ಮರಳುಗಾಡಿನಲ್ಲಿ ಸಿಗದ ನೀರು; ಬಾಯಾರಿಕೆಯಿಂದ 5 ವರ್ಷದ ಬಾಲಕಿ ಸಾವು; ಪ್ರಜ್ಞಾಹೀನ ಸ್ಥಿತಿಯಲ್ಲಿ ಅಜ್ಜಿ!

ಮರಳುಗಾಡು ಪ್ರದೇಶದಲ್ಲಿ ನೀರು ಸಿಗದೆ, ಬಾಯಾರಿಕೆಯಿಂದ 5 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜಲೋರ್‌ ಜಿಲ್ಲೆಯಲ್ಲಿ ನಡೆದಿದೆ.

ಅಜ್ಜಿಯೊಬ್ಬರು ತನ್ನ ಸಹೋದರಿಯನ್ನು ಭೇಟಿ ಮಾಡಲು 10 ಕಿ.ಮೀ ದೂರದ ಊರಿಗೆ ತನ್ನ 5 ವರ್ಷದ ಮೊಮ್ಮಗಳೊಂದಿಗೆ ಕಾಲ್ನಡಿಗೆಯಲ್ಲಿ ಹೊರಟ್ಟಿದ್ದರು. ಈ ವೇಳೆ ಬಿಸಿಲಿನ ಬೇಗೆಗೆ ದಣಿದ ಬಾಲಕಿ ಸಾವನ್ನಪ್ಪಿದ್ದಾಳೆ ಮತ್ತು ಅಜ್ಜಿ ಕೂಡ ಪ್ರಜ್ಞೆ ತಪ್ಪಿದ್ದು, ಅವರನ್ನು ಗಮನಿಸಿದ ಸ್ಥಳೀಯರು ಅಜ್ಜಿಗೆ ನೀರು ಕುಡಿಸಿದ ಬಳಿಕ ಅಜ್ಜಿಗೆ ಪ್ರಜ್ಞೆ ಬಂದಿದೆ ಎಂದು ತಿಳಿದು ಬಂದಿದೆ.

ಮೃತ ಬಾಲಕಿಯನ್ನು ಮಂಜು ಎಂದು, ಅಜ್ಜಿಯನ್ನು ಸುಖಿ ಎಂದು ಗುರುತಿಸಲಾಗಿದೆ. ನಿರ್ಜಲೀಕರಣದಿಂದಾಗಿ (ಡಿಹೈಡ್ರೇಷನ್) ಮಗುವಿನ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಜ್ಜಿ ನಿರ್ಜಲೀಕರಣದಿಂದ ಬಳಲುತ್ತಿದ್ದರು ಮತ್ತು ಮಗುವಿನ ಸಾವಿಗೂ ನಿರ್ಜಲೀಕರಣವೇ ಕಾರಣವಾಗಿದೆ. ಸದ್ಯ ವೃದ್ಧೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

“ಅಜ್ಜಿ ಮತ್ತು ಮೊಮ್ಮಗಳು ತಮ್ಮೊಂದಿಗೆ ನೀರನ್ನು ತೆಗೆದುಕೊಂಡು ಹೋಗಿರಲಿಲ್ಲ. ಬಿಸಿಲಿನ ತಾಪಕ್ಕೆ ತೀವ್ರ ಬಾಯಾರಿಕೆಯಾಗಿ ನಿರ್ಜಲೀಕರಣವಾಗಿದೆ.’ ಎಂದು ಸ್ಥಳೀಯ ಪೊಲೀಸ್ ಠಾಣೆ ತನಿಖಾಧಿಕಾರಿ ಪದ್ಮರಾಮ್ ರಾಣಾ ಹೇಳಿದರು.

“ಮಗುವಿನ ತಾಯಿ ಎರಡನೇ ಮದುವೆಯಾಗಲು ಕೆಲವು ವರ್ಷಗಳ ಹಿಂದೆ ಕುಟುಂಬವನ್ನು ತೊರೆದಿದ್ದರು. ಮಗು ತನ್ನ ಅಜ್ಜಿಯೊಂದಿಗೆ ಏಕಾಂಗಿಯಾಗಿ ವಾಸವಿತ್ತು. ವೃದ್ಧೆ ಸುಖಿ (ಆಹಾರ ಭದ್ರತಾ ಕಾಯ್ದೆ) ಫಲಾನುಭವಿ. ಆದರೆ ಈಗ ಕೆಲವು ತಿಂಗಳುಗಳಿಂದ ಉಚಿತ ಪಡಿತರವನ್ನು ತೆಗೆದುಕೊಂಡಿಲ್ಲ” ಎಂದು ಜಿಲ್ಲಾಧಿಕಾರಿ ನಮ್ರತಾ ಹೇಳಿದ್ದಾರೆ.

ವೃದ್ಧೆ ಕೆಲವೊಮ್ಮೆ ಆಹಾರಕ್ಕಾಗಿ ಬೇಡುತ್ತಿದ್ದರು. ಕೆಲವು ಸಮಯಗಳಲ್ಲಿ ನೆರೆಹೊರೆಯವರು ಆಹಾರ ಒದಗಿಸುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಬಾಲಕಿಯ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಅಪಹರಣ; ಚುಚ್ಚುಮದ್ದು ನೀಡಿ 08 ವರ್ಷ ನಿರಂತರ ಅತ್ಯಾಚಾರ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights