ಯಡಿಯೂರಪ್ಪ ವಿರುದ್ಧ ನನ್ನ ಹೋರಾಟಕ್ಕೆ ಪ್ರಧಾನಿ ಮೋದಿ ಬೆಂಬಲವಿದೆ: ಯತ್ನಾಳ್‌

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುವ ಯತ್ನಾಳ್‌ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಬೇಕು ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್‌, ನನಗೆ ಮೋದಿ ಅವರ ಬೆಂಬಲವಿದೆ. ನನ್ನನ್ನು ಪಕ್ಷದಿಂದ ಉಚ್ಚಾಟಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಬಿಜೆಪಿ ಅತಿ ದೊಡ್ಡ ಪಕ್ಷ. ನನ್ನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದಿದ್ದರೆ ಹತ್ತೇ ನಿಮಿಷದಲ್ಲಿ ಅದು ಜಾರಿಯಾಗುತ್ತಿತ್ತು. ಆದರೆ, ಭ್ರಷ್ಟಾಚಾರದ ವಿರುದ್ಧದ ನನ್ನ ಹೋರಾಟದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಾಧಾನ ತಂದಿದೆ. ಹೀಗಾಗಿ, ಪಕ್ಷದಿಂದ ನನ್ನನ್ನು ಹೊರಗಡೆ ಹಾಕುವುದು ಅಸಾಧ್ಯವಾದ ಮಾತು ಎಂದು ಅವರು ಹೇಳಿದ್ದಾರೆ.

ಯಡಿಯೂರಪ್ಪ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ಇಲಾಖೆ ನೋಡಿಕೊಳ್ಳುತ್ತಿದ್ದಾರೆ. ನನಗೆ ಹಿಂದೆ ಷೋಕಾಸ್ ನೋಟಿಸ್ ನೀಡಿದ ಸಮಯದಲ್ಲಿಯೇ ಯಡಿಯೂರಪ್ಪ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ, ಗೃಹ ಸಚಿವ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ 11 ಪುಟಗಳ ದಾಖಲೆಗಳನ್ನು ಕೊಟ್ಟಿದ್ದೇನೆ. ನೋಟಿಸ್ ಕೊಟ್ಟು ಎರಡು ತಿಂಗಳು ಕಳೆದರೂ ನನ್ನ ಮೇಲೆ ಕ್ರಮ ಕೈಗೊಂಡಿಲ್ಲ. ಇದು ನಾನು ಮಾಡಿರುವ ಆರೋಪದಲ್ಲಿ ಸತ್ಯವಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ್ಯಕ್ಕೆ ಬರುವ ರಾಷ್ಟ್ರೀಯ ನಾಯಕರು ವಾಪಸ್ ಹೋಗುವ ಮೊದಲು ನನ್ನನ್ನು ಬೈದು ಹೋಗುತ್ತಾರೆ. ವಿಮಾನದಲ್ಲಿ ಕುಳಿತ ಬಳಿಕ ನಕ್ಕು ಬಿಡುತ್ತಾರೆ. ಇದರ ಮರ್ಮ ಏನೆಂಬುದು ಎಲ್ಲರಿಗೂ ಗೊತ್ತಿದೆ. ಮುಂದೊಂದು ದಿನ ಅದನ್ನೂ ಬಹಿರಂಗ ಪಡಿಸುತ್ತೇನೆ ಎಂದು ಯತ್ನಾಳ್‌ ತಿಳಿಸಿದ್ದಾರೆ.

ಯಡಿಯೂರಪ್ಪ ವಿರುದ್ಧ ಒಬ್ಬೊಬ್ಬರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪ ಪಕ್ಷದ ಮಾಲೀಕರಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ. ಕೆ.ಎಸ್.ಈಶ್ವರಪ್ಪ ಕೂಡಾ ಬಹಿರಂಗವಾಗಿಯೇ ಹರಿಹಾಯ್ದಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ರಾಜ್ಯದ ಎಲ್ಲ ನಾಯಕರು ಯಡಿಯೂರಪ್ಪ ವಿರುದ್ಧ ಧ್ವನಿ ಎತ್ತಲಿದ್ದಾರೆ ಎಂದು ಯತ್ನಾಳ್‌ ಹೇಳಿದ್ದಾರೆ.

ಇದನ್ನೂ ಓದಿ: ಯತ್ನಾಳ್‌ ಅವರನ್ನು ಪಕ್ಷದಿಂದ ಹೊರಹಾಕಬೇಕಾದ್ದು ಅನಿವಾರ್ಯ: ಅರುಣ್‌ ಸಿಂಗ್‌

ಇದನ್ನೂ ಓದಿ: ತಮಿಳುನಾಡು ಕಾಂಗ್ರೆಸ್‌ ಅಭ್ಯರ್ಥಿ ಕೊರೊನಾದಿಂದ ಸಾವು; ಗೆದ್ದರೆ ಉಪ-ಚುನಾವಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights