ದೇಶದ್ರೋಹ ಪ್ರಕರಣ: ನಿರ್ಮಾಪಕಿ ಅಯಿಷಾ ಸುಲ್ತಾನಗೆ ನಿರೀಕ್ಷಣಾ ಜಾಮೀನು!

ಒಕ್ಕೂಟ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ದೇಶದ್ರೋಹ ಪ್ರಕರಣವನ್ನು ಎದುರುಸುತ್ತಿರುವ ಲಕ್ಷದ್ವೀಪದ ಸಿನಿಮಾ ನಿರ್ಮಾಪಕಿ ಅಯಿಷಾ ಸುಲ್ತಾನ ಅವರಿಗೆ ಕೇರಳ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿದೆ.

ಒಕ್ಕೂಟ ಸರ್ಕಾರವು ಲಕ್ಷದ್ವೀಪದಲ್ಲಿ ನೂತನ ಆಡಳಿತಾಧಿಕಾರಿಯನ್ನುತನ್ನ ‘ಜೈವಿಕ ಅಸ್ತ್ರ’ದಂತೆ ಬಳಸಿಕೊಳ್ಳುತ್ತಿದೆ ಎಂದು ಮಲಯಾಳಂ ಟಿವಿ ಚಾನೆಲ್‌ ಒಂದರಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಆಧಾರದ ಮೇಲೆ ಬಿಜೆಪಿ ಅಧ್ಯಕ್ಷ ಸಿ. ಅಬ್ದುಲ್ ಖಾದರ್ ಹಾಜಿ ಅವರು ನೀಡಿದ ದೂರನ್ನು ಆಧರಿಸಿಲಕ್ಷದ್ವೀಪ ಪೊಲೀಸರು ಆಯಿಷಾ ವಿರುದ್ದ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದರು.

ಈ ಪ್ರಕರಣದಲ್ಲಿ ತಮ್ಮನ್ನು ಬಂಧಿಸದಂತೆ ಆಯಿಷಾ ಅವರು ಕೇರಳ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿದ್ದರು. ಈ ಹಿಂದೆ ಅರ್ಜಿ ವಿಚಾರಣೆ ನಡೆಸಿ ಅಂತಿಮ ಆದೇಶವನ್ನು ಕಾಯ್ದಿರಿಸಿದ್ದ ಹೈಕೋರ್ಟ್‌, ಒಂದು ವಾರ ಬಂಧನದಿಂದ ರಕ್ಷಣೆ ನೀಡಿತ್ತು.  ಇಂದು ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್‌, ಆಯಿಷಾ ಸುಲ್ತಾನ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ.

ಆಯಿಷಾ ಸುಲ್ತಾನ ಅವರು ಟಿವಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಶೂನ್ಯ ಕೊರೊನಾವಿದ್ದ ಪ್ರದೇಶದಲ್ಲಿ ದಿನಕ್ಕೆ ನೂರು ಪ್ರಕರಣಗಳು ವರದಿಯಾಗುತ್ತಿವೆ. ಒಕ್ಕೂಟ ಸರ್ಕಾರ ಹೊಸದಾಗಿ ನೇಮಕಮಾಡಿದ್ದ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ಪ್ರಯೋಗಿಸಿದ್ದು ‘ಜೈವಿಕ ಅಸ್ತ್ರ’ ರೀತಿಯಲ್ಲಾಗಿದೆ. ನನಗೆ ಸ್ಪಷ್ಟವಾಗಿ ಹೇಳಲು ಸಾಧ್ಯ, ಒಕ್ಕೂಟ ಸರ್ಕಾರವು ಕೊರೊನಾವನ್ನು ಜೈವಿಕ ಅಸ್ತ್ರವಾಗಿ ಪ್ರಯೋಗಿಸಿದೆ” ಎಂದು ಹೇಳಿದ್ದರು.

ಇದನ್ನೂ ಓದಿ: ತಮ್ಮ ವಿರುದ್ದದ ಪ್ರಕರಣವನ್ನು ಬಿಜೆಪಿ ಮತ್ತಷ್ಟು ಜಟಿಲಗೊಳಿಸುತ್ತಿದೆ: ಲಕ್ಷದ್ವೀಪದ ನಿರ್ಮಾಪಕಿ ಆಯಿಷಾ ಸುಲ್ತಾನಾ

ಆಯಿಷಾ ಸುಲ್ತಾನ ಅವರ ಹೇಳಿಕೆಯನ್ನು ವಿವಾದವನ್ನಾಗಿಸಿದ ಬಿಜೆಪಿ ಅವರ ವಿರುದ್ದ ದೇಶದ್ರೋಹದ ಆರೋಪ ಹೊರಿಸಿ ದೂರು ನೀಡಿತ್ತು. ಅದರ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಮತ್ತು 153 ಬಿ (ದ್ವೇಷಪೂರಿತ ಭಾಷಣ) ಅಡಿಯಲ್ಲಿ ಲಕ್ಷದ್ವೀಪದ ಕವರತ್ತಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಆಯಿಷಾ ಸುಲ್ತಾನಾ ವಿರುದ್ದ ದೇಶದ್ರೋಹ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬಿಜೆಪಿಯ ಒಳಗೆ ಪ್ರತಿಭಟನೆ ಪ್ರಾರಂಭವಾಗಿ, ಹದಿನೈದು ನಾಯಕರು ಸೇರಿದಂತೆ ಹಲವು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. “ಪ್ರಸ್ತುತ ಆಡಳಿತಾಧಿಕಾರಿ ಪ್ರಫುಲ್‌ ಪಟೇಲ್ ಅವರ ಕ್ರಮಗಳು ಜನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ಜನರಲ್ಲಿ ತೀವ್ರ ಸಂಕಟವನ್ನು ಉಂಟುಮಾಡುತ್ತವೆ” ಎಂದು ಬರೆದಿದ್ದ ರಾಜಿನಾಮೆ ಪತ್ರದಲ್ಲಿ,  ಬಿಜೆಪಿಯ 12 ನಾಯಕರು ಸಹಿ ಮಾಡಿದ್ದರು.

ಇದನ್ನೂ ಓದಿ: ಲಕ್ಷದ್ವೀಪ: ನಟಿ, ನಿರ್ಮಾಪಕಿ ವಿರುದ್ದ ದೇಶದ್ರೋಹ ಕೇಸ್‌; ಬಿಜೆಪಿ ತೊರೆದ 15 ನಾಯಕರು!

ದ್ವೀಪಕ್ಕೆ ಹೊಸದಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿ ಪ್ರಫುಲ್ ಪಟೇಲ್‌‌ ದ್ವೀಪದ ಸಂಸ್ಕೃತಿಯನ್ನು ಹಾಳುಗೆಡವುತ್ತಿದ್ದಾರೆ ಮತ್ತು ತಮ್ಮ ಹಾಗೂ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ದ್ವೀಪದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದ್ವೀಪವಾಸಿಗಳು ಆರೋಪಿಸುತ್ತಿದ್ದಾರೆ.

ಅವರು ದ್ವೀಪದಲ್ಲಿ ಆಡಳಿತ ವಹಿಸಿಕೊಂಡ ನಂತರ ಮಾಡಿರುವ ಕೊರೊನಾ ಮಾರ್ಗಸೂಚಿಯ ಬದಲಾವಣೆ, ಮೀನುಗಾರರ ಗುಡಿಸಲು ತೆರವು, ಗೂಂಡಾ ಕಾಯ್ದೆ ಸೇರಿದಂತೆ ಜಾರಿ ಮತ್ತಿತರ ನಿರ್ಣಯಗಳ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಇದುವರೆಗೂ 23 ಅರ್ಜಿಗಳು ಸಲ್ಲಿಕೆಯಾಗಿವೆ.

ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಪರಿಚಯಿಸಿದ ಹೊಸ ನಿಯಮಗಳ ವಿರುದ್ದ, ಹಲವು ತಿಂಗಳಿನಿಂದ ದ್ವೀಪವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊಸ ನೀತಿಗಳು ದ್ವೀಪವಾಸಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಲಕ್ಷದ್ವೀಪದ ಕಾನೂನು ವ್ಯಾಪಿ ಕೇರಳದಿಂದ ಕರ್ನಾಟಕ ಹೈಕೋರ್ಟ್‌ಗೆ ಬದಲಾವಣೆಗೆ ಪ್ರಸ್ತಾಪ; ತೀವ್ರಗೊಂಡ ಆಕ್ರೋಶ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights