Fact Check: ಹಿಂದೂ ದೇವಾಲಯದಲ್ಲಿ ಏಸು ಪೋಟೋಗೆ ಪೂಜೆ ಮಾಡಲು ಎಸ್‌ಪಿ ಒತ್ತಾಯಿಸಿದ್ದರೇ?

“ಕೊಳ್ಳೇಗಾಲದ ಆಂಜನೇಯ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ಅರ್ಚಕರಿಂದ ಏಸು ಫೋಟೊ ಇಡಿಸಿ ಚಾಮರಾಜನಗರ ಜಿಲ್ಲೆಯ SP ದಿವ್ಯಾ ಸಾರಾ ಥಾಮಸ್ ಪೂಜೆ ಮಾಡಿಸಿದ್ದಾರೆ. ನಮ್ಮ ದೇವಸ್ಥಾನಗಳು ಎಂದರೆ ಅಷ್ಟೊಂದು ತಾತ್ಸಾರವೇ?” ಎಂಬ ಹೇಳಿಕೆಯೊಂದಿಗೆ ಫೋಟೋಗಳಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜವೇ ಪರಿಶೀಲಿಸೋಣ ಬನ್ನಿ.

ಈ ಪೋಸ್ಟ್ ಅನ್ನು ಆರ್ಕೈವ್ ಮಾಡಲಾಗಿರುವ ಆವೃತ್ತಿಯನ್ನು ಇಲ್ಲಿ ಕಾಣಬಹುದು

ಟ್ವಿಟ್ಟರ್‌ ನಲ್ಲಿಯೂ ಅದೇ ರೀತಿಯ ಆರೋಪ ಮಾಡಲಾಗಿದ್ದು, ಆ ಟ್ವೀಟ್‌ 6 ಸಾವಿರಕ್ಕೂ ಹೆಚ್ಚು ಜನ ರೀಟ್ವಿಟ್ ಮಾಡಿದ್ದಾರೆ.

https://twitter.com/azad_nishant/status/1293381171770990594?s=20

 

ಪ್ರತಿಪಾದನೆ: ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ರವರು ಹಿಂದೂ ದೇವಾಲಯದಲ್ಲಿ ಏಸು ಫೋಟೊ ಇಟ್ಟು ಒತ್ತಾಯವಾಗಿ ಪೂಜೆ ಮಾಡಿಸಿದ್ದಾರೆ.

ನಿಜಾಂಶ: ಕೊಳ್ಳೇಗಾಲದ ಆಂಜನೇಯ ದೇವಸ್ಥಾನದ ಅರ್ಚಕ ಟಿವಿಎಸ್‌ ರಾಘವನ್‌ ರವರು ಈ ಕುರಿತು ಹೇಳಿಕೆ ನೀಡಿದ್ದು, ಎಸ್‌ಪಿ ಯವರು ಅನ್ಯಮತದವರಾದ್ದರಿಂದ ನಾವೇ ಏಸು ಫೋಟೊ ಇಟ್ಟು ಪೂಜೆ ಮಾಡಿ ಅವರಿಗೆ ಕೊಡುಗೆ ನೀಡಿದೆವು. ಯಾವ ದುರುದ್ದೇಶದಿಂದಲೂ ಈ ಕೆಲಸ ನಡೆದಿಲ್ಲ. ಹಿಂದೂಗಳಿಗೆ ನೋವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ. ಹಾಗಾಗಿ ಮೇಲಿನ ಪ್ರತಿಪಾದನೆ ತಪ್ಪಾಗಿದೆ.

ಆಗಸ್ಟ್ 5 ರಂದು ರಾಮಂದಿರ ಶಿಲಾನ್ಯಾಸ ನಡೆಯುತ್ತಿರುವಾಗ ರಾಜ್ಯಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದರಿಂದ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ರವರು ಪರೀಶೀಲನೆ ನಡೆಸಲು ಕೊಳ್ಳೇಗಾಲಕ್ಕೆ ತೆರಳಿದ್ದರು. ಆ ವೇಳೆ ಕೊಳ್ಳೇಗಾಲದ ಜ್ಯೋತಿಷಿ ಮತ್ತು ಅರ್ಚಕ ಟಿವಿಎಸ್ ರಾಘವನ್‌ರವರು ಎಸ್ ಪಿ ಯವರನ್ನು ತಮ್ಮ ಸ್ವಗೃಹದಲ್ಲಿರುವ ದೇವಸ್ಥಾನಕ್ಕೆ ಆಹ್ವಾನಿಸಿದ್ದರು. ಎಸ್‌ಪಿಯವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದರಿಂದ ಏಸು ಮತ್ತು ಮೇರಿಯ ಚಿತ್ರವುಳ್ಳ ಫೋಟೊವನ್ನು ಗರ್ಭಗುಡಿಯಲ್ಲಿಟ್ಟು ಪೂಜೆ ಮಾಡಿದ ಅರ್ಚಕರುಎ ಸ್‌ಪಿ ಯವರಿಗೆ ಸನ್ಮಾನ ಮಾಡಿ ಆ ಭಾವಚಿತ್ರವನ್ನುಕೊಡುಗೆಯಾಗಿ ನೀಡಿದರು. ಇದರ ಪತ್ರಿಕಾ ವರದಿಗಳನ್ನು ಇಲ್ಲಿ ನೋಡಬಹುದು. ನಂತರ ಆ ಫೋಟೊ ವೈರಲ್ ಆಗಿದ್ದು ಎಸ್‌ಪಿ ಯವರೇ ಒತ್ತಾಯಪೂರ್ವಕವಾಗಿ ಏಸುವಿನ ಫೋಟೊ ಇರಿಸಿ ಪೂಜೆ ಮಾಡಿಸಿದ್ದಾರೆ ಎಂದು ತಪ್ಪು ತಪ್ಪಾಗಿ ದೂರಲಾಗಿತ್ತು.

ಹಿಂದೂ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂಬ ಆರೋಪ ಕೇಳಿ ಬಂದಾಗ ಅರ್ಚಕ ಟಿವಿಎಸ್ ರಾಘವನ್‌ ರವರು “ಯಾರೇ ಬಂದರೂ, ಏನೇ ತಂದರೂ ಅದನ್ನು ದೇವರ ಮುಂದಿಟ್ಟು ಪೂಜೆ ಮಾಡಿಕೊಡುವುದು ನಮ್ಮ ಸಂಪ್ರದಾಯ. ಒಳ್ಳೆಯದಾಗಲಿ ಎಂಬ ಭಾವನೆಯಷ್ಟೆ ಹೊರತು ಯಾವುದೇ ಕೆಟ್ಟ ದೃಷ್ಟಿಯಿಂದ  ಆ ಫೋಟೊ ಇಟ್ಟಿಲ್ಲ. ಹಿಂದೂ ಸಮುದಾಯಕ್ಕೆ ಇದರಿಂದ ನೋವಾಗಿದ್ದಾರೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ. ಅಲ್ಲದೇ ತಾನು ಹಿಂದೂ ಆಗಿಯೇ ಉಳಿಯುತ್ತೇನೆ, ಹಿಂದೂವಾಗಿಯೇ ಕೊನೆಯಾಗುತ್ತೇನೆ ಎಂದು ಕೂಡ ಅವರು ಹೇಳಿದ್ದಾರೆ. ಅವರ ವಿಡಿಯೋ ಇಲ್ಲಿದೆ.

ಇನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಫ್ಯಾಕ್ಟ್‌ ಚೆಕ್ ನಡೆಸಿದ್ದು, ಪೊಲೀಸರು ಸ್ವತಂತ್ರವಾಗಿ ಅಲ್ಲಿನ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅದರಂತೆ ಎಸ್‌ಪಿ ದಿವ್ಯಾ ಸಾರಾ ಥಾಮಸ್‌ ರವರು ದೇವಾಸ್ಥಾನಕ್ಕೆ ಯಾವುದೇ ಫೋಟೊ ತೆಗೆದುಕೊಂಡು ಹೋಗಿಲ್ಲ ಮತ್ತು ಏಸು ಫೋಟೊಗೆ ಪೂಜೆ ಮಾಡುವಂತೆ ಒತ್ತಾಯಿಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅದರ ವರದಿ ಇಲ್ಲಿದೆ.

ದಿ ನ್ಯೂಸ್‌ ಮಿನಿಟ್‌ ಜೊತೆ ಮಾತನಾಡಿದ ಎಸ್‌ ಪಿ ದಿವ್ಯಾ ಸಾರಾ ಥಾಮಸ್‌ರವರು “ಫೇಕ್‌ ಪೋಸ್ಟ್‌ ಮೂಲಕ ನನ್ನ ಖ್ಯಾತಿ ಕೆಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಕೆಲ ಕಿಡಿಗೇಡಿಗಳು ಇದರ ಹಿಂದಿದ್ದಾರೆ. ನಾನು ಕ್ರಿಶ್ಚಿಯನ್, ನನ್ನ ಪತಿ ಹಿಂದೂ ಆಗಿದ್ದಾರೆ. ನಾನು ದೇವಸ್ಥಾನಕ್ಕೆ ಹೋಗಿದ್ದೆ, ಆದರೆ ಏಸುವಿನ ಫೋಟೊಗೆ ಪೂಜೆ ಮಾಡುವಂತೆ ಒತ್ತಾಯಿಸಿಲ್ಲ. ಅರ್ಚಕರೇ ಹಾಗೆ ಮಾಡಿ ನನ್ನನ್ನು ಸನ್ಮಾನಿಸಿದರು ಅಷ್ಟೇ” ಎಂದಿದ್ದಾರೆ. ಇದರ ವರದಿ ಇಲ್ಲಿದೆ.

ಒಟ್ಟಿನಲ್ಲಿ ಹಿಂದೂ ದೇವಾಲಯದಲ್ಲಿ ಏಸು ಫೋಟೊ ಇಟ್ಟು ಪೂಜೆ ಮಾಡಲು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಒತ್ತಾಯಿಸಿಲ್ಲ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ: Fact Check: ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಯೋಗಿ ನೆರವು; ಧನ್ಯವಾದ ಹೇಳಿ ಪತ್ರ ಬರೆದ ಮೋದಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights