ಐದು ರಾಜ್ಯಗಳಲ್ಲಿ ಕಳಪೆ ಸಾಧನೆ: ಕಾಂಗ್ರೆಸ್ಗೆ ಅತ್ಮಾವಲೋಕನ ಮತ್ತು ವಿಮರ್ಶೆಯ ಅಗತ್ಯವಿದೆ: ಅಶೋಕ್ ಚವಾಣ್
ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷದ ಸಾಧನೆಗಳ ಮೌಲ್ಯಮಾಪನ ಮಾಡಲು “ಆತ್ಮಾವಲೋಕನ ಮತ್ತು ವಿಮರ್ಶೆಗಳ” ಅಗತ್ಯವಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡ ಅಶೋಕ್ ಚವಾಣ್ ಗುರುವಾರ ಹೇಳಿದ್ದಾರೆ.
ಅಸ್ಸಾಂ, ಪಶ್ಚಿಮ ಬಂಗಾಳ, ಪುದುಚೇರಿ, ತಮಿಳುನಾಡು ಮತ್ತು ಕೇರಳ ಚುನಾವಣೆಗಳಲ್ಲಿ ಪಕ್ಷವು ಕಳಪೆ ಸಾಧನೆ ಮಾಡಿದೆ. ಈ ಬಗ್ಗೆ ವಿಮರ್ಶೆಗಳನ್ನು ಮಾಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಹಾರಾಷ್ಟ್ರ ಸರ್ಕಾರದ ಸಚಿವರಾಗಿರುವ ಚವಾಣ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದ್ದಾರೆ.
ಸಮಿತಿಯು ಚುನಾವಣೆ ನಡೆದ ರಾಜ್ಯಗಳ ಮುಖಂಡರೊಂದಿಗೆ ಸಭೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
“ನಾವು ಇಂದು ಆಯಾ ರಾಜ್ಯಗಳಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡರು, ರಾಜ್ಯ ಘಟಕದ ಅಧ್ಯಕ್ಷರು ಮತ್ತು ಎಐಸಿಸಿ ಉಸ್ತುವಾರಿಗಳೊಂದಿಗೆ ಚರ್ಚಿಸಿದ್ದೇವೆ. ಮುಂದಿನ ಎರಡು ದಿನಗಳಲ್ಲಿ ಪಕ್ಷದಿಂದ ಸ್ಪರ್ಧಿಸಿ ಗೆದ್ದಿರುವ ಶಾಸಕರು ಮತ್ತು ಇತರ ಅಭ್ಯರ್ಥಿಗಳೊಂದಿಗೆ ಮಾತನಾಡುತ್ತೇವೆ” ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಚವಾಣ್ ಹೇಳಿದರು.
“ನಾವು ಪಕ್ಷದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತೇವೆ. ಪಕ್ಷವನ್ನು ಬಲಗೊಳಿಸಲು ನಮಗೆ ಆತ್ಮಾವಲೋಕನ ಮತ್ತು ವಿಮರ್ಶೆಯ ಅಗತ್ಯವಿದೆ” ಎಂದು ಅವರು ಹೇಳಿದರು.
ಐದು ಸದಸ್ಯರ ಸಮಿತಿಯಲ್ಲಿ ಸಲ್ಮಾನ್ ಖುರ್ಷಿದ್, ಮನೀಶ್ ತಿವಾರಿ, ವಿನ್ಸೆಂಟ್ ಪಾಲಾ ಮತ್ತು ಜೋತಿ ಮಣಿ ಸೇರಿದ್ದಾರೆ.
ಇದನ್ನೂ ಓದಿ: ಅಸ್ಸಾಂ ವಿಶ್ವಾಸಗಳಿಸಲು ವಿಫಲವಾದ ಕಾಂಗ್ರೆಸ್; ವಿಫಲತೆಗೆ ಇವೆ ಸಾಕಷ್ಟು ಕಾರಣಗಳು!