ಜಮ್ಮು ಮತ್ತು ಕಾಶ್ಮೀರ: ಹೆಚ್ಚಿನ ರಾಜಕೀಯ ಬಂಧಿತರ ಬಿಡುಗಡೆಗೆ ಒಕ್ಕೂಟ ಸರ್ಕಾರ ನಿರ್ಧಾರ!

ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ಅಲ್ಲಿನ ರಾಜಕೀಯ ಪಕ್ಷಗಳ 14 ನಾಯಕರೊಂದಿಗೆ ಸಭೆಯನ್ನು ನಡೆಸಿದ್ದಾರೆ. ಈ ಸಭೆ ನಡೆಯುವ ಕೆಲವೇ ದಿನಗಳ ಮುನ್ನ ಕೆಲವು ರಾಜಕೀಯ ನಾಯಕರನ್ನು ಬಂಧನದಿಂದ ಬಿಡುಗಡೆ ಮಾಡಲಾಗಿತ್ತು. ಅಲ್ಲದೆ, ಉಳಿದ ರಾಜಕೀಯ ಬಂಧಿತರನ್ನು ಕೇಸ್‌ ಟು ಕೇಸ್‌ ಆಧಾರದಲ್ಲಿ ಶೇಘ್ರದಲ್ಲೇ ಬಿಡುಗಡೆ ಮಾಡಲು ಜೆ&ಕೆ ಲೆಫ್ಟಿನಂಟ್‌ ಜನರಲ್‌ (LG) ಮನೋಜ್‌ ಸಿನ್ಹಾ ಅವರು ಸಮಿತಿಯನ್ನು ರಚಿಸಲಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ಎಲ್‌ಜಿ ನೇಮಿಸುವ ಸಮಿತಿಯು ಪಿಎಸ್‌ಎ (ಪಬ್ಲಿಕ್‌ ಸೇಫ್ಟಿ ಆಕ್ಟ್‌) ಅಡಿಯಲ್ಲಿ ಬಂಧನದಲ್ಲಿರುವ 40 ಜನರ ಪಟ್ಟಿಯಲ್ಲಿ ಪರಿಶೀಲಿಸಲಿದೆ. ಅವರಲ್ಲಿ ಹೆಚ್ಚಿನವರು ರಾಜಕೀಯ ಪಕ್ಷಗಳಿಗೆ ಸೇರಿದವರು. ಇವರೆಲ್ಲರೂ 370 ವಿಧಿಯನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಹಿಂಸಾಚಾರದ ಆರೋಪಗಳನ್ನು ಹೊತ್ತಿರುವವರು. ವಿವಿಧ ಅಂಶಗಳ ಆಧಾರ ಮೇಲೆ ಮತ್ತು ಭದ್ರತಾ ಸಂಸ್ಥೆಗಳ ಪ್ರತಿಕ್ರಿಯೆಯನ್ನು ಆಧರಿಸಿ ಅವರ ಬಿಡುಗಡೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿರುವುದಾಗಿ TNIE ವರದಿ ಮಾಡಿದೆ.

ಇದನ್ನೂ ಓದಿ: ಮನೋಜ್ ಸಿನ್ಹಾ – ಅಮಿತ್ ಶಾ ಭೇಟಿ; ಪ್ರತ್ಯೇಕ ಜಮ್ಮು ರಾಜ್ಯಕ್ಕಾಗಿ ಹೆಚ್ಚುತ್ತಿದೆ ಬೇಡಿಕೆ!

“ಪಿಎಸ್ಎ ಅಡಿಯಲ್ಲಿ ಬಂಧಿತರಾಗಿರುವವರ ಡೇಟಾವನ್ನು ಗೃಹ ಸಚಿವರು ಸಭೆಯಲ್ಲಿ ಹಂಚಿಕೊಂಡಿದ್ದಾರೆ. ಪಿಎಸ್ಎ ಅಡಿಯಲ್ಲಿ 40 ಜನರನ್ನು ಬಂಧಿಸಲಾಗಿದೆ. ಅವರು ಇನ್ನೂ ಬಂಧನದಲ್ಲಿದ್ದಾರೆ. ಅವರ ಪ್ರಕರಣಗಳನ್ನು ಸಮಿತಿಯು ಪರಿಶೀಲಿಸುತ್ತದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ ಮತ್ತು ಜಮ್ಮು-ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಹೇಳಿದ್ದಾರೆ.

ಪ್ರಧಾನಮಂತ್ರಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸಭೆಯಲ್ಲಿ ಕಾಂಗ್ರೆಸ್‌ನ ಗುಲಾಮ್ ನಬಿ ಆಜಾದ್ ಸೇರಿದಂತೆ ವಿವಿಧ ನಾಯಕರು ಮಾಡಿದ ಪ್ರಮುಖ ಬೇಡಿಕೆಗಳಲ್ಲಿ ರಾಜಕೀಯ ಕೈದಿಗಳ ಬಿಡುಗಡೆಯೂ ಒಂದಾಗಿದೆ.

ವಾಸ್ತವವಾಗಿ, ಗುರುವಾರ ನಡೆದ ಸಭೆಗೂ ಮುನ್ನ ಪಿಡಿಪಿಯ ನಯೀಮ್ ಅಖ್ತರ್ ಮತ್ತು ಸರ್ತಾಜ್ ಮಡ್ನಿ ಅವರಂತಹ ಹಲವಾರು ರಾಜಕೀಯ ಬಂಧಿತರನ್ನು ಕಳೆದ ವಾರ ಬಿಡುಗಡೆ ಮಾಡಲಾಯಿತು.

ಅಖ್ತರ್ ಅವರನ್ನು 2019ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು ಮತ್ತು ಜೂನ್ 2020 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಅವರ ವಿರುದ್ದ ಪಿಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮತ್ತೆ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಮಾಜಿ ಸಿಎಂ ಮೆಹಬೂಬಾ ಮುಫ್ತಿಯವರ ಚಿಕ್ಕಪ್ಪ ಮಡ್ನಿ ಅವರನ್ನು ಆರು ತಿಂಗಳ ಬಂಧನದ ನಂತರ ಬಿಡುಗಡೆ ಮಾಡಲಾಯಿತು ಮತ್ತು ಒಂದು ದಿನದ ನಂತರ ಅಖ್ತರ್ ಅವರನ್ನು ಸಹ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ: ದೇಶದ್ರೋಹ ಪ್ರಕರಣ: ನಿರ್ಮಾಪಕಿ ಅಯಿಷಾ ಸುಲ್ತಾನಗೆ ನಿರೀಕ್ಷಣಾ ಜಾಮೀನು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights