ವಿದ್ಯುತ್ ತಂತಿಬೇಲಿ ಸ್ಪರ್ಶ; 40 ವರ್ಷದ ಆನೆ ಸಾವು!

ವಿದ್ಯುತ್ ಸ್ಪರ್ಶಿಸಿ 40 ವರ್ಷದ ಗಂಡಾನೆಯೊಂದು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ವಲಯದ ಎನ್. ಆರ್. ಕಾಲೋನಿ ಗ್ರಾಮದ ಪಕ್ಕದ ತೋಟದಲ್ಲಿ ನಡೆದಿದೆ.

ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದಿದ್ದ ಒಂಟಿ ಸಲಗ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಅಕ್ರಮವಾಗಿ ಹಾಕಲಾಗಿದ್ದ ತಂತಿ ಬೇಲಿಯ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದೆ.

ಗುಂಪಾಗಿ ಆನೆಗಳು ಆಗಮಿಸಿದ್ದು, ಒಂದು ಆನೆಗೆ ವಿದ್ಯುತ್ ತಗುಲಿದ ತಕ್ಷಣ ಬೇರೆ ಆನೆಗಳು ಕಾಡಿನತ್ತ ವಾಪಸ್ ತೆರಳಿವೆ. ಅರಣ್ಯದಂಚಿನ ಗ್ರಾಮಗಳ ರೈತರ ಜಮೀನುಗಳಿಗೆ ಆನೆಗಳು ದಾಂಗುಡಿ ಇಡುತ್ತಲೆ ಇರುತ್ತವೆ‌. ರೈತರ ಬೆಳೆಗಳನ್ನ ನಾಶ ಪಡಿಸುತ್ತಲೆ ಇರುತ್ತವೆ. ಹಾಗಾಗಿ ಕೆಲ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಜಮೀನಿನ ಸುತ್ತ ತಂತಿಗಳನ್ನು ಕಟ್ಟಿ ರಾತ್ರಿ ವೇಳೆ ಅದಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡುತ್ತಾರೆ.

ಅಕ್ರಮವಾಗಿ ಬೆಳೆ ರಕ್ಷಣೆ ಅಳವಡಿಸಿದ್ದ ವಿದ್ಯುತ್‌ ತಂತಿ ತಗುಲಿ ಆನೆ ಸಾವನ್ನಪ್ಪಿರುವ ಶ‌ಂಕೆ ವ್ಯಕ್ತವಾಗಿದೆ. ಕಳೆದ ತಿಂಗಳ 25 ರಂದು ಕಬ್ಬಾಳು ಅರಣ್ಯದಲ್ಲಿ 35 ವರ್ಷದ ಗಂಡಾನೆ ಮೃತಪಟ್ಟಿತ್ತು. ಈ ಬೆನ್ನಲ್ಲೇ ಇಂದು ಮತ್ತೊಂದು ಆನೆ ಮೃತಪಟ್ಟಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿ. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ಕೂಡ ಮಾಡಿದ್ದಾರೆ. ಗಣೇಶ ಚತುರ್ಥಿ ದಿನದಂದೆ ಗಜರಾಜ ಆಹಾರ ಆರಸಿ ನಾಡಿಗೆ ಬಂದು ಪ್ರಾಣ ಬಿಟ್ಟಿದೆ. ಗಂಡು ಆನೆ ಮೃತಪಟ್ಟಿರುವ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚನ್ನಪಟ್ಟಣ ತಾಲೂಕಿನ ಕೋಡಂಬಹಳ್ಳಿ ಮತ್ತು ಶ್ಯಾನಭೋಗನಹಳ್ಳಿ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಬೆಳೆ ನಾಶ ಮಾಡಿದ್ದ ಘಟನೆ ಕೆಲವು ತಿಂಗಳ ಹಿಂದೆ ನಡೆದಿತ್ತು. ಎರಡು ಗ್ರಾಮಗಳ 5-6 ರೈತರ ಜಮೀನುಗಳ ಮೇಲೆ 10 ಕಾಡನೆಗಳ ಹಿಂಡು ದಾಳಿ ಮಾಡಿದ್ದವು.

ರಾಜ್ಯದಲ್ಲಿ 2014-15ರಲ್ಲಿ 15, 2015-16ರಲ್ಲಿ 8, 2016-17ರಲ್ಲಿ 6, 20217-18ರಲ್ಲಿ 10, 2018-19ರಲ್ಲಿ 9 ಮತ್ತು 2019-20ರಲ್ಲಿ 8 ಆನೆಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿವೆ. ಕಳೆದ 5 ವರ್ಷದಲ್ಲಿ 16 ಆನೆಗಳು ಗುಂಡೇಟು ತಿಂದು ಪ್ರಾಣ ಬಿಟ್ಟಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights