ದಲಿತ ಮಗು ದೇವಸ್ಥಾನಕ್ಕೆ ಹೋಗಿದ್ದಕ್ಕೆ ದಂಡ; ದೇವಸ್ಥಾನ ಶುದ್ಧೀಕರಿಸಿ ಅಸ್ಪೃಶ್ಯತೆ ಆಚರಣೆ!

ದಲಿತ ಸಮುದಾಯದ ಮಗುವೊಂದು ದೇವಸ್ಥಾನಕ್ಕೆ ಹೋಗಿದ್ದಾನೆ ಎಂಬ ಕಾರಣಕ್ಕೆ ಆತನ ಕುಟುಂಬಕ್ಕೆ ಗ್ರಾಮಸ್ಥರು ದಂಡ ವಿಧಿಸಿ ದೇವಸ್ಥಾನ ಶುದ್ದಿಕರಿಸಿ ಅಸ್ಪೃಶ್ಯತೆ ಆಚರಿಸಿರುವ ಸಮಾಜವೇ ತಲೆತಗ್ಗಿಸುವಂತಹ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

ಕುಷ್ಟಗಿ ತಾಲೂಕಿನ ಮಿಯಾಪುರದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನದ ಒಳಗೆ ಹೋದ ಮಗುವಿನ ಕುಟುಂಬಕ್ಕೆ ದಂಡ ವಿಧಿಸಿ, ಶುದ್ದೀಕರಿಸಿರುವ ಪ್ರಕರಣ ವರದಿಯಾದ ನಂತರ, ಜಿಲ್ಲೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದ್ದು, ಅಸ್ಪೃಶ್ಯತೆ ಆಚರಣೆ ಕೈ ಬಿಡಲು ಸೂಚನೆ ನೀಡಿದ್ದಾರೆ. ಈ ಘಟನೆ ತಪ್ಪು ಕಲ್ಪನೆಯಿಂದ ಆಗಿದ್ದು, ಸೌಹಾರ್ದಯುತವಾಗಿ ಇರುತ್ತವೆ ಎಂದ ಗ್ರಾಮಸ್ಥರು ಹೇಳಿದ್ದಾರೆ.

ಸೆ 4 ರಂದು ಚನ್ನದಾಸರ ಸಮುದಾಯದ ಮಗುವೊಂದು ತನ್ನ 4ನೇ ವರ್ಷದ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಆಂಜನೇಯ ದೇವಸ್ಥಾನಕ್ಕೆ ಹೋಗಿತ್ತು. ಆದರೆ, ಗ್ರಾಮಸ್ಥರು ದಲಿತರು ಗುಡಿ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ದೇವಸ್ಥಾನವನ್ನು ಶುದ್ಧೀಕರಿಸಿದ್ದರು. ಅಲ್ಲದೆ, ಸೆ 11 ರಂದು ಗ್ರಾಮದ ಸವರ್ಣಿಯರು ಸಭೆ ನಡೆಸಿ 11 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ಇದಕ್ಕೆ ಚನ್ನದಾಸರ ಸಮುದಾಯ ಪ್ರತಿಭಟನೆ ಮಾಡಿತ್ತು.

ಈ ಘಟನೆಯ ನಂತರ ಗ್ರಾಮಕ್ಕೆ ಕುಷ್ಟಗಿ ತಹಸೀಲ್ದಾರ ಸಿದ್ದೇಶ, ಗಂಗಾವತಿ ಡಿವಾಯ್ ಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಭೇಟಿ ನೀಡಿ, ಮುಂದೆ ಇಂಥ ಘಟನೆಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಅದಕ್ಕೆ ಗ್ರಾಮಸ್ಥರು ಸಹ ಒಪ್ಪಿಕೊಂಡು ಯಾವುದೋ ತಪ್ಪು ಕಲ್ಪನೆಯಿಂದ ಈ ರೀತಿಯಾಗಿದೆ, ಮುಂದಿನ ದಿನಗಳಲ್ಲಿ ಎಲ್ಲರೂ ಒಂದಾಗಿರುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಧಿಕಾರಿಗಳು ನಮ್ಮ ಚಪ್ಪಲಿ ಎತ್ತಿಕೊಳ್ಳಲು ಮಾತ್ರ ಇರುವುದು: ಬಿಜೆಪಿ ನಾಯಕಿ ವಿವಾದಾತ್ಮಕ ಹೇಳಿಕೆ

ಇಂತಹದ್ದೇ ಒಂದು ಅಮಾನವೀಯ ಘಟನೆ ಕಾರಟಗಿ ತಾಲೂಕಿನ ಬರಗೂರಿನಲ್ಲಿ ನಡೆದಿದ್ದು, ದಲಿತ ಯುವಕ ಇದೇ ಗ್ರಾಮದ ಸವರ್ಣಿಯ ಯುವತಿಯನ್ನು ಪ್ರೀತಿಸಿದ್ದ. ಈ ಸಂದರ್ಭದಲ್ಲಿ ಹಲವು ಬಾರಿ ಗಲಾಟೆಯಾಗಿತ್ತು. ಆದರೆ, ಕೊನೆಗೆ ಯುವಕನನ್ನು ಮಾರ್ಯಾದಾಗೇಡು ಹತ್ಯೆ ಮಾಡಲಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಈಗಲೂ ಸಹ ಗ್ರಾಮೀಣ ಪ್ರದೇಶದಲ್ಲಿ ದಲಿತರ ಮನೆಯಲ್ಲಿ ಸಮಾರಂಭಗಳು, ಸಾವುಗಳ ಸಂಭವಿಸುದರೆ ಗ್ರಾಮದಲ್ಲಿರುವ ಸವರ್ಣಿಯರ ಹೊಟೆಲ್ ಗಳು ಬಂದ್ ಮಾಡುತ್ತಾರೆ. ಗ್ರಾಮಗಳಲ್ಲಿಯ ದಲಿತರು ಹೊಟೆಲ್ ಪ್ರವೇಶಿದುವುದಿಲ್ಲ. ಇನ್ನೂ ದಲಿತರ ಮನೆಯ ಸಾವು ಹಾಗು ಸಾಮಾರಂಭಗಳಿಗೆ ಬೇರೆ ಗ್ರಾಮದ ದಲಿತರು ಆಗಮಿಸುತ್ತಾರೆ ಅವರು ಹೊಟೆಲ್ ಬಂದರೆ ಅಪವಿತ್ರವಾಗುತ್ತವೆ. ಅವರಿಗೆ ತಿಂಡಿ, ಚಹ ನೀಡಲು ನಿರಾಕರಿಸಿದರೆ ಗಲಾಟೆಯಾಗುತ್ತವೆ ಎಂಬ ಕಾರಣಕ್ಕೆ ಒಂದೊಂದು ದಿನ ಹೊಟೆಲ್ ಬಂದ್ ಮಾಡುತ್ತಾರೆ.

ಇಂದು ಇಡೀ ಜಗತ್ತನ್ನೇ ಅಂಗೈಯಲ್ಲಿದೆ ನೋಡುವಷ್ಟು ತಂತ್ರಜ್ಞಾ, ವಿಜ್ಞಾನ ಮುಂದುವರೆದಿದೆ. ಆದರೆ, ಇದೇ ಸಮಾಜದಲ್ಲಿ ಇನ್ನೂ ಅಸ್ಪೃಶ್ಯತೆ ಎಂಬ ಅಮಾನವೀಯ ಘಟನೆಗಳು ಇನ್ನೂ ವರದಿಯಾಗುತ್ತಿವೆ. ಸವರ್ಣಿಯರು ದಲಿತರಿಗೆ ದೇವಸ್ಥಾನ ಪ್ರವೇಶ, ಕ್ಷೌರಿಕರಿಗೆ ಕ್ಷೌರವನ್ನು ಸವರ್ಣಿಯರಿಗೆ ಮಾತ್ರ ಮಾಡಿ ಎಂಬ ಪ್ರಕರಣಗಳು, ಹದಿ ಹರೆಯದಲ್ಲಿ ದಲಿತ ಯುವಕ ಸವರ್ಣಿಯ ಯುವತಿಯನ್ನು ಪ್ರೀತಿಸಿದರೆ ಮಾರ್ಯಾದಾ ಹತ್ಯೆ ಮಾಡುವಂಥ ಘಟನೆಗಳು ನಡೆಯುತ್ತಲೇ ಇರುವುದು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡುತ್ತಿವೆ. ಇಂತಹ ಘಟನೆಗಳು ಮರುಕಳಸದಂತೆ ಜನರಲ್ಲಿ ಜಾಗೃತಿ ಮೂಡಿಸಿ ಅಸ್ಪೃಶ್ಯತೆ ನಿರ್ಮೂಲನೆ ಮಾಡುವುದು ಅವಶ್ಯವಾಗಿದೆ.

ಇದನ್ನೂ ಓದಿ: ನಾವು ಗಾಂಧಿಯನ್ನೇ ಬಿಟ್ಟಿಲ್ಲ ಎಂದು ಸಿಎಂ ಬೊಮ್ಮಾಯಿಗೆ ಕೊಲೆ ಬೆದರಿಕೆ ಹಾಕಿದ್ದ ಮೂವರ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights