತ್ತಲೇ ಬಂದಿದೆ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 22,000 ಕೋಟಿ ರೂ.ಗಳಷ್ಟು ರಸಗೊಬ್ಬರ ಸಬ್ಸಿಡಿಯನ್ನು ಕಡಿತ ಮಾಡಲಾಯಿತು. ಈ ಆರ್ಥಿಕ ಹೊರೆಯನ್ನು ಸರ್ಕಾರ ರೈತನ ಹೆಗಲಿಗೆ ದಾಟಿಸಿದೆ.
ಕೃಪೆ: ಅನ್ನದ ಋಣ
ಲೇಖಕರು: ದುರ್ಗದ ಹುಡುಗ ಕುಮಾರ್
ಇದನ್ನೂ ಓದಿ: ಪರೀಕ್ಷಾ ಪೆ ಚರ್ಚಾ ನಡೆಸುವ ಮೋದಿ, ಖರ್ಚಾ ಪೆ ಚರ್ಚಾ ನಡೆಸಬೇಕು: ರಾಹುಲ್‌ಗಾಂಧಿ